ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ
ಸಿಂದಗಿ: ಅಂಜುಮನ್ ಸಂಸ್ಥೆಯ ಸುಸಜ್ಜಿತ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ೨೫ಲಕ್ಷ ರೂ. ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅಂಜುಮನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ನ್ಯೂ ಎರಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೧೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಸಾಕ್ಷಿಯಾದ ಸಿಂದಗಿ ಪಟ್ಟಣ ಶಿಕ್ಷಣದ ಕಾಸಿ ಎಂದೇ ಹೆಸರು ವಾಸಿಯಾಗಿದೆ. ಪಟ್ಟಣದಲ್ಲಿ ಶಿಕ್ಷಣ ಕ್ರಾಂತಿ ಸಾರಿದ ಕೀರ್ತಿ ದಿ.ಎಂ.ಸಿ.ಮನಗೂಳಿ ಅವರಿಗೆ ಸಲ್ಲುತ್ತದೆ. ತಂದೆಯವರ ಆಶಯದಂತೆ ನಾನು ಕೂಡಾ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ಹೊಂದಿದೆ. ಯುವ ಪೀಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಇಲ್ಲದ ಜೀವನ ಕಗ್ಗತ್ತಲು ಇದ್ದಂತೆ. ಒಮ್ಮೆ ಕಳೆದುಕೊಂಡ ವಿದ್ಯಾರ್ಥಿ ಜೀವನ ಕೋಟಿ ಕೊಟ್ಟರು ಬಾರದು. ತಂದೆ-ತಾಯಿಗಳು ಮಗ ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ ಎಂಬ ಆಶಯವನ್ನಿಟ್ಟು ವಿದ್ಯಾಭ್ಯಾಸಕ್ಕೆ ಕಳುಹಿಸಿರುತ್ತಾರೆ. ವಿದ್ಯಾರ್ಥಿಗಳಾದ ತಾವು ತಮ್ಮ ತಂದೆ-ತಾಯಿಗಳು ಇಟ್ಟಿರುವ ಭರವಸೆ ಹುಸಿ ಹೋಗದಂತೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು. ದುಶ್ಚಟಗಳಿಂದ ದೂರ ಇರಬೇಕು ನಿಮ್ಮ ಉಡುಪು ಬೇರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಂಪೂರ ಪಿಎ ಗ್ರಾಮದ ಆರೂಢ ಮಠದ ನಿತ್ಯಾನಂದ ಮಹಾರಾಜರು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎನ್.ಎ.ದುದನಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ್ ಗಣಿಹಾರ್, ಶಿಕ್ಷಣ ಸಂಯೋಜಕ ಸುಧೀರ ಕಮತಗಿ, ನ್ಯೂ ಎರಾ ಶಾಲೆಯ ಅಧ್ಯಕ್ಷ ಎಂ.ಎಸ್ ಹಸಿರುಂಡಗಿ, ನಿರ್ದೇಶಕ ಝುಲ್ಪಿಕರ್ ಅಂಗಡಿ, ಮುಖ್ಯ ಶಿಕ್ಷಕಿ ಲೀಲಾ, ನಾಯಕ್, ಪ್ರಭುಲಿಂಗ ಲೋಣಿ ಸೇರಿದಂತೆ ಶಾಲೆಯ ಸಿಬ್ಬಂದಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದರು.

