ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣಗೊಳಿಸಿದ ಸಚಿವ ಎಂ.ಬಿ. ಪಾಟೀಲ ಅಭಿಮತ
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿಯ ಇಂಗಳೇಶ್ವರಲ್ಲಿ ಜನಿಸಿದ ಅಣ್ಣ ಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುವ ಮೂಲಕ ಬಸವಣ್ಣನವರಿಗೆ ಗೌರವ ಸೂಚಿಸಲಾಗಿದೆ. ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಮೂಲ ಸೌಲಭ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣಗೊಳಿಸಿ, ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಮನವಿ ಸಲ್ಲಿಸಿದ ಕ್ಷಣವೇ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲು ಅವರು ಒಪ್ಪಿಗೆ ಸೂಚಿಸಿದರು. ೧೨ನೇ ಶತಮಾನದಲ್ಲಿ ಬಸವಣ್ಣ ಅವರು ಪ್ರತಿಪಾದಿಸಿದ ಜಾತಿರಹಿತ ಸಮಾಜ, ಕಾಯಕದ ಮಹತ್ವ, ವರ್ಗರಹಿತ ಸಮಾಜದ ಕನಸು ಕಂಡು ನಮ್ಮ ನಡೆನುಡಿಗಳಲ್ಲಿ ಭಿನ್ನತೆ ಇರಬಾರದು ಎಂಬುದನ್ನು ಬಸವಾದಿ ಪ್ರಮಥರು ತಮ್ಮ ವಚನದ ಮೂಲಕ ಸಾರಿದ್ದಾರೆ. ಅವರ ಪ್ರತಿಪಾದಿಸಿದ ಉದಾತ್ತ ತತ್ವಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಇಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ ಸರ್ಕಾರವು ಅನುಮೋದಿಸಿರುವ ಶ್ರೀ ಬಸವಣ್ಣನವರ ಭಾವಚಿತ್ರದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ನಮೂದಿಸಿ ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಮೇಲು-ಕೀಳು ಭಾವನೆ ತೆಗೆದು ಹಾಕಿ, ಮೂಢನಂಬಿಕೆ ವಿರೋಧಿಸಿ, ಮಹಿಳೆಯರಿಗೆ ಸಮಾನತೆ ನೀಡಿ ಸಾಮಾಜಿಕ ನ್ಯಾಯ ಒದಗಿಸಿ ಅನುಭವ ಮಂಟಪದ ಮೂಲಕ ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಪರಿಕಲ್ಪನೆ ನೀಡಿದವರು ಬಸವಾದಿ ಪ್ರಮಥರು. ಎಲ್ಲಾ ಕಾಯಕ ವರ್ಗದವರನ್ನು ಒಂದೆಡೆ ಸೇರಿಸಿ ಆಡು ಭಾಷೆಯಲ್ಲಿಯೇ ವಚನ ಚಳುವಳಿಯ ಮೂಲಕ ಸಮಾಜವನ್ನು ತಿದಿ ಎಲ್ಲರೂ ಸರಿಸಮಾನರು ಎಂದು ಹೇಳಿ ಅದನ್ನು ಅನುಷ್ಠಾನಕ್ಕೆ ತಂದವರು ಬಸವಾದಿ ಶರಣರು ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಶ್ರೀಮತಿ ಮಾಹೆಜಬೀನ್ ಹೊರ್ತಿ, ಉಪ ಮಹಾಪೌರ ದಿನೇಶ ಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ್ ಸೌದಾಗರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

