’ವೀಣಾಂತರಂಗ’- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

ಅದೊಂದು ಮ್ಲಾನವಾದ ಸಾಯಂಕಾಲ.. ಸೂರ್ಯ ಮರಳಿ ಗೂಡು ಸೇರುವ ಸಮಯ ಬಾನೆಲ್ಲ ಕೆಂಪು ಓಕಳಿಯಿಂದ ತುಂಬಿತ್ತು. ತಮ್ಮ ಕೋಣೆಯ ತೆರೆದ ಕಿಟಕಿಯಿಂದ ಬಾನನ್ನು ನೋಡುತ್ತಿದ್ದ ವಿಜ್ಞಾನದ ಋಷಿ ಐನ್ ಸ್ಟೀನ ಅವರಿಗೆ ಮಾನವೀಯತೆಯೆಂಬ ರಕ್ತವು ಭೂಮಿಯಿಂದ ಚಿಮ್ಮಿ ಆಗಸದಲ್ಲಿ
ಮಿಳಿತವಾಗಿ ಗಾಢಾಂಧಕಾರ ಮುಳುಗಿದಂತೆ ಭಾಸವಾಯಿತು. ಎಲ್ಲವನ್ನು ಕಳೆದುಕೊಂಡ ಉದಾಸ, ದುಃಖ ತಪ್ತ ಮುಖಭಾವ, ಕಣ್ಣು ತುಂಬಾ ನೀರು ತುಂಬಿಕೊಂಡ ಆ ವಿಜ್ಞಾನದ ರಾಜರ್ಷಿ ಐನ್ ಸ್ಟೀನ್ ತನ್ನ ಕೋಣೆಯಲ್ಲಿಯೇ ಕಳೆದ ನಾಲ್ಕು ದಿನಗಳಿಂದ ಕುಳಿತು ನಿಟ್ಟುಸಿರುಗರೆಯುತ್ತಿದ್ದರು. ಒಂದೊಮ್ಮೆ ತಮ್ಮ ವಯೊಲಿನ್ ಬಾರಿಸಲು ಪ್ರಯತ್ನಿಸಿ, ಸೋತರು. ಮೆಲ್ಲನೆ ಕೋಣೆಯ ಕದ ತೆರೆದು ಒಳಗೆ ಬಂದ ಐನ್ಸ್ಟೀನ ಅವರ ಮಗಳು ‘ಅಪ್ಪ ಈಗಲಾದರೂ ಕೊಂಚ ಊಟ ಮಾಡುವಿರ’ ಎಂದು ಕೇಳಿದಳು. ದೀರ್ಘವಾಗಿ ಉಸಿರನ್ನು ಹೊರ ಹಾಕಿ
ಐನ್ ಸ್ಟೀನ್ ನನಗೆ ಹಸಿವಿಲ್ಲ ಎಂದುತ್ತರಿಸಿದಾಗ
ನಿರಾಶೆಯಿಂದ ಆಕೆ ಕೋಣೆಯ ಬಾಗಿಲನ್ನು ಸದ್ದಿಲ್ಲದೆ ಮುಚ್ಚಿ ಹೊರ ನಡೆದಳು.
ಕಳೆದ ನಾಲ್ಕು ದಿನಗಳ ಹಿಂದೆ ಜಪಾನ್ ನ ಹಿರೋಶಿಮಾ ಎಂಬ ಊರಿನ ಮೇಲೆ ಅಣು ಬಾಂಬಿನ ದಾಳಿ ಆದಾಗಿನಿಂದ ಐನಸ್ಟೀನ್ ಪರಿತಪಿಸುತ್ತಿದ್ದರು. ಇಂದು ಬಿಬಿಸಿ ವಾರ್ತೆಯಲ್ಲಿ ಮತ್ತೆ ಜಪಾನಿನ ನಾಗಸಾಕಿ ನಗರ ದಲ್ಲಿ ಅಣುಬಾಂಬ ದಾಳಿಯಾದ ಪ್ರಕರಣವನ್ನು ಕೇಳಿದ ಮೇಲಂತೂ ಅವರು ಕುಸಿದು ಹೋದರು.
ಮಾನವ ಇತಿಹಾಸದಲ್ಲಿ ಹಿಂದೆಂದೂ ನಡೆಯದಂತಹ ಕ್ರೂರ ಆಕ್ರಮಣ, ಅಣು ಬಾಂಬಿನ ಸಿಡಿತದಿಂದಾಗಿ ಉಂಟಾದ ಪರಿಣಾಮದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ನಿಂತು ನಿಂತಲ್ಲಿಯೇ ಸುಟ್ಟು ಹೋದರು ಅಡಗಿಕೊಳ್ಳಲು ಪ್ರಯತ್ನಿಸಿದವರು ಬೆಂದು ಹೋದರು. ಯಾರದ್ದೋ ಕೈ ಕಾಲುಗಳು ಮುಖ ದೇಹದ ಹಲವಾರು ಭಾಗಗಳು ಬೆಂದು ಕರಕಲಾಗಿ ಹೋದವು. ಸಹಸ್ರಾರು, ಲಕ್ಷಾಂತರ ಎಕರೆ ಭೂಮಿ ಬಂಜರಾಯಿತು. ಅಣುಬಾಂಬಿನಿಂದ ಸಿಡಿದ ತುಣುಕುಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ಉರುಳಿಸಿದವು, ಸುಟ್ಟು ಹಾಕಿದವು, ಧರಾಶಾಯಿಯನ್ನಾಗಿಸಿದವು. ಸಮುದ್ರಗಳು ಬಿಸಿಯಿಂದ ಉಕ್ಕೇರಿ ಜಲಚರಗಳು ಬೆಂದು ಹೋದವು. ಗಿಡ, ಮರ, ಬಳ್ಳಿ ಪಶು ಪಕ್ಷಿಗಳು ನಶಿಸಿದವು. ಇಷ್ಟಕ್ಕೆ ಮುಗಿಯಲಿಲ್ಲ ಅಣು ಬಾಂಬಿನ ರುದ್ರನರ್ತನ… ಅಣು ಬಾಂಬಿನ ಸಿಡಿತದಿಂದ ವಾತಾವರಣದಲ್ಲಿ ಬಿಡುಗಡೆಯಾದ ವಿಕಿರಣಗಳು ವಾಯುಮಂಡಲವನ್ನೇ ಆಪೋಶನ ತೆಗೆದುಕೊಂಡು ಮುಂದಿನ ಹಲವಾರು ದಶಕಗಳ ಕಾಲ ಜನರು ವಿವಿಧ ಬಗೆಯ ಕಾಯಿಲೆಗಳಿಂದ ಅಂಗವಿಕಲತೆಗಳಿಂದ ನರಳುವಂತಹ ತೊಂದರೆಯನ್ನು ವಾತಾವರಣದಲ್ಲಿ ಬಿತ್ತಲ್ಪಟ್ಟಿತು.
ಅಣು ಬಾಂಬ ಸ್ಪೋಟದ ನಂತರದ ದುಷ್ಪರಿಣಾಮಗಳ ಜೊತೆ ಜೊತೆಗೆ ಸುದ್ದಿ ಮಾಧ್ಯಮಗಳಲ್ಲಿ ವಿಜ್ಞಾನದ ಆವಿಷ್ಕಾರಗಳ ಕುರಿತು ಅತ್ಯಂತ ತೀವ್ರ ಮತ್ತು ಆಕ್ರೋಶಕಾರಿ ಹೇಳಿಕೆಗಳು ಹೊರಬೀಳಲಾರಂಭಿಸಿದವು. ಮಾನವನ ಹಿತಕ್ಕೆ ಬಳಸಬಹುದಾದ ಅಣುಶಕ್ತಿಯನ್ನು ಮನುಕುಲದ ವಿನಾಶಕ್ಕೆ ಬಳಸಿದ್ದು ಐನ್ಸ್ಟೀನ್ ಚಿತ್ತವನ್ನು ಕಲಕಿತ್ತು.
ಮುಂದಿನ ಹಲವಾರು ದಿನಗಳು ಆತ ನಿದ್ರಾ ರಹಿತ ಮತ್ತು ವ್ಯಾಕುಲಚಿತ್ತ ಸ್ಥಿತಿಯಲ್ಲಿದ್ದ.
ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟನನ್ನು ತಾನು ಭೇಟಿಯಾಗಿ ಅಣುಸ್ಪೋಟದ ಕುರಿತ ದುಷ್ಪರಿಣಾಮಗಳನ್ನು ವಿವರಿಸಿದ್ದು ಕೇವಲ ಹಿಟ್ಲರ್ ನನ್ನು ಯುದ್ಧದ ಭೀಕರ ಆಶಯದಿಂದ ಹಿಮ್ಮೆಟ್ಟಿಸಲು ಮಾತ್ರ. ಆದರೆ ರೂಸ್ ವೆಲ್ಲ್ಟ್ ತನ್ನನ್ನು ಕತ್ತಲೆಯಲ್ಲಿರಿಸಿ ಅಣುಸ್ಫೋಟ ನಡೆಸಿದ್ದು ಆತನಿಗೆ ಅರಗಿಸಿಕೊಳ್ಳಲಾಗಲಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳು ಮಾನವನ ಜೀವನದ ಉನ್ನತ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳಲೆ ಹೊರತು ಮನುಕುಲವನ್ನು ವಿನಾಶದಂಚಿಗೆ ತಳ್ಳಲು ಅಲ್ಲ ಎಂಬ ಎಲ್ಲ ವಿಜ್ಞಾನಿಗಳ ಆಶಯವನ್ನು ಒಂದೇ ಏಟಿಗೆ ಗುಡಿಸಿ ಹಾಕಿ ಬಿಟ್ಟಿದ್ದ ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟ್. ಮುಂದಿನ ಹಲವಾರು ದಿನಗಳ ಕಾಲ ಐನ್ಸ್ಟೀನ್ ದುಃಖತಪ್ತನಾಗಿ ತನ್ನ ಕೋಣೆಯಲ್ಲಿ ಬಂಧಿಯಾಗಿದ್ದ.
ಒಂದು ದಿನ ಐನ ಸ್ಟೀನ ವಿಜ್ಞಾನ ಮತ್ತು ತಂತ್ರಜ್ಞಾನದ ಪಾಲಿಸಿ ವಿಚಾರದಲ್ಲಿ ಸರ್ಕಾರದೊಂದಿಗೆ ಮಾಡಿಕೊಂಡ ಎಲ್ಲ ಒಡಂಬಡಿಕೆಗಳಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಂಡು ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ನಿರ್ಧರಿಸಿದ. ಮಕ್ಕಳಿಗೆ ಹದಿಹರೆಯದವರಿಗೆ ಮತ್ತು ಯುವಕರಿಗೆ ಎಲ್ಲ ಬಗೆಯ ಶಿಕ್ಷಣದ ಜೊತೆ ಜೊತೆಗೆ ಆಧ್ಯಾತ್ಮಿಕತೆಯ ಶಿಕ್ಷಣವನ್ನು ಕೂಡ ಕಲಿಸುವ ಸಂಸ್ಥೆಯನ್ನು ಸ್ಥಾಪಿಸಿದರು.
ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಪ್ರಸಿದ್ಧ ತತ್ವಶಾಸ್ತ್ರಜ್ಞರಾದ ಬರ್ಟ್ರೆಂಡ್ ರಸೇಲ್ ಮತ್ತು ಆಲ್ಬರ್ಟ್ ಸ್ಚಿವಿಟ್ಜರ್ ಜೊತೆಗೆ ಹತ್ತಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳನ್ನು ಆಹ್ವಾನಿಸಿದ್ದ ಐನ್ ಸ್ಟೀನ್ ಮಹಾತ್ಮ ಗಾಂಧೀಜಿಯವರ ಫೋಟೋವೊಂದಕ್ಕ ಹಾರ ಹಾಕುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಗಂಟಲಲ್ಲಿ ಸಿಕ್ಕಿಹಾಕಿಕೊಂಡವರಂತೆ ಮಾತನಾಡಿದ ವಿಜ್ಞಾನಿ ಐನ್ಸ್ಟೀನ್ ಗಾಂಧೀಜಿಯವರನ್ನು ಕುರಿತು ತನ್ನ ದೇಶದ ಸ್ವಾತಂತ್ರ್ಯವನ್ನು ಕೇವಲ ಅಹಿಂಸಾತ್ಮಕ ಹೋರಾಟದಿಂದ ಪಡೆದ, ಸತ್ಯಾನ್ವೇಷಕ ಮತ್ತು ಆಧ್ಯಾತ್ಮಿಕತೆಯ ಅರಿವಿದ್ದ ಏಕೈಕ ವ್ಯಕ್ತಿ ಎಂದು ಬಣ್ಣಿಸಿದರು. ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವೆ ಇರುವ ಸಾಮರಸ್ಯವೆ ಜೀವ ಜಗತ್ತನ್ನು ಕಾಪಾಡಬಲ್ಲದು ಎಂಬ ಸತ್ಯದ ಅರಿವನ್ನು ಹೊಂದಿದ್ದು ಮಹಾತ್ಮ ಗಾಂಧಿ ಎಂದು ಅವರು ಭಾವನಾತ್ಮಕವಾಗಿ ಸ್ಮರಿಸಿದರು.
ಮುಂದೆ ಹಲವಾರು ವರ್ಷಗಳ ನಂತರ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಭೇಟಿಯಾಗಲು ಬಂದ ಜಪಾನ್ ನಿಯೋಗವನ್ನು ಬರಮಾಡಿಕೊಂಡ ವಿಜ್ಞಾನಿ ಐನ್ಸ್ಟೀನ್ ಅವರ ಮುಂದೆ ನಾನು ನನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇನೆ ನೀವು ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧ ಎಂದು ದುಃಖ ತಪ್ತರಾಗಿ ಹೇಳಿದರು. ಅವರ ನೋವು ಜಪಾನ ನಿಯೋಗದ ಮನ ಕಲಕಿತು.
ಸ್ನೇಹಿತರೆ ಜಗತ್ಪ್ರಸಿದ್ಧ ಮತ್ತು ವಿಜ್ಞಾನದ ಮಹರ್ಷಿ ಎಂದೇ ಕರೆಯಲ್ಪಟ್ಟ ಅಲ್ಬರ್ಟ್ ಐನ್ಸ್ಟೀನ್ ನೀಡಿದ ಏಕೈಕ ಸಂದೇಶ “ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವಣ ಸಾಮರಸ್ಯ ಜೀವ ಜಗತ್ತಿನ ಪಲ್ಲವಿಕೆಗೆ ಕಾರಣವಾಗುತ್ತದೆ.
ವಿಜ್ಞಾನದ ಆವಿಷ್ಕಾರಗಳನ್ನು ನಮ್ಮ ಉನ್ನತಿಗೆ ಬಳಸಿಕೊಳ್ಳೋಣ” ಎಂದು ಆಶಿಸುತ್ತಾ

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

