ಸಚಿವ ಶಿವಾನಂದ ಪಾಟೀಲರ ಮನವಿಗೆ ಸಿಎಂ ಸ್ಪಂದನೆ | ಹಲವು ಯೋಜನೆ ಪ್ರಕಟ

ಬೆಂಗಳೂರು: ಬಸವಣ್ಣನ ಜನ್ಮಸ್ಥಳ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಅವರ ಮನವಿಗೆ ಸ್ಪಂದಿಸಿ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.
ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ, ಬಸವನ ಬಾಗೇವಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶೀತಲಗೃಹ ಘೋಷಿಸಲಾಗಿದೆ. ಮುಳವಾಡ ಏತ ನೀರಾವರಿಯ ಮೂರನೇ ಹಂತದ ಯೋಜನೆಗಳಿಗೂ ಅನುದಾನ ಒದಗಿಸಲಾಗಿದೆ. ಎಪಿಎಂಸಿಗಳ ಎಲ್ಲ ಕಾರ್ಯಚಟುವಟಿಕೆಗಳನ್ನು ೧೦ ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೈಜ್ ಮಾಡಲು, ಹಲವು ಎಪಿಎಂಸಿಗಳಲ್ಲಿ ಬಯೋ ಸಿಎನ್‌ಜಿ ಪ್ಲಾಂಟ್ ಸ್ಥಾಪನೆ ಮಾಡಿ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಎಲ್ಲ ಎಪಿಎಂಸಿಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ, ಪೆಟ್ರೋಲ್ ಬಂಕ್‌ಗಳ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಎಪಿಎಂಸಿಗಳನ್ನು ಬಲಪಡಿಸುವ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಉತ್ತಮ ಆದಾಯ ಗಳಿಸಲು ನೆರವಾಗುವಂತೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಎಪಿಎಂಸಿಗಳೀಗೆ ಅನುದಾನ ಒದಗಿಸಲು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಸಮಿತಿಗಳಿಂದ ವಂತಿಗೆ ಪಡೆಯುವ ಮೂಲಕ ಮಾರುಕಟ್ಟೆ ಅಭಿವೃದ್ಧಿ ಸಹಾಯ ನಿಧಿ ಸ್ಥಾಪಿಸಲು ಕಾನೂನು ರಚನೆ ಮಾಡಲಾಗುವುದು. ಬೆಂಬಲ ಬೆಲೆ ಯೋಜನೆ ಜಾರಿಗೆ ಶಾಸನಾತ್ಮಕ ಬೆಂಬಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಕಬ್ಬು ಬೆಳೆಗಾರರ ಹಿತರಕ್ಷಣೆ ಮತ್ತು ತೂಕದಲ್ಲಿನ ಮೋಸ ತಡೆಗೆ ಎಲ್ಲ ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿಗಳ ಮೂಲಕವೇ ಬ್ರಿಡ್ಜ್ ಸ್ಥಾಪನೆ ಘೋಷಿಸಲಾಗಿದೆ. ರಾಜ್ಯ ಉಗ್ರಾಣ ನಿಗಮದಲ್ಲಿ ಬಳಕೆಯಾಗದೇ ಇರುವ ಉಗ್ರಾಣಗಳ ಸಾಮರ್ಥ್ಯ ಬಳಸಿ ಸಾರ್ವಜನಿಕ ಸಹಭಾಗತ್ವದಲ್ಲಿ ಶೀತಲಗೃಹಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ೨೦೨೪-೨೯ರ ಅವಧಿಗೆ ಹತ್ತು ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ೨ ಲಕ್ಷ ಉದ್ಯೋಗ ಸೃಷ್ಟಿ ಗುರಿಯೊಂದಿಗೆ ಹೊಸ ಜವಳಿ ನೀತಿ ರಚನೆಗೆ ನಿರ್ಧರಿಸಲಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ ಸಾವಿರ ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸಲು ಉದ್ದೇಶಿಸಿದ್ದು, ಇದರಿಂದ ಒಂದು ಲಕ್ಷ ಜನರಿಗೆ ನೇರ ಹಾಗೂ ೨ ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ ೫೦ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆ ಸಂಘಟಿಸಿ ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯ ಒಳಗೊಂಡಂತೆ ಜೀನ್ಸ್ ಅಪರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ ಘೋಷಣೆ ಮಾಡಲಾಗಿದೆ. ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಂಜನಗೂಡು ತಾಲೂಕು ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.