ವಿಜಯಪುರ: ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ‘ಪುಲ್ವಾಮಾ ದಾಳಿ’ ಕಹಿನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಂಜಾರಾ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡಿ, ಪಾಪಿ ಪಾಕ್‌ನ ಕುತಂತ್ರಿ ಕೆಲಸ ನೆನಪಿಸಿಕೊಂಡರೆ ಇನ್ನೂ ಸಹ ಭಾರತೀಯರ ರಕ್ತ ಕುದಿಯುತ್ತದೆ. ನಮ್ಮನ್ನು ಕಾಯುವ ಯೋಧರ ಕ್ರೂರ ಮರಣ ಪ್ರತಿ ಭಾರತೀಯನು ಮರೆಯುವುದೇ ಇಲ್ಲ.
ಫೆಬ್ರವರಿ ೧೪ ಎಂದರೆ ಎಲ್ಲರಿಗೂ ನೆನಪಾಗೋದೆ ಈ ಪ್ರೇಮಿಗಳ ದಿನ. ಆದರೆ ಪ್ರೇಮಿಗಳ ದಿನವನ್ನೇ ಮರೆಸಿ ಕರಾಳ ದಿನಕ್ಕೆ ಕಾರಣವಾದ ನಾಲ್ಕು ವರ್ಷಗಳ ಹಿಂದಿನ ಘಟನೆ ಅಕ್ಷರಶಃ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪಾಕ್ ವಿರುದ್ಧ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಅಂದು ಭಾರತೀಯರ ಮನೆಗಳಲ್ಲಿ ಶೋಕ ಮಡುಗಟ್ಟಿತ್ತು ಎಂದರು.
ಈ ಸಂದರ್ಭದಲ್ಲಿ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ೪೦ ಯೋಧರಿಗೆ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು. ಈ ವೇಳೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಬಿ.ಪೂಜಾರಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.