ವಿವಿಧ ಗ್ರಾಮಗಳ ರೈತರು ಜಾನುವಾರಗಳೊಂದಿಗೆ ಕೆರೆಯಲ್ಲಿ ಧರಣಿ ಕುಳಿತು ವಿನೂತನ ಪ್ರತಿಭಟನೆ!
ದೇವರಹಿಪ್ಪರಗಿ: ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕೂಡಲೇ ನೀರು ಹರಿಸಿ, ಕೆರೆ ತುಂಬಿಸುವುದರ ಮೂಲಕ ರೈತ ಸಮುದಾಯದ ನೆರವಿಗೆ ಧಾವಿಸುವಂತೆ ಆಗ್ರಹಿಸಿ ಮುಳಸಾವಳಗಿ, ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಕೆರೆಯಲ್ಲಿ ಜಾನುವಾರಗಳೊಂದಿಗೆ ಧರಣಿ ಕುಳಿತು ವಿನೂತನ ಪ್ರತಿಭಟನೆ ಕೈಗೊಂಡರು.
ಮತಕ್ಷೇತ್ರದ ಇಂಗಳಗಿ, ನಿವಾಳಖೇಡ, ಮುಳಸಾವಳಗಿ ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಗ್ರಾಮಗಳು ರೈತರು ಶನಿವಾರ ಇಂಡಿ ರಸ್ತೆಯಲ್ಲಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಗೆ ತೆರಳಿ ಸುಡು ಬಿಸಿಲಿನಲ್ಲಿ ಜಾನುವಾರಗಳೊಂದಿಗೆ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಹಾಗೂ ಸಾಹೇಬಗೌಡ ರೆಡ್ಡಿ ಮಾತನಾಡಿ, ಚಿಮ್ಮಲಗಿ ಕಾಲುವೆಗೆ ನೀರು ಹರಿಸಲಾಗಿದ್ದು, ಕೆರೆಗಳಲ್ಲಿ ಶೇ ೬೦ ರಷ್ಟು ನೀರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವಿಕವಾಗಿ ಕೆರೆಗಳಿಗೆ ಬಂದು ನೋಡಿದರೆ ಶೇ೨ ರಷ್ಟು ನೀರಿಲ್ಲ. ಕಳೆದ ಎರಡು ತಿಂಗಳುಗಳಿಂದ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಕಾಲುವೆಯ ಮೂಲಕ ಕೆರೆ ತುಂಬುತ್ತಿಲ್ಲ. ಇದರಿಂದ ಈ ಕೆರೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು, ಜಾನುವಾರಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಜಿಲ್ಲೆಯ ಇತರ ತಾಲ್ಲೂಕುಗಳ ಕಾಲುವೆಗಳಲ್ಲಿ ನಿರಂತರ ನೀರು ಹರಿಸಲಾಗಿದೆ ಆದರೆ ಚಿಮ್ಮಲಗಿ ಕಾಲುವೆಯನ್ನು ಸಂಪೂರ್ಣ ಮರೆಯಲಾಗಿದೆ. ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿ, ಹೀಗೆ ಈ ತಿಂಗಳ ಕೊನೆಯಲ್ಲಿ ನೀರು ಹರಿಸಿ ನಮ್ಮ ಕೆರೆ ತುಂಬದೇ ಇದ್ದರೆ ದೇವರಹಿಪ್ಪರಗಿಯ ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ನಾಗರಾಜ ಕಬಾಡಗಿ, ಲಿಂಗರಾಜ ಸಂಗೋಗಿ, ತಿಪ್ಪಣ್ಣ ತಳವಾರ, ಭೈರಪ್ಪ ಬಿರಾದಾರ, ಪ್ರಕಾಶ ಬಂಥನಾಳ, ವಿಶ್ವನಾಥ ನೆಗಿನಾಳ, ಮಲ್ಲು ಕಬಾಡಗಿ, ಮಹಾದೇವಪ್ಪ ಹಳ್ಳಿ, ಪಿಟ್ಟಪ್ಪ ಗಣಜಲಿ, ಪರಶುರಾಮ ಸಂಗೋಗಿ, ಬಸವರಾಜ ವಡ್ಡೋಡಗಿ ಸೇರಿದಂತೆ ಮಹಿಳೆಯರು ಇದ್ದರು.

