‘ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)
– ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ೯೪೪೯೨೩೪೧೪೨

ನಿನ್ನೆ ಮೊನ್ನೆಯವರೆಗೂ ನಮ್ಮೊಂದಿಗೆ ಹಾಳು ಹರಟೆ ಹೊಡೆಯುತ್ತಿದ್ದವನು ನೋಡು ನೋಡುವುದರಲ್ಲಿ ಯಶಸ್ಸಿನ ಶಿಖರಕ್ಕೆ ತಲುಪಿದ್ದಾನೆ/ಳೆ ಅಂದರೆ ನಂಬಲು ಆಗುತ್ತಿಲ್ಲ. ಕೊನೆ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದವಳು ದೊಡ್ಡ ಅಧಿಕಾರಿ ಆಗಿದ್ದಾಳೆ. ಅದ್ಹೇಗೆ ಸಾಧ್ಯವಾಯಿತು? ನಾವೆಲ್ಲ ಅವಳಿಗಿಂತ ಓದಿನಲ್ಲಿ ಬಹಳ ಮುಂದೆ ಇದ್ದೆವು. ಕಂಪ್ಯೂಟರ್ ಪರದೆ ತೆರೆಯಲು ಬರದವನು ಈಗ ಹೈಟೆಕ್ ಜೀವನ ಸಾಗಿಸುತ್ತಿದ್ದಾನೆ. ಇಂಥ ವಿಚಿತ್ರಗಳನ್ನು ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಹಾಗಾದರೆ ಮೊದಲು ಏನೂ ಇಲ್ಲದ ಪರಿಸ್ಥಿತಿಯಲ್ಲಿದ್ದವರು ನಂತರ ಏನೆಲ್ಲ ಪಡೆಯುವ ಸ್ಥಿತಿಗೆ ಹೇಗೆ ತಲುಪಿದರು ಎಂದು ಯೋಚಿಸಿದರೆ ನಮಗೆ ಉತ್ತರವಾಗಿ ಸಿಕ್ಕುವುದು ನಮ್ಮ ಆಯ್ಕೆಗಳು. ಹುಟ್ಟಿದಾಗ ನಾವೆಲ್ಲ ರಕ್ತ ಮಾಂಸದ ಮುದ್ದೆಗಳು ಬಿಟ್ಟರೆ ಮತ್ತೇನಿಲ್ಲ. ಕಣ್ಣು ಬಿಟ್ಟು ನೋಡುತ್ತ, ಕಿವಿಯಿಂದ ಆಲಿಸುತ್ತ, ಬಾಯಿಯಿಂದ ಆಸ್ವಾದಿಸುತ್ತ, ಮೂಗಿನಿಂದ ಆಘ್ರಾಣಿಸುತ್ತ, ಕೈಗಳಿಂದ ಸ್ಪರ್ಷಿಸುತ್ತ ತೇಟು ಪ್ರಾಣಿಯಂತೆ ಇರುತ್ತೇವೆ. ಹುಟ್ಟುವಾಗ ಎಲ್ಲರೂ ಒಂದೇ ಇದ್ದೆವು ಆದರೆ ನಮ್ಮೆಲ್ಲರ ಬದುಕು ಭಿನ್ನ ವಿಭಿನ್ನ ಹೇಗಾಯ್ತು? ಎನ್ನುವ ಪ್ರಶ್ನೆಗೆ ಸಹಜವಾದ ಉತ್ತರ ನಮ್ಮ ಆಯ್ಕೆಗಳು. ಒಂದೇ ಆಗಿದ್ದ ನಮ್ಮನ್ನು ವಿಭಿನ್ನವಾಗಿಸಿ ರಾರಾಜಿಸುವಂತೆ ಮಾಡುವ ಇಲ್ಲವೇ ಕೆಳಕ್ಕೆ ತಳ್ಳುವ ಆಯ್ಕೆಗಳ ಬಗ್ಗೆ ತಿಳಿಯುವುದು ಅತಿ ಮುಖ್ಯ ಎಂದಂತಾಯಿತು. ಹಾಗಾದರೆ ಉಜ್ವಲ ಭವಿಷ್ಯಕ್ಕೆ ನಮ್ಮ ಆಯ್ಕೆಗಳು ಹೇಗಿರಬೇಕು ನೋಡೋಣ ಬನ್ನಿ.
ಉತ್ತಮ ಗೆಳೆಯರು
ಗೆಳೆಯರಿಲ್ಲದ ಜೀವನ ಶೂನ್ಯ. ಒಂದು ಹಾವನ್ನೋ ದುಷ್ಟರನ್ನೋ ಆರಿಸಿಕೊಳ್ಳಬೇಕಾದಾಗ ಹಾವನ್ನೇ ಆರಿಸಿಕೋ. ಹಾವು ಆತ್ಮರಕ್ಷಣೆಗೆ ಮಾತ್ರ ಕಚ್ಚುತ್ತದೆ. ಆದರೆ ದುಷ್ಟರು ನಿಷ್ಕಾರುಣವಾಗಿ ಹೆಜ್ಜೆ ಹೆಜ್ಜೆಗೂ ಕಚ್ಚುತ್ತಾರೆ. ದುಷ್ಟರು ಹಾವಿಗಿಂತ ತೀಕ್ಷ್ಣ ವಿಷವುಳ್ಳವರು. ಹಾವಿಗಿಂತ ಅಪಾಯಕಾರಿ. ಹಾವು ಕಚ್ಚಲು ಏನಾದರೂ ಒಂದು ಕಾರಣವಿರಬೇಕು. ದುಷ್ಟರಿಗೆ ಯಾವ ಕಾರಣವೂ ಬೇಕಿಲ್ಲ. ಹಾವಿಗೆ ವಿಷ ಹಲ್ಲಿನಲ್ಲಿ ಮಾತ್ರ ಇರುತ್ತದೆ. ಆದರೆ ದುಷ್ಟರಿಗೆ ಶರೀರವೆಲ್ಲ ವಿಷವೇ ತುಂಬಿರುತ್ತದೆ. ಆದ್ದರಿಂದ ದುಷ್ಟರನ್ನು ಎಂದೂ ಆಯ್ಕೆ ಮಾಡಿಕೊಳ್ಳಬಾರದು.ಎಂದಿದ್ದಾನೆ ತನ್ನ ಚಾಣಕ್ಯ ನೀತಿಯಲ್ಲಿ. ಲಾಭ ನಿರೀಕ್ಷಿಸಿ ಗೆಳೆತನ ಬಯಸುವವವರನ್ನು ಬಿಟ್ಟು ಬಿಡಿ.
ಸ್ನೇಹ ಅತಿ ಮಧುರ; ಸ್ನೇಹ ಅದು ಅಮರ ಎಂದರು ಕವಿ ಕೆ ಎಸ್ ಲಕ್ಷ್ಮೀನಾರಾಯಣಭಟ್ಟರು. ಕಷ್ಟದಲ್ಲಾಗುವವನೇ ನಿಜವಾದ ಸ್ನೇಹಿತ. ಚಟಕ್ಕೆ ತಳ್ಳಿ ಬದುಕನ್ನು ನರಕವಾಗಿಸುವ ಗೆಳೆಯರನ್ನು ಬಿಟ್ಟು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿ.
ಕನಸಿನ ಹಿಂದೆ ಓಟ
ಹೊಸ ಹೊಸ ಆಸೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತವೆ. ಹೀಗಾಗಿಯೇ ಮಾನವನ ಆಸೆಗಳು ಅಪರಿಮಿತವೆಂದು ಹೇಳಲಾಗುವುದು. ಅದು ಸತ್ಯವೂ ಕೂಡ. ಹೊಸ ಹೊಸ ಆಸೆಗಳೇನೋ ಮನದಲ್ಲಿ ಮೂಡುತ್ತವೆ. ಅವುಗಳನ್ನು ಪೂರೈಸಿಕೊಳ್ಳಲು ಅವುಗಳ ಹಿಂದೆ ಓಡಬೇಕು. ಕೆಲವು ಹೆಜ್ಜೆಗಳನ್ನು ಹಾಕುವುದರಲ್ಲಿ ಸುಸ್ತಾಗಿ ಕೆಲವೊಂದಿಷ್ಟು ಆಸೆಗಳನ್ನು ಮೊದಲ ಹಂತದಲ್ಲೇ ಬಿಟ್ಟು ಬಿಡುವುದುಂಟು. ಆದರೆ ಮನದಲ್ಲಿ ಆಳವಾಗಿ ಬೇರೂರಿದ ಆಸೆಯನ್ನು ಪೂರೈಸಿಕೊಳ್ಳಲು ಅದೆಷ್ಟೋ ಕಷ್ಟವೆನಿಸಿದರೂ ಅದನ್ನು ಬಿಡದೇ ಪಡೆದು ತೀರಬೇಕೆಂಬ ಕನಸಿನ ಬೆನ್ನು ಹತ್ತಬೇಕು. ಬದುಕಿನ ವೇಗ ತೀವ್ರವಾಗಿ ಹೆಚ್ಚುತ್ತಿದೆ. ಆದ್ದರಿಂದ ಕನಸಿನ ಹಿಂದೆ ನಿರಂತರ ಓಟದ ಆಯ್ಕೆ ಮಾಡಬೇಕು.
ಆತ್ಮವಿಶ್ವಾಸ
ಆತ್ಮವಿಶ್ವಾಸಕ್ಕಿಂತ ಮಿಗಿಲಾದ ಸಾಧನೆಯ ನಿಯಮವಿಲ್ಲ. ನಮ್ಮ ಮೇಲೆ ನಮಗಿರುವ ವಿಶ್ವಾಸವು ತಪಗಳಲ್ಲೇ ಮಿಗಿಲಾದುದು. ಯಾರಲ್ಲಿ ಆತ್ಮವಿಶ್ವಾಸವು ಬಲವಾಗಿದೆಯೋ ಅವನೇ ಶ್ರೇಷ್ಠನಾಗುವನು. ನಿರೀಕ್ಷೆಗೂ ಮೀರಿ ಗೆಲುವು ಪಡೆಯುವನು. ಆತ್ಮವಿಶ್ವಾಸವಿಲ್ಲದಿದ್ದರೆ ಮನಸ್ಸಿಗೆ ಅಂಗವಿಕಲತೆ ಬಂದಂತೆ. ಆತ್ಮವಿಶ್ವಾಸವಿದ್ದರೆ ಸಾಕು ಯಾವುದೇ ಕಷ್ಟ ಬಂದರೂ ಅಂಜಿಕೆಯಿಲ್ಲ ಮನನೋಯುವುದಿಲ್ಲ. ಗಾಯಗೊಂಡರೂ ದುಃಖ ಪಡುವುದಿಲ್ಲ. ಒಮ್ಮೆಲೇ ಮುನಿಸಿಕೊಳ್ಳುವುದೂ ಇಲ್ಲ. “ಆತ್ಮವಿಶ್ವಾಸವಿರುವವರನ್ನು ಎಲ್ಲ ಬಾಗಿಲುಗಳು ಬರಮಾಡಿಕೊಳ್ಳುತ್ತವೆ. ಎಲ್ಲ ನಾಲಿಗೆಗಳು ಪ್ರಶಂಸಿಸುತ್ತವೆ. ಎಲ್ಲ ಗೌರವಗಳೂ ಅವನಿಗೆ ಸಲ್ಲುತ್ತವೆ.” ಎಂದಿದ್ದಾನೆ ರಾಲ್ಫ ವಾಲ್ಡೋ ಎಮರ್ಸನ್ ಆದ್ದರಿಂದ ಆತ್ಮವಿಶ್ವಾಸದಿಂದ ಇರುವುದನ್ನು ಕಲಿಯುವುದು ಮುಖ್ಯ. ಕೀಳರಿಮೆ ಬಿಟ್ಟು ಆತ್ಮವಿಶ್ವಾಸವನ್ನು ಆಯ್ಕೆ ಮಾಡಿಕೊಳ್ಳುವುದೇ ಸರಿ.
ಸಹನೆ
ಸಹನೆಯು ದುಃಖ ದುಮ್ಮಾನಗಳನ್ನು ಲೀಲಾಜಾಲವಾಗಿ ಎದುರಿಸುವಂತೆ ಮಾಡುತ್ತವೆ. ದಣಿವು ಬೇಸರಗಳಿಗೆ ಜಾಗವಿಲ್ಲದಂತೆ ಮಾಡುತ್ತವೆ. ಸಹನೆಯಂತಹ ಬಂಧು ಜಗತ್ತಿನಲ್ಲಿ ಬೇರೆ ಇಲ್ಲ. ಏಕೆಂದರೆ ಅದು ನಮ್ಮ ದೃಷ್ಟಿಕೋನ ಆಚಾರ ವಿಚಾರ ಒಲವು ನಿಲುವುಗಳನ್ನು ಪ್ರಭಾವಿಸುತ್ತದೆ. ಅಷ್ಟೇ ಅಲ್ಲ ಅಶಕ್ತನನ್ನು ಶಕ್ತನನ್ನಾಗಿಸಿದ, ಸೋತು ಸುಣ್ಣವಾದವನನ್ನು ಸಾಧಕನನ್ನಾಗಿಸಿದ ನಿದರ್ಶನಗಳಿವೆ. ಏನೂ ಇಲ್ಲದವನನ್ನು ಎಲ್ಲ ಪಡೆಯುವಂತೆ ಮಾಡಿದ ಶ್ರೇಯಸ್ಸು ಸಹನೆಗೆ ಸಲ್ಲುತ್ತದೆ. ಸಹನೆಗೆ ಸಂದ ನೈಜ ಜೀವನದ ಸಾಧಕರ ಕಥೆಗಳು ನಮ್ಮ ಮುಂದಿವೆ.. ಪವಾಡ ಸದೃಶ ದಾಖಲೆಗಳು ಸಾಕಷ್ಟಿವೆ. ಒಟ್ಟಿನಲ್ಲಿ ಬದುಕಿನ ಗುಣಮಟ್ಟವನ್ನು ನಿರ್ಣಯಿಸುವುದರಲ್ಲಿ ಸಹನೆಯ ಪಾತ್ರ ಅಪಾರ.
ಬದಲಾವಣೆ
ಸಾಮಾನ್ಯವಾಗಿ ನಮ್ಮ ಮನಸ್ಸು ಬದಲಾವಣೆಯನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಹಾಗಂತ ನಾವು ಅದರೊಂದಿಗೆ ನಡೆಯದಿದ್ದರೆ ಬದುಕು ಚೆನ್ನಾಗಿ ನಡೆಯುವುದಿಲ್ಲ. ಬದಲಾಗಲು ಸದಾ ಅವಕಾಶ ಇದ್ದೇ ಇರುತ್ತದೆ. ಬದಲಾವಣೆಗೆ ಇದೇ ವಯಸ್ಸು ಅಂತಿಲ್ಲ. ಯಾವಾಗ ಬೇಕಾದರೂ ಬದಲಾಗಬಹುದು. ಬದಲಾವಣೆಯ ಆಯ್ಕೆಯಲ್ಲಿ ನಮ್ಮ ನಿಲುವು ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ. ಬದಲಾವಣೆಗೆ ಚಾಚಿಕೊಳ್ಳುವ ಮನಸ್ಥಿತಿಯ ಆಳ ಅಗಲಗಳನ್ನು ಗಮನಿಸಿದಾಗ ಬದುಕಿನ ಗುಣಮಟ್ಟವನ್ನು ನಿರ್ಣಯಿಸಬಹುದು. ಶರೀರವನ್ನು ಬೇಕಾದ ಆಕಾರಕ್ಕೆ ಬದಲಿಸಿಕೊಳ್ಳಲು ಬಯಸುವವರ ಸಂಖ್ಯೆ ಅಧಿಕ ಆದರೆ ಜಿಮ್‌ಗಳಲ್ಲಿ ಫಿಟ್‌ನೆಸ್ ಸೆಂಟರ್‌ಗಳಲ್ಲಿ ಬೆವರು ಹರಿಸಲು ಮುಂದಾಗುವವರ ಸಂಖ್ಯೆ ಕಮ್ಮಿ. ಅದೇ ರೀತಿ ಮನಸ್ಥಿತಿ ಬದಲಿಸಲು ವ್ಯಕ್ತಿ ವಿಕಸನದ ಪುಸ್ತಕಗಳಿವೆ. ಯಶಸ್ವಿ ವ್ಯಕ್ತಿಗಳ ಜೀವನ ಚರಿತ್ರೆಗಳಿವೆ. ಹಿರಿಯರ ಅನುಭವಿಕರ ಜ್ಞಾನಿಗಳ ನುಡಿಮುತ್ತುಗಳಿವೆ. ಸೋಲುಗಳಿಂದ ಕಲಿತ ಪಾಠಗಳಿವೆ. ಇವೆಲ್ಲವುಗಳು ನಮ್ಮ ಮುಂದೆ ಇದ್ದರೂ ಪುನಃ ಪುನಃ ಜೀವನದ ಗುಣಮಟ್ಟ ಕೆಳಕ್ಕೆ ಕುಸಿಯುತ್ತಿರುವುದೇಕೆ? ಏಕೆಂದರೆ ನಾವು ಎಂತಹ ಗುಣಮಟ್ಟದ ಬದುಕನ್ನು ಬದುಕಬೇಕೆನ್ನುವುದರ ಬಗ್ಗೆ ಯೋಚಿಸುವುದೇ ಇಲ್ಲ. ಮುಂದೂಡುವುದನ್ನು ಬಿಟ್ಟು ಬದಲಾಗಲು ಮುಂದಾಗಬೇಕು.
ಅವಕಾಶಗಳು
ಇಷ್ಟ ಬಂದ ಕ್ಷೇತ್ರಗಳಲ್ಲಿ ಸಾಕಷ್ಟು ಎನಿಸುವಷ್ಟು ಅವಕಾಶಗಳಿವೆ ಹೆಚ್ಚಿನ ಪ್ರತಿಭೆಯಿಲ್ಲ ಅರ್ಹತೆಯಿಲ್ಲ ಭಾಷಾ ಪ್ರೌಢಿಮೆಯಿಲ್ಲ ಎಂದು ಅವಕಾಶಗಳನ್ನು ಬಿಡಬಾರದು. ನಿಮ್ಮ ಸಾಮರ್ಥ್ಯದದಲ್ಲಿ ನಂಬಿಕೆ ಇಡಬೇಕು. ಸಾಮರ್ಥ್ಯಕ್ಕೆ ತಕ್ಕಂತೆ ಇರುವ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಮೆ ಮೆರೆಯಬೇಕು. ಇತಿಮಿತಿಗಳ ಸ್ಪಷ್ಟ ಪರಿಕಲ್ಪನೆ ಬೇಕು. ಸಿಕ್ಕ ಅವಕಾಶಗಳ ಬಗ್ಗೆ ಬೇಸರ ಬೇಡ. ನಮ್ಮ ಬದುಕಿನ ಗುಣಮಟ್ಟವನ್ನು ಯಾವ ಅಂಶವು ನಿರ್ಣಯಿಸುತ್ತದೆಂದು ಯೋಚಿಸಿದರೆ ಮೇಲ್ನೋಟಕ್ಕೆ ನಮಗೆ ಅನಿಸುವುದು ಸಿಗುವ ಅವಕಾಶಗಳು. ಸೂಕ್ಷ್ಮವಾಗಿ ಯೋಚಿಸಿದರೆ ನಮ್ಮ ಬದುಕಿನ ಗುಣಮಟ್ಟಕ್ಕೆ ನಮ್ಮ ಆಯ್ಕೆಗಳೇ ಕಾರಣ, ಹೊರತು ಅವಕಾಶಗಳಲ್ಲ ಎಂದು ಸ್ಪಷ್ಟವಾಗಿ ಗೋಚರಿಸುವುದು. ಹಾಗಾಗಿ ಬದುಕಿನ ಸಾರ್ಥಕತೆಗಾಗಿ, ಯೋಚಿಸಿ, ಅವಲೋಕಿಸಿ ಅಂತರಂಗದಲ್ಲಿ ಮಥಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಅನಾಮಿಕ ಹೇಳಿದ್ದಾನೆ. ಮಾನವನ ಬಯಕೆಗಳು ಅಪರಿಮಿತವಾಗಿವೆ. ಆದರೆ ಅವುಗಳನ್ನು ಪೂರೈಸುವ ವಿಧಾನಗಳು ಸೀಮಿತವಾಗಿವೆ.. ಆದ್ದರಿಂದ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವುದೇ ಜಾಣತನ
ಲೋಕವ್ಯವಹಾರ
ಬದುಕಲು ಲೋಕ ವ್ಯವಹಾರ ತಿಳಿಯುವುದು ಅತಿ ಮುಖ್ಯ. ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಬೇಕೇ ಹೊರತು ಜಗಳ ವೈಷಮ್ಯಗಳಿಗೆ ಆಸ್ಪದ ನೀಡಬಾರದು. ಸಂಬಂಧಿಗಳೊಂದಿಗಿನ ಉತ್ತಮ ಒಡನಾಟವು ನಾನು ಒಬ್ಬಂಟಿಯಲ್ಲ ಎನ್ನುವ ಸುರಕ್ಷಿತ ಭಾವ ಮೂಡಿಸುತ್ತದೆ. ಆಚಾರ್ಯ ಸೋಮದೇವ ಹೇಳಿದಂತೆ “ಲೋಕವ್ಯವಹಾರ ತಿಳಿದವನೇ ಸರ್ವಜ್ಞ. ಲೋಕ ವ್ಯವಹಾರ ಇಲ್ಲದವನು ಎಷ್ಟೇ ಬುದ್ಧಿವಂತನಾದರೂ ಕಡೆಗಣಿಸಲ್ಪಡುತ್ತಾನೆ. ಆದ್ದರಿಂದ ಲೋಕವ್ಯವಹಾರ ಹೆಚ್ಚಿಸುವುದರತ್ತ ಗಮನ ನೀಡಬೇಕು.
ಕೊನೆ ಹನಿ
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ” ಎಂಬ ಗೋಪಾಲ ಕೃಷ್ಣ ಅಡಿಗರ ಮಾತಿನಂತೆ ನಮ್ಮಲ್ಲಿರುವುದನ್ನು ಬಿಟ್ಟು ಇಲ್ಲದ್ದನ್ನು ಹೆಚ್ಚು ಹೆಚ್ಚು ಬಯಸುತ್ತೇವೆ. ಇರುವ ಅನುಕೂಲತೆಗಳನ್ನು ಮರೆತು ಇಲ್ಲದಿರುವ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಇಲ್ಲದ್ದನ್ನು ಪಡೆಯುವ ಚಿಂತೆಯಲ್ಲಿ ಇರುವುದನ್ನು ಆಸ್ವಾಧಿಸುವುದನ್ನು ಮರೆತುಬಿಡುತ್ತೇವೆ ಹಳ್ಳಿಯ ಸುಂದರ ಪ್ರಾಕೃತಿಕ ಸೌಲಭ್ಯಗಳ ಜೀವನ ದೂರ ಸರಿಸಿ ಜಂಜಡದ ನಗರ ಜೀವನಕ್ಕೆ ಹಾತೊರೆಯುತ್ತೇವೆ. ನಗರ ಜೀವನಕ್ಕೆ ಒಗ್ಗಿಕೊಳ್ಳಲಾರದೇ ಪ್ರಶಾಂತ ವಾತಾವರಣ ಬೇಕೆಂದು ಬಯಸುತ್ತೇವೆ. ಆದ್ದರಿಂದ ಇರುವುದನ್ನು ಆನಂದಿಸುವ ಗುಣ ಆಯ್ಕೆ ಮಾಡಿಕೊಳ್ಳಬೇಕು. ಇದರೊಂದಿಗೆ ಆಯ್ಕೆಗಳು ಕೆಟ್ಟವಾದಲ್ಲಿ ಉತ್ತಮ ಸಾಮರ್ಥ್ಯವುಳ್ಳ ಮನುಷ್ಯನ್ನನ್ನು ಪ್ರಪಾತಕ್ಕೆ ತಳ್ಳುತ್ತವೆ. ಸಾಮಾನ್ಯನಾಗಿದ್ದರೂ ಆಯ್ಕೆ ಉತ್ತಮವಾಗಿದ್ದರೆ ಬಾಳು ಬೆಳಗಿಸಬಲ್ಲವು. ಸಾಧನೆಗೆ ಸೋಪಾನಗಳು ಆಗಬಲ್ಲವು.

– ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ೯೪೪೯೨೩೪೧೪೨

