ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಒತ್ತಾಯ
ಚಿತ್ರದುರ್ಗ: ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳ ಜಾಹೀರಾತು ದರವನ್ನು ಕೂಡಲೇ ಹೆಚ್ಚಿಸಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, 2023 ರ ಏಪ್ರಿಲ್ 1 ರಿಂದ ಜಾಹೀರಾತು ದರ ಹೆಚ್ಚಿಸಬೇಕಾಗಿತ್ತು. ಆದರೆ ಸರ್ಕಾರ ಜಾಹೀರಾತು ದರ ಹೆಚ್ಚಿಸಿಲ್ಲ. ಹೊಸ ಜಾಹೀರಾತು ನೀತಿ ಸಹ ಜಾರಿಯಾಗಿಲ್ಲ.ಹಾಗಾಗಿ ಈ ಕೂಡಲೇ ಸರ್ಕಾರ ಶೇಕಡ 12 ರಷ್ಟು ಜಾಹೀರಾತು ದರವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಜಾಹೀರಾತುಗಳನ್ನು ಐ.ಎನ್.ಎಸ್ ಖಾಸಗಿ ಜಾಹೀರಾತು ಏಜೆನ್ಸಿಗಳ ಮೂಲಕ ಬಿಡುಗಡೆ ಮಾಡುವುದನ್ನು ದಿನಾಂಕ: 01-04-2024 ರಿಂದ ನಿಲ್ಲಿಸಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಲಾಗಿದೆ. ಆಯುಕ್ತರು ಅದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಜಾಹೀರಾತುಗಳನ್ನು ಪತ್ರಿಕೆಗಳಿಗೆ ನೇರವಾಗಿ ಇಲಾಖೆಯೇ ನೀಡುವಂತಾಗಬೇಕು. ಏಜೆನ್ಸಿಯವರು ಜಾಹೀರಾತು ಪ್ರಕಟಿಸಿ ಹತ್ತಾರು ತಿಂಗಳಾದರು ಹಣ ಪಾವತಿಸುವುದಿಲ್ಲ. ಹಾಗಾಗಿ ಖಾಸಗಿ ಏಜೆನ್ಸಿಗಳಿಂದ ಜಾಹೀರಾತುಗಳನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಹೇಳಿದರು.
ರಾಜ್ಯಮಟ್ಟದ ಪತ್ರಿಕೆಗಳಿಗೆ ನೀಡುವ ಜಾಹೀರಾತುಗಳನ್ನ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಸಂಘದಿಂದ ರೂಪಿಸಬೇಕಾಗಿದೆ. ಸರ್ಕಾರದ ಜಾಹೀರಾತು ನೀತಿಯಲ್ಲಿ ತಿಳಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಯ ವಾರ್ತಾ ಅಧಿಕಾರಿಗಳು ಸ್ಥಳೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಟೆಂಡರ್ ಜಾಹೀರಾತುಗಳನ್ನು ಟೆಂಡರ್ ಮೌಲ್ಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡಬೇಕು. ಇಲಾಖೆಯವರು ಹತ್ತಾರು ಕಾಮಗಾರಿಗಳ ಮೊತ್ತವನ್ನು ತಿಳಿಸದೆ ನೀಡು ಟೆಂಡರ್ ಜಾಹೀರಾತುಗಳನ್ನು ವಾರ್ತಾ ಅಧಿಕಾರಿಗಳು ಪರಿಶೀಲಿಸಬೇಕು. ಜಾಹೀರಾತಿನ ಮೊತ್ತವನ್ನು ಪರಿಗಣಿಸಿ ಜಾಹೀರಾತುಗಳನ್ನು ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡಬೇಕೆಂದು ತಿಳಿಸಿದರು.
ಸಂಪಾದಕರು ಜೇನು ನೊಣದಂತಿರಬೇಕು, ಒಗ್ಗಟ್ಟಿನಿಂದ ಏನನ್ನಾದರು ಸಾಧಿಸಬಹುದು, ಹಾಗಾಗಿ ಎಲ್ಲರೂ ಒಂದಾಗಿ ಸಂಘವನ್ನು ಬಲಪಡಿಸಬೇಕು. ಸಂಪಾದಕರು ಗುರುತಿಸಿಕೊಳ್ಳುವ ಅಗತ್ಯತೆ ತುಂಬಾ ಇದೆ.ಆ ಕೆಲಸವನ್ನು ಎಲ್ಲಾ ಸಂಪಾದಕರು ಮಾಡುತ್ತಲೇ ತಮ್ಮ ಸಂಸ್ಥೆಗಳನ್ನ ಉತ್ತಮ ಅಭಿವೃದ್ಧಿ ಮಟ್ಟಕ್ಕೆ ಕೊಂಡೊಯ್ಯಬೇಕೆಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್‌ಗೌಡಗೆರೆ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.