ಹಲವೆಡೆ ಅರ್ಧಕ್ಕೆ ನಿಂತ ಜೆಜೆಎಂ ಕಾಮಗಾರಿ | ಅಗೆದ ಸಿಸಿ ರಸ್ತೆ | ಸಂಚಾರಕ್ಕೆ ಸಂಚಕಾರ
*-ಜಿ ಎನ್ ಬೀರಗೊಂಡ (ಮುತ್ತು)*
ಢವಳಗಿ: ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಹಿನ್ನೆಲಿಯಲ್ಲಿ ಕೇಂದ್ರ ಸರಕಾರವು ಜಲ ಜೀವನ ಮಷಿನ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಡವಳಾರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಗ್ರಾಮಸ್ಥರ ಸುಗಮ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ.
ಈ ಯೋಜನೆಗಾಗಿ ಸರಕಾರ ಕೋಟಿ ಕೋಟಿ ಹಣ ವೆಚ್ಚಮಾಡಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚತ್ತಲೇ ಇದೆ. ಇದಕ್ಕೆ ಕಾರಣ ಎರಡು ವರ್ಷ ಕಳೆದರೂ ಜೆಜೆಎಂ ಕಾಮಗಾರಿಯು ಇಲ್ಲಿಯವರೆಗೂ ಗ್ರಾಮದಲ್ಲಿ ಸಂಪೂರ್ಣವಾಗಿಲ್ಲ. ಮತ್ತು ಆದ ಅಪೂರ್ಣ ಕಾಮಗಾರಿಯೂ ಸಂಪೂರ್ಣ ಕಳಪೆಮಟ್ಟದ್ದಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ತಾಲೂಕಿನ ಬಹುತೇಕ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಮಾಡಿದ ಕಾಮಗಾರಿಗೆ ಬಳಸಿದ ಸಲಕರಣೆಗಳು ಗುಣಮಟ್ಟವನ್ನು ಕಳೆದುಕೊಂಡಿದೆ. ಅಧಿಕಾರಿಗಳ ಸಹಕಾರದಿಂದ ಗುತ್ತಿಗೆದಾರರು ಅತ್ಯಂತ ಕಳಪೆ ಮಟ್ಟದಲ್ಲಿ ಕಾಮಗಾರಿ ಮಾಡಿದ್ದಾರೆ, ಇದರಿಂದಾಗಿ ಸರಕಾರದ ಕೋಟ್ಯಂತರ ಅನುದಾನ ದುರ್ಬಳಕೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಜೆಜೆಎಮ್ ಕಾಮಗಾರಿಗೆಗಾಗಿ ಶುದ್ಧವಾದ ಸಿಸಿ(ಕಾಂಕ್ರೆಟ್) ರಸ್ತೆಗಳನ್ನು ಹೊಡೆದು ಸಂಪೂರ್ಣ ನಾಶಪಡಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ಸಂಚಕಾರವಾಗಿದೆ. ರಾತ್ರಿಹೊತ್ತಿನಲ್ಲಿ ವೃದ್ದರಿಗೆ ಮತ್ತು ಚಿಕ್ಕಮಕ್ಕಳಿಗೆ ಮನೆಯಿಂದ ಹೋರಬರಲು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬರುವ ಪರಿಸ್ಥಿತಿ ಬಂದಿದೆ. ಬೈಕ್ ಸವಾರರಂತೂ ದಿನವಿಡಿ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎಷ್ಟೋಸಲ ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ಕೂಡಾ ನಡೆದಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ವಾಹನ ಸವಾರರು ಈ ಕಾಮಗಾರಿಗೆ ಮುಕ್ತಿಯಾದರೂ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.

