ಆಯ-ವ್ಯಯದಲ್ಲಿ ಬಸವನಬಾಗೇವಾಡಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಘೋಷಣೆ
– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ೧೨ ನೇ ಶಮಾತನದಲ್ಲಿ ಕಾಯಕ, ದಾಸೋಹ, ಸಮಾನತೆ ಸಂದೇಶ ಸಾರಿದ ವಿಶ್ವಗುರು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಪ್ರತ್ಯೇಕ ಪ್ರಾಧಿಕಾರ ಘೋಷಣೆ ಮಾಡಿದ್ದು ಸಮಸ್ತ ಬಸವಾಭಿಮಾನಿಗಳಿಗೆ, ಪ್ರತ್ಯೇಕ ಪ್ರಾಧಿಕಾರಕ್ಕೆ ಹೋರಾಟ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ತುಂಬಾ ಹರ್ಷ ಉಂಟು ಮಾಡಿದೆ.
ಈಗಾಗಲೇ ಸರ್ಕಾರ ಬಸವೇಶ್ವರರ ಕಾರ್ಯಕ್ಷೇತ್ರ ಬಸವ ಕಲ್ಯಾಣ, ಐಕ್ಯಕ್ಷೇತ್ರ ಕೂಡಲಸಂಗಮ ಸ್ಥಳಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರಗಳನ್ನು ರಚನೆ ಮಾಡುವ ಮೂಲಕ ಈಗಾಗಲೇ ಅಲ್ಲಿ ಅನೇಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ. ಅವರೆಡು ಕ್ಷೇತ್ರಗಳು ಈಗಾಗಲೇ ಅಭಿವೃದ್ಧಿ ಹೊಂದಿ ಜಗತ್ತಿನ ವಿವಿಧೆಡೆಗಳಿಂದ ಪ್ರವಾಸಿಗರು ಬಂದು ಹೋಗುವಂತಾಗಿದೆ. ಸರ್ಕಾರ ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯನ್ನು ಬಹಳ ವರ್ಷಗಳ ಹಿಂದೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿ ಈಗಾಗಲೇ ಅಭಿವೃದ್ಧಿ ಪಡಿಸಬೇಕಿತ್ತು. ಸಿಎಂ ಸಿದ್ದರಾಮಯ್ಯನವರು ಬಸವನಬಾಗೇವಾಡಿಗೆ ಒಂದು ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಖಂಡಿತ ಬಸವ ಜನಿಸಿದ ಬಸವನಬಾಗೇವಾಡಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡುವೆ ಎಂಬ ಮಾತನ್ನು ಹೇಳಿದ್ದನ್ನು ಕೊನೆಗೂ ಉಳಿಸಿಕೊಂಡಿದ್ದಾರೆ.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿನ ವಿವಿಧ ಸಂಘಟನೆಗಳು ಹೋರಾಟ ಮಾಡಿ ಅನೇಕ ದಿನಗಳ ಕಾಲ ಧರಣಿ ಮಾಡಿದ ಫಲವಾಗಿ ಬಸವನಬಾಗೇವಾಡಿಯನ್ನು ಆಗಿನ ಸಚಿವ ದಿ.ಬಿ.ಎಸ್.ಪಾಟೀಲ ಸಾಸನೂರ ಅವರು ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರ್ಪಡೆ ಮಾಡಿಸಿದ್ದರು. ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಸೇರ್ಪಡೆಗೊಂಡ ನಂತರ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರ, ಬಸವ ಜನಿಸಿ ಮನೆಯನ್ನು ಸರ್ಕಾರ ಬಸವಜನ್ಮ ಸ್ಮಾರಕದ ನಿರ್ಮಾಣದ ಕಾರ್ಯ ನಿವೃತ್ತ ಐಎಎಸ್ ಅಽಕಾರಿ ಡಾ.ಎಸ್.ಎಂ. ಜಾಮದಾರ ಅವರ ನೇತೃತ್ವದಲ್ಲಿ ಜರುಗಿತು. ನಂತರ ಅಷ್ಟಾಗಿ ಅಭಿವೃದ್ಧಿಯಾಗದೇ ಇರುವದರಿಂದಾಗಿ ರಾಷ್ಟ್ರೀಯ ಬಸವಸೈನ್ಯ, ನಂದಿ ಸಾಹಿತ್ಯ ವೇದಿಕೆ, ಕರವೇ, ವಿವಿಧ ಡಿಎಸ್ಎಸ್ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು, ಮುಖಂಡರು ಬಸವನಬಾಗೇವಾಡಿಗೆ ಪ್ರತ್ಯೇಕ ಪ್ರಾಧಿಕಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದವು. ಈಗ ಅವರೆಲ್ಲರ ಬೇಡಿಕೆ ಈಡೇರಿದ ಪರಿಣಾಮ ಅವರೆಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ. ಮುಂಬರುವ ದಿನಗಳಲ್ಲಿ ಬಸವ ಜನಿಸಿದ ಬಸವನಬಾಗೇವಾಡಿಯಲ್ಲಿ ಹೆಚ್ಚಿನ ಕಾರ್ಯಗಳು ಆಗುವ ಆಶಾಭಾವ ಬಸವ ಭಕ್ತರಿಗೆ ಮೂಡಿಸಿದೆ.
ಬಸವೇಶ್ವರ ಜನ್ಮಸ್ಥಳದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡುವಲ್ಲಿ ಸಚಿವ ಶಿವಾನಂದ ಪಾಟೀಲರು ಸಿಎಂ ಅವರಿಗೆ ಪತ್ರ ನೀಡುವ ಮೂಲಕ ಬಜೆಟ್ನಲ್ಲಿ ಘೋಷಣೆಯಾಗುವಂತೆ ಮಾಡಿದ್ದು ಸ್ವಾಗತಾರ್ಹ. ಇದು ನಮ್ಮೆಲ್ಲರಿಗೂ ಸಂತಸ ತಂದಿದೆ. ನಾವು ಸಚಿವ ಶಿವಾನಂದ ಪಾಟೀಲ ಅವರನ್ನು ಬೆಂಗಳೂರಿನಲ್ಲಿ ಅಭಿನಂದಿಸಿರುವುದಾಗಿ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಕಳೆದ ೨೨ ವರ್ಷಗಳಿಂದ ನಾವು ರಾಷ್ಟ್ರೀಯ ಬಸವಸೈನ್ಯದಿಂದ ಬಸವಬಾಗೇವಾಡಿಗೆ ಪ್ರತ್ಯೇಕ ಪ್ರಾಧಿಕಾರಕ್ಕೆ ಅನೇಕ ಸರ್ಕಾರಗಳ ಸಿಎಂ, ವಿವಿಧ ಸಚಿವರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವು. ನಮ್ಮ ಬೇಡಿಕೆಗೆ ಯಾರೂ ಇದುವರೆಗೂ ಸ್ಪಂದಿಸಿರಲಿಲ್ಲ. ಈಗ ಸಿಎಂ ಸಿದ್ದರಾಮಯ್ಯನವರು ನಮ್ಮ ಬೇಡಿಕೆಗೆ ಸ್ಪಂದಿಸಿ ಅದನ್ನು ಸಾಕಾರ ಮಾಡುತ್ತಿರುವುದು ಸಿಎಂ,ಡಿಸಿಎಂ, ಸಚಿವ ಶಿವಾನಂದ ಪಾಟೀಲರಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

