ಯಡ್ರಾಮಿ-ಜೇವರ್ಗಿ ಅವಳಿ ತಾಲೂಕಿನ ಸಮಾವೇಶದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಯಡ್ರಾಮಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೀಕ್ಷ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಸಭೆ ಕರೆದು ಮಾಡುತ್ತೇವೆ ಎಂಬ ಆಶ್ವಾಸನೆ ನೀಡುತ್ತಿದ್ದಾರೆ ಹೊರತು ಸ್ಪಷ್ಟನೆ ನೀಡಿಲ್ಲ. ಅಧಿವೇಶನ ಮುಗಿಯುವುದರ ಒಳಗಾಗಿ ಒಂದು ಸ್ಪಷ್ಟತೆಗೆ ಬರಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಮೀಸಲಾತಿ ಚಳುವಳಿ ಪ್ರಾರಂಭ ಮಾಡಲಾಗುವದು ಎಂದು ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಯಡ್ರಾಮಿ ತಾಲೂಕಿನ ಕುಳಗೇರಿಯಲ್ಲಿ ರವಿವಾರದಂದು ರಾಷ್ಟ್ರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೂರ್ತಿ ಅನಾವರಣ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೋತ್ತಾಯಿಸಿ ಯಡ್ರಾಮಿ ಹಾಗೂ ಜೇವರ್ಗಿ ಅವಳಿ ತಾಲೂಕಿನ ಪ್ರಥಮ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸದ್ಯದಲ್ಲೆ ಲೋಕಸಭಾ ಚುನಾವಣೆ ನಡೆಯಲಿದ್ದು, ರಾಜ್ಯ ಸರ್ಕಾರ ಮೀಸಲಾತಿ ಬಗ್ಗೆ ಆದಷ್ಟು ಬೇಗ ನಿರ್ಣಯ ಕೈಗೊಂಡು ಜಾರಿಗೊಳಿಸಬೇಕು. ವಿಳಂಬವಾದಲ್ಲಿ ಕನಿಷ್ಟಪಕ್ಷ ಓಬಿಸಿ ಮೀಸಲಾತಿ ಒದಗಿಸಿಕೊಡಲು ಮುಂದಾಗಬೇಕು ಎಂದರು.
ಬ್ರಿಟಿಷ್ ಅಧಿಕಾರಿಗಳ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ ಇತಿಹಾಸ ಮುಚ್ಚುವಂತ ಕೆಲಸವಾಗಿದ್ದರಿಂದ ಬೆಳಗಾವಿ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು ಮುಂದೆ ಸಂಘಟನೆ ಮಾಡುವ ಮೂಲಕ ಬೆಳಕಿಗೆ ತರುವಂತಹ ಪ್ರಯತ್ನವಾಗಲಿ. ಕಲ್ಯಾಣ ಕರ್ನಾಟಕಕ್ಕೂ ಸಹ ಕಿತ್ತೂರು ರಾಣಿ ಚೆನ್ನಾಮ್ಮಾಜೀ ಅವರ ಅವಿನಾಭವ ಸಂಬಂದವಿದೆ. ಅಂದು ಬ್ರಿಟೀಷರ ವಿರುದ್ದ ಹೋರಾಟಕ್ಕೆ ಸುರಪೂರದ ವೆಂಕಟಪ್ಪ ನಾಯಕ ಅವರು ಸೈನಿಕರನ್ನು ಕಳುಹಿಸುವ ಮೂಲಕ ಸಹಾಯ ಮಾಡಿದ್ದರು. ಈಗ ಕಲ್ಯಾಣ ಕರ್ನಾಟಕದಲ್ಲಿ ಮೀಸಲಾತಿ ಹೋರಾಟಕ್ಕೆ ಕುಳಗೇರಿ ಗ್ರಾಮದ ಮೂಲಕ ಮುಂದಡಿಯಿಟ್ಟಂತಾಗಿದೆ. ಮಾರ್ಚ 10 ರಂದು ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದು, ಜಿಲ್ಲಾದ್ಯಂತ ಪ್ರತಿ ಹಳ್ಳಿಗಳಿಗೆ ಸಂಚರಿಸಿ ಸಂಘಟನೆ ಮಾಡಲು ನಿರ್ದರಿಸಲಾಗಿದೆ. ಸಮಾಜ ಭಾಂದವರು ಜಿಲ್ಲಾ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ವೀರಶೈವ ಲಿಂಗಾಯತ ನಿಗಮದ ಅದ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ, ಕೆಕೆಆರ್ಡಿಬಿ ಅದ್ಯಕ್ಷ ಶಾಸಕ ಡಾ.ಅಜಯಸಿಂಗ್,ರಾಮನಗೌಡ ಪಾಟೀಲ ಯತ್ನಾಳ,ಗ್ರಾಪಂ ಅದ್ಯಕ್ಷ ಶರಣಗೌಡ ಪಾಟೀಲ ಕುಳಕುಮಟಗಿ, ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಸಮಿತಿ ಅದ್ಯಕ್ಷ ಬಾಬುಗೌಡ ಪಾಟೀಲ ಕುಳಗೇರಿ, ಬಿ.ಟಿ.ಪಾಟೀಲ, ಬಿ.ಐ.ಪಾಟೀಲ, ಸಂತೋಷ ಪಾಟೀಲ ಡಂಬಳ, ಕಿರಣ ಕಟ್ಟಿಮನಿ, ರಾಜಶೇಖರ ಸಿರಿ, ಚಂದ್ರಶೇಖರ ಪುರಾಣಿಕ, ಮಲ್ಲನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಆನಂದ ದೇಶಮುಖ, ವಿಜಯಕುಮಾರ ಬಿರಾದಾರ ಸೊನ್ನ, ಬಾಪುಗೌಡ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ಹಲಕರ್ಟಿ ಇದ್ದರು.

