ಜಿಲ್ಲಾ ಮಟ್ಟದ ಕುಡಿವ ನೀರಿನ ಪರಿಸ್ಥಿತಿ ನಿರ್ವಹಣಾ ಸಭೆಯಲ್ಲಿ ಸಚಿವ ಡಾ. ಎಂ.ಬಿ.ಪಾಟೀಲ ಸೂಚನೆ
ವಿಜಯಪುರ: ಜಿಲ್ಲೆ ಸೇರಿದಂತೆ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತುರ್ತಾಗಿ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸೂಚನೆ ನೀಡಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಾದ್ಯಂತ ಬರಗಾಲವಿರುವುದರಿಂದ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಬಂದ ಕಡೆಗಳಲ್ಲಿ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ವಹಿಸಬೇಕು. ಬೊರವೆಲ್ ಕೊರೆಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುವುದರಿಂದ ಪರ್ಯಾಯವಾಗಿ ಇದ್ದ ಮೂಲಗಳಿಂದಲೇ ಟ್ಯಾಂಕರ್ ಮೂಲಕ ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಯನ್ನು ತುಂಬಿಸಲು ತಾತ್ಕಾಲಿಕವಾಗಿ ಸ್ಟೋರೇಜ್ ನಿರ್ಮಿಸಿಕೊಂಡು ಕೆರೆ ತುಂಬಿಸಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸಬೇಕು. ವಿಜಯಪುರ ನಗರದಲ್ಲಿ ಜಲಮಂಡಳಿಯಿಂದ ಕೊರೆಯಿಸಲಾದ ೨೦ ಬೊರವೆಲ್‌ಗಳಿಗೆ ಮಾಸಾಂತ್ಯದೊಳಗೆ ತುರ್ತಾಗಿ ಮೋಟರ್ ಅಳವಡಿಸಿ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಸಣ್ಣ ಪುಟ್ಟ ದುರಸ್ತಿಗಳಿರುವ ಬೊರವೆಲ್‌ಗಳ ದುರಸ್ತಿಗೆ ಕ್ರಮ ವಹಿಸಿ ನೀರು ಒದಗಿಸಲು ಮುಂದಾಗಬೇಕು. ಈಗಾಗಲೇ ೮ ಖಾಸಗಿ ಬೊರವೆಲ್‌ಗಳು ನೀಡಲು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ನಗರದ ಆಯಾ ವಾರ್ಡಗಳಲ್ಲಿ ಖಾಸಗಿ ಬೊರವೆಲ್‌ಗಳನ್ನು ಬಾಡಿಗೆ ಮೇಲೆ ಪಡೆದು ನೀರು ಒದಗಿಸಲು ಕ್ರಮ ವಹಿಸಬೇಕು. ಈಗಾಗಲೇ ಗುರುತಿಸಲಾದ ೨೮ ಸರ್ಕಾರಿ ಹಾಗೂ ಖಾಸಗಿ ಭಾವಿಗಳ ನೀರಿನ ಬಳಕೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಮೋಟರ್-ಪಂಪ್ ಅಳವಡಿಸಿ ಕುಡಿಯಲು ನೀರು ಯೋಗ್ಯವಿಲ್ಲದಿದ್ದಲ್ಲಿ ಭಾವಿಯ ನೀರು ಗೃಹಬಳಕೆ ಉಪಯೋಗ ಮಾಡಲು ಕ್ರಮ ವಹಿಸಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ನಗರದಲ್ಲಿರುವ ಸರ್ಕಾರಿ ಭಾವಿ ಹಾಗೂ ಬೊರವೆಲ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ದುರಸ್ತಿ ಇರುವ ಬೊರವೆಲ್‌ಗಳನ್ನು ದುರಸ್ತಿಗೊಳಿಸಬೇಕು. ಭಾವಿಗಳನ್ನು ಸ್ವಚ್ಛಗೊಳಿಸಿ ನೀರಿನ ಸದ್ಭಳಕೆಗೆ ಮುಂದಾಗಬೇಕು. ಆಯಾ ವಾರ್ಡಗಳಲ್ಲಿರುವ ಬೊರವೆಲ್, ಭಾವಿಗಳನ್ನು ಸ್ವಚ್ಛಗೊಳಿಸಿದ್ದಲ್ಲಿ ವಾರ್ಡಿನ ನೀರಿನ ಸಮಸ್ಯೆಗೆ ಪರಿಹಾರ ಸಿಗುವುದರಿಂದ ಈ ತಿಂಗಳ ೨೮ರೊಳಗೆ ಲಭ್ಯವಿರುವ ಎಲ್ಲ ಕೊಳವೆಭಾವಿ- ಭಾವಿಗಳ ನೀರಿನ ಬಳಕೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಕುಡಿಯುವ ನೀರು ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ವಿಪತ್ತು ಪರಿಹಾರ ನಿಧಿಯಲ್ಲಿ ೧೮ ಕೋಟಿ ರೂ. ಇದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ, ಪೈಪಲೈನ್, ಬಾಡಿಗೆ ಪಾವತಿ ಸೇರಿದಂತೆ ಈ ಹಣವನ್ನು ಬಳಕೆ ಮಾಡಿಕೊಂಡು ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಮಹಾನಗರ ಪಾಲಿಕೆ ಮಹಾಪೌರ ಶ್ರೀಮತಿ ಮಾಹೆಜಬಿನ್ ಹೊರ್ತಿ, ಉಪಮಹಾಪೌರ ದಿನೇಶ್ ಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಸೇರಿದಂತೆ ಮಹಾನಗರ ಪಾಲಿಕೆ ವಿವಿಧ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

