ಆದೇಶ ಪತ್ರದಲ್ಲಿ ಕನ್ನಡದ ಕೊಲೆ! | ಲೋಪದೋಷ ಗಮನಿಸದ ಡಿಡಿಪಿಐ
ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ನೀಲಿ ತಿಲಕ, ನೀಲಿ ಶಾಲು ಧರಿಸಲು ನಿರಾಕರಿಸಿದ ಶಿಕ್ಷಕ ಶಿವಾನಂದ ಕೆಳಗಿನಮನಿ ಅವನನ್ನು ಕರ್ತವ್ಯದಿಂದ ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಕಾರ್ಯಕರ್ತರು ಬಿಇಒ ಕಚೇರಿ ಆವರಣದಲ್ಲಿ ಶುಕ್ರವಾರ ಅಹೋರಾತ್ರಿ ಧರಣಿ ಆರಂಭಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಿಇಒ ವಸಂತ ರಾಠೋಡ ಹಾಗೂ ಪಿಐ ವಿಜಯಕುಮಾರ ಮುರಗುಂಡಿ ಆಗಮಿಸಿ ಪ್ರತಿಭಟನೆ ಕೈ ಬಿಡುವಂತೆ ಪ್ರತಿಭಟನಾ ನಿರತರನ್ನು ಮನ ಒಲಿಸಲು ಪ್ರಯತ್ನಿಸಿದರು, ಪಟ್ಟು ಬಿಡದ ಪ್ರತಿಭಟನಾಕಾರರು ಶಿಕ್ಷಕ ಶಿವಾನಂದ ಕೆಳಗಿನಮನಿಯನ್ನು ಕೂಡಲೇ ಅಮಾನತ್ತುಗೊಳಿಸಿ, ಇಲ್ಲವಾದರೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು, ತಡರಾತ್ರಿವರೆಗೂ ಪ್ರತಿಭಟನೆ ಮುಂದುವರೆಯಿತು,
ಬಿಇಓ ವಸಂತ ರಾಠೋಡ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್ ಎಸ್ ನಾಗೂರ ಅವರು ಕೆಲ ಹೊತ್ತು ದೂರವಾಣಿ ಮೂಲಕ ಚರ್ಚಿಸಿ ಶಿಕ್ಷಕನನ್ನು ಅಮಾನತ್ತುಗೊಳಿಸುವ ತಿರ್ಮಾನಕ್ಕೆ ಬಂದು ರಾತ್ರಿ ಸುಮಾರು ೧೧ ಗಂಟೆ ಹೊತ್ತಿಗೆ ಶಿಕ್ಷಕನನ್ನು ಅಮಾನತ್ತುಗೊಳಿಸಿ ಆದೇಶಿಸಿದರು. ಬಿಇಓ ವಸಂತ ರಾಠೋಡ ಅವರು ಆದೇಶ ಪತ್ರವನ್ನು ಪ್ರತಿಭಟನಾ ನಿರತರಿಗೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುರಾಜ ಗುಡಿಮನಿ, ತಾಲೂಕಾ ಸಂಚಾಲಕ ಯಮನೂರಿ ಚಲವಾದಿ, ವಿದ್ಯಾಧರ ದೊಡಮನಿ, ಬಸವರಾಜ ದೊಡಮನಿ, ಯಲ್ಲಪ್ಪ ಪಡಸಲಗಿ, ಗಂಗಾಧರ ಆರೇರ್, ಚಂದ್ರಶೇಖರ ನಾಲತವಾಡ, ಯಲ್ಲಪ್ಪ ಕಣಕಾಲ, ಶರಣಪ್ಪ ನಾಲತವಾಡ, ಚಂದ್ರಶೇಖರ ನಡಗೇರಿ, ರವಿ ಮ್ಯಾಗೇರಿ, ಸೇರಿದಂತೆ ಮುಂತಾದವರು ಇದ್ದರು.

