ಮುದ್ದೇಬಿಹಾಳ: ಭ್ರೂಣ ಹತ್ಯೆ ಆರೋಪದಡಿ ಇಬ್ಬರು ಸರ್ಕಾರಿ ಆಸ್ಪತ್ರೆಯ ಶುಶ್ರುಷಾಧಿಕಾರಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಭದ್ರಾ ಭಜಂತ್ರಿ ಹಾಗೂ ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಸಿದ್ದಮ್ಮ ಅರಕೇರಿ ಬಂಧಿತ ಆರೋಪಿಗಳು.
ತಾಲೂಕಿನ ಹುಲ್ಲೂರು ಗ್ರಾಮದ ಸುಭದ್ರಾಳ ಮನೆಯಲ್ಲಿ ಬಂಧಿತ ಆರೋಪಿಗಳು ಭ್ರೂಣ ಹತ್ಯೆ ನಡೆಸುತ್ತಿದ್ದರು ಎನ್ನಲಾಗಿದೆ. ಸಂಬಂಧಿಸದ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಔಷಧಿಗಳನ್ನು ಮತ್ತು ಗರ್ಭಪಾತಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಇಟ್ಟುಕೊಂಡು ಗರ್ಭಪಾತಕ್ಕೆ ಪ್ರಯತ್ನ ಮಾಡುತ್ತಿರುವುದಲ್ಲದೇ ವೈದ್ಯಕೀಯ ಪದವಿಯನ್ನು ಪಡೆಯದೆ ಮತ್ತು ವೈದ್ಯಕೀಯ ಚಿಕಿತ್ಸೆ ಕುರಿತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಸಾರ್ವಜನಿಕರಿಗೆ ತಾವು ವೈದ್ಯರೆಂದು ನಂಬಿಸಿ ಮೋಸ ಮಾಡುತ್ತಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ
ಪ್ರಕರಣದ ಎ೧ ಆರೋಪಿ ಸುಭದ್ರಾಳ ಮನೆಗೆ ಬುಧವಾರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು. ಮನೆಯ ಸುತ್ತಮುತ್ತ, ಮಹಡಿಯ ಮೇಲೆ ಭ್ರೂಣ ಹತ್ಯೆಗೆ ಬಳಸಲಾದ ಔಷಧಿಗಳ ಪೊಟ್ಟಣ, ಸಲೈನ್ ಬಾಟಲಿಗಳು ಸೇರಿದಂತೆ ಔಷಧಿಗಳ ಪೊಟ್ಟಣಗಳನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ವ್ಯವಸ್ಥೆಯಲ್ಲಿ ಸರಬರಾಜಾದ ಔಷಧಗಳು ಘಟನಾ ಸ್ಥಳದಲ್ಲಿ ಕಂಡುಬಂದಿವೆ. ಇದು ಅಮಾನವೀಯ ಕೃತ್ಯ. ಸರ್ಕಾರ ಭ್ರೂಣ ಹತ್ಯೆಯನ್ನು ತಡೆಯಲು ಸಾಕಷ್ಟು ಪ್ರಯತ್ನಿಸುತ್ತಿದ್ದರೂ ಮೇಲಿಂದ ಮೇಲೆ ಇಂತಹ ಘಟನೆಗಳು ಮರುಕಳಿಸುತ್ತಿರುವದು ತಲೆ ತಗ್ಗಿಸುವಂತೆ ಮಾಡಿದೆ. ಈ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೇ ಭಾಗಿಯಾಗಿರುವದು ಇನ್ನಷ್ಟು ಬೇಸರ ತಂದಿದೆ. ಕಳೆದ ಕೆಲವು ದಿನಗಳ ಹಿಂದೆ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಕೆಲವು ಅನಾಮಿಕ ಕರೆಗಳು ಬಂದಿದ್ದು ತಂಡಗಳನ್ನು ರಚಿಸಿ ತನಿಖೆ ನಡೆಸುವಂತೆ ಮತ್ತು ಕಳ್ಳ ದಂಧೆ ನಡೆಸುತ್ತಿರುವವರ ಮೇಲೆ ಸೂಕ್ತ ಪ್ರಕರಣ ದಾಖಲಿಸುವಂತೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದೆ. ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ಕಂಡುಬಂದಿರಲಿಲ್ಲ, ಆದರೆ ಈ ಪ್ರಕರಣ ಬೆಳಕಿಗೆ ಬಂದಿದ್ದು ಅಧಿಕಾರಿಗಳನ್ನು ಎಚ್ಚರವಾಗಿಸಿದೆ. ಈ ಕೂಡಲೇ ತಾಲೂಕು ಆರೋಗ್ಯ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಆಶಾ ಕಾರ್ಯಕರ್ತೆಯರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ, ಸಮುದಾಯ ಆರೋಗ್ಯ ಕೇಂದ್ರದ ಎಲ್ಲ ವೈದ್ಯಾಧಿಕಾರಿಗಳ, ನರ್ಸ್ಗಳ ಸಭೆ ಕರೆದು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವಂತೆ ಮತ್ತು ಯಾರೇ ತಪ್ಪಿತಸ್ಥರಿದ್ದರೂ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿರುವದಾಗಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಸ್ವಯಂ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಹೆಚ್ಚಿನ ಶಿಕ್ಷೆ ನೀಡುವಂತೆ ಪತ್ರ ಬರೆಯುವದಾಗಿ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment