’ವೀಣಾಂತರಂಗ’- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

ಎಲ್ಲೋ ಓದಿದ ನೆನಪು…ಓರ್ವ ವೃದ್ಧ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಎದ್ದು ಕುಳಿತುಕೊಳ್ಳುವ ತ್ರಾಣವು ಇರಲಿಲ್ಲ. ಆತನ ಮೆದುಳಿಗೆ ಹಾನಿಯಾಗಿದ್ದು ನೆನಪಿನ ಶಕ್ತಿ ಕಳೆದು ಹೋಗಿದೆ, ಅದು ಮರುಕಳಿಸುವ ಸಾಧ್ಯತೆ ಬಹುತೇಕ ಕಮ್ಮಿ ಎಂದು ವೈದ್ಯರು ಹೇಳಿದ್ದರು. ಆದರೆ ಮನೆಯ ಜನ ತಮ್ಮ ಭರವಸೆ ಕಳೆದುಕೊಂಡಿರಲಿಲ್ಲ. ಮರುದಿನ ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಆಸ್ಪತ್ರೆಯಲ್ಲಿ ಆತನನ್ನಿರಿಸಿದ ಕೋಣೆಯಲ್ಲಿ ಆತನ ಮನೆಯಲ್ಲಿ ದೈನಂದಿನ ಪೂಜಾ ಕ್ರಿಯೆಗಳು ಜರುಗುವಂತೆ ಜೋರಾಗಿ ಗಂಟೆ ಜಾಗಟೆಗಳ ಶಬ್ದ ಸುಗಂಧಭರಿತ ಪುಷ್ಪಗಳ ಸುವಾಸನೆ ತುಂಬಿಹೋಯಿತು. ಗಂಟೆಯ ಶಬ್ದದಿಂದ ಎಚ್ಚೆತ್ತ ಆ ವ್ಯಕ್ತಿ ತನ್ನ ಪತ್ನಿಯನ್ನು ಕುರಿತು ಅಯ್ಯೋ!! ಬೆಳಗಾಗಿ ಹೋಯಿತೇ? ನನ್ನನ್ನೇಕೆ ಎಬ್ಬಿಸಲಿಲ್ಲ, ಸ್ನಾನ ಪೂಜೆಗೆ ಹೊತ್ತಾಯಿತು ಟವೆಲ್ಲು ಕೊಡು ಎಂದು ಪತ್ನಿಗೆ ಹೇಳುತ್ತಾ ಎದ್ದು ಹೊರಟರು. ಮುಂದೆ ವೈದ್ಯಕೀಯ ಜಗತ್ತಿಗೆ ಸವಾಲಾಗುವಂತೆ ಆ ವ್ಯಕ್ತಿ ತನ್ನ ತೊಂದರೆಯಿಂದ ಪಾರಾದನು…. ಇದು ಒಬ್ಬ ವ್ಯಕ್ತಿಯ ನೆನಪಿನ ಕೋಶಗಳಲ್ಲಿ ಉಳಿದುಕೊಳ್ಳಬಹುದಾದ ಅತ್ಯುತ್ತಮ ಅಭ್ಯಾಸ. ಹೀಗೆ ರೂಢಿಸಿಕೊಂಡ ಅಭ್ಯಾಸ ಬದುಕನ್ನು ಬದಲಿಸಬಲ್ಲದು ಎಂಬುದಕ್ಕೆ ಮೇಲಿನ ಘಟನೆ ಒಂದು ಉದಾಹರಣೆ.
ಇಂಗ್ಲೀಷ್ ನ ಪದ habit.. ಅಂದರೆ ಹವ್ಯಾಸ ನಮ್ಮ ಬದುಕನ್ನು ನಾವು ಯೋಚಿಸುವ ಹಾದಿಗಿಂತ ಸಂಪೂರ್ಣವಾದ ವಿಭಿನ್ನ ಹಾದಿಗೆ ಕರೆದೊಯ್ಯುತ್ತದೆ. ಇಂಗ್ಲೀಷ್ ನ ಹ್ಯಾಬಿಟ್ ಪದವನ್ನು ಇಲ್ಲಿ ಬಳಸಲು ಕಾರಣ ಮೊದಲ ಅಕ್ಷರ ಎಚ್ ಅನ್ನು ತೆಗೆದರೆ abit ಎಂದಾಗುತ್ತದೆ. Abit.. ಅರ್ಥ ಸ್ವಲ್ಪ ಎಂದು, ಇನ್ನು ಎರಡನೇ ಅಕ್ಷರ ಎ ಅನ್ನು ತೆಗೆದರೆ bit ಅಂದರೆ ಇನ್ನೂ ಸ್ವಲ್ಪ ಎಂದಾಗುತ್ತದೆ ಮೂರನೇ ಅಕ್ಷರ ಬಿ ತೆಗೆದರೆ it ಎಂದರೆ ಇದು ಎಂದಾಗುತ್ತದೆ ಈ ಪದದ ಮಹತ್ವವೇ ಅಂತಹದ್ದು ನಾವು ಏನನ್ನಾದರೂ ಹವ್ಯಾಸವನ್ನು ರೂಡಿಸಿಕೊಂಡದ್ದೆ ಆದರೆ ಅದು ಕೊಂಚವಾದರೂ ನಮ್ಮಲ್ಲಿ ಉಳಿದು ಹೋಗುತ್ತದೆ ಎಂಬುದಕ್ಕೆ ಇಂಗ್ಲಿಷ್ನಲ್ಲಿನ ಈ ಪದವೇ ಸಾಕ್ಷಿ.
ಚಿಕ್ಕಂದಿನ ಎಷ್ಟೋ ಅಭ್ಯಾಸಗಳು ಜೀವಿತದ ಕೊನೆಯವರೆಗೂ ನಮ್ಮಲ್ಲಿ ರೂಢಿಯಲ್ಲಿರುತ್ತವೆ. ಉದಾಹರಣೆಗೆ ಮುಂಜಾನೆ ಎದ್ದೊಡನೆ ಬ್ರಷ್ ಮಾಡುವ ರೀತಿ, ತಲೆ ಬಾಚುವ ಶೈಲಿ, ಕೂದಲನ್ನು ಸವರಿಕೊಳ್ಳುವ ವಿಧಾನ, ಮಾತನಾಡುವ ರೀತಿ,ನಡುಗೆಯ ಶೈಲಿ ಜೀವಿತದ ಕೊನೆಯವರೆಗೂ ನಮ್ಮೊಂದಿಗೆ ಇರಲು ಕಾರಣ ನಮ್ಮ ಅಭ್ಯಾಸ. ಈ ಅಭ್ಯಾಸಗಳು ನಾವು ಯಾವುದೇ ಯೋಚನೆ ಮಾಡದೆ ತಂತಾನೆ ಕೈಗೊಳ್ಳುವ ಕ್ರಿಯೆಗಳಾಗಿರುತ್ತವೆ.
ಒಂದು ಅಭ್ಯಾಸ ನಮಗೆ ರೂಡಿಗತವಾದಾಗ ನಮ್ಮ ಮೆದುಳಿನ ನರವ್ಯೂಹದ ನೆನಪಿನಕೋಶದಲ್ಲಿ ಅದು ಜತನಗೊಂಡು ಅದು ಪ್ರತಿದಿನ ನಮ್ಮನ್ನು ನಮ್ಮ ಅಭ್ಯಾಸಗಳಿಗೆ ತಕ್ಕಂತೆ ನಡೆದುಕೊಳ್ಳಲು ಪ್ರೇರೇಪಿಸುತ್ತದೆ. ಆದ್ದರಿಂದಲೇ ಎಷ್ಟೋ ಬಾರಿ ಧೂಮ್ರಪಾನ, ಕುಡಿತ ಮುಂತಾದ ಚಟಗಳು ತಪ್ಪು ಎಂದು ಗೊತ್ತಿದ್ದರೂ ಬಿಡಲು ಸಾಧ್ಯವಾಗದೆ ಹೋಗುವುದು.
ಅಭ್ಯಾಸಗಳನ್ನು ಮೂರು ವಿಧಗಳಲ್ಲಿ ನಾವು ವಿಭಾಗಿಸಬಹುದು
*ವೈಯಕ್ತಿಕ ಅಭ್ಯಾಸಗಳು
*ಯಶಸ್ವಿ ಸಂಸ್ಥೆಗಳಲ್ಲಿ ಕೈಗೊಳ್ಳುವ ಅಭ್ಯಾಸಗಳು
*ಸಾಮಾಜಿಕ ಅಭ್ಯಾಸಗಳು
ವೈಜ್ಞಾನಿಕವಾಗಿ ಮತ್ತು ಮನಶ್ಯಾಸ್ತ್ರೀಯವಾಗಿ ಅಭ್ಯಸಿಸಿದಾಗ ನಮ್ಮ ಅರಿವಿಗೆ ಬರುವುದು…..
ಈ ಅಭ್ಯಾಸಗಳು ಸಾಮಾನ್ಯವಾಗಿ ಒಂದು ಸರಪಣಿ ಕ್ರಿಯೆಯನ್ನು ಹೊಂದಿರುತ್ತವೆ.. ಮೊದಲು ಒಂದು ಅಭ್ಯಾಸವನ್ನು ಹೊಂದಲು ಬೇಕಾದ ಸೂಚನೆಯನ್ನು ಮೆದುಳಿಗೆ ಕೊಟ್ಟುಕೊಳ್ಳುವುದು ನಂತರ ಅದನ್ನು ದೈನಂದಿನ ಕ್ರಿಯೆಯನ್ನಾಗಿಸುವುದು ಈ ದೈನಂದಿನ ಕ್ರಿಯೆಯ ಪರಿಣಾಮವಾಗಿ ಉಂಟಾಗುವ ಸಕಾರಾತ್ಮಕ ಫಲಿತಾಂಶಗಳು ಅಭ್ಯಾಸಗಳನ್ನು ಮುಂದುವರೆಸಲು ಸಹಾಯಕವಾಗುತ್ತದೆ.
ಅಭ್ಯಾಸಗಳು ನಮ್ಮ ಜೀವಿತದ ಗತಿಯನ್ನು ಬದಲಿಸುತ್ತದೆ. ಉದಾಹರಣೆಗೆ ಆರೋಗ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಾರಂಭಿಸುವ ಯೋಗ, ವ್ಯಾಯಾಮ, ನಡಿಗೆಯಂತಹ ಅಭ್ಯಾಸಗಳು ನಮ್ಮ ಆಹಾರ ಕ್ರಮಗಳ ಮೇಲೆ ಕೂಡ ತಮ್ಮ ನಿಯಂತ್ರಣವನ್ನು ಹೊಂದುತ್ತದೆ. ಇದರಿಂದ ನಮ್ಮ ಜೀವಿತದ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಮತ್ತು ಫಲವತ್ತತೆ ಕಾಣುತ್ತದೆ. ಇದು ಮತ್ತಷ್ಟು ಸ್ವಯಂಶಿಸ್ತನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಮೊದಲೇ ಹೇಳಿದಂತೆ ಅಭ್ಯಾಸಗಳು ನಮ್ಮ ಮೆದುಳಿನ ಸಾಮರ್ಥ್ಯವನ್ನು ಬಳಸಿ ಒಂದು ಸ್ವಯಂ ಚಾಲಿತ ವ್ಯವಸ್ಥೆಯನ್ನು ಸೃಷ್ಟಿಸಿ ಆ ಮೂಲಕ ನಮ್ಮ ಗ್ರಹಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಮ್ಮ ಮೆದುಳಿನ ಒಂದು ಭಾಗವಾದ ಕಲಿಕೆ, ಗ್ರಹಿಕೆ ಮತ್ತು ಸೃಜನಶೀಲತೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ.
ಚಪಲಗಳು/ ಚಟಗಳು ಮತ್ತು ನಂಬಿಕೆಗಳು…. ನಮ್ಮ ಕೆಲ ಅಭ್ಯಾಸಗಳನ್ನು ನಿಯಂತ್ರಿಸುವಲ್ಲಿ ನಾವು ಸೋಲುತ್ತಿರುವುದು ಅವುಗಳ ಕುರಿತಾದ ನಮ್ಮ ತಪ್ಪು ಗ್ರಹಿಕೆಯೇ ಕಾರಣ. ಉದಾಹರಣೆಗೆ
*ಅದೆಷ್ಟೇ ಪ್ರಯತ್ನ ಮಾಡಿದರು ತೂಕ ಇಳಿಯುವುದಿಲ್ಲ.
*ದುಶ್ಚಟಗಳು ಒಂದು ಬಾರಿ ಸೇರಿಕೊಂಡರೆ ಬಿಡುವುದು ಕಷ್ಟ ಸಾಧ್ಯ
ಇಂತಹ ತಪ್ಪು ಗ್ರಹಿಕೆಗಳು ಕ್ರಮೇಣ ನಂಬಿಕೆಗಳಾಗಿ ಪರಿವರ್ತನೆಯಾಗಿ ಮನುಷ್ಯ ಮೈಮರೆಯಲು ಕಾರಣವಾಗುತ್ತದೆ. ನಿರಂತರವಾದ ಪ್ರಯತ್ನ ಮಾಡಿಯೂ ತೂಕ ಇಳಿಸಲು ಸಾಧ್ಯವಾಗದಿದ್ದರೂ ತೂಕ ಏರುವುದಿಲ್ಲ ಎಂಬ ಸರಳ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಇನ್ನು ದುಶ್ಚಟಗಳು ಒಂದು ನಿಗದಿತ ಸಮಯದಲ್ಲಿ ಧೂಮ್ರಪಾನ ಮತ್ತು ಮಧ್ಯಪಾನ ಮಾಡಬಯಸುವ ವ್ಯಕ್ತಿ ಆ ಸಮಯವನ್ನು ಸ್ವಲ್ಪ ಮುಂದೆ ಹಾಕಿದರೆ ಇಲ್ಲವೇ ಜನರೊಂದಿಗೆ ಬೆರೆತರೆ ತನ್ನ ಈ ಅಭ್ಯಾಸದ ಸರಪಣಿಯನ್ನು ಮುರಿಯಲು ಸಾಧ್ಯ. ಹಲವಾರು ದಿನಗಳ ನಿರಂತರ ಸರಪಣಿಯ ತುಂಡಾಗಿಸುವಿಕೆ ವ್ಯಕ್ತಿಯಲ್ಲಿ ಬದಲಾವಣೆಯನ್ನು ತರಲು ಸಾಧ್ಯ. ಮನುಷ್ಯ ಮನಸ್ಸು ಮಾಡಿದರೆ ಬೆಟ್ಟವನ್ನು ಅಲುಗಾಡಿಸಬಲ್ಲ ಎಂದು ಹೇಳುತ್ತಾರಷ್ಟೇ…
ಬೆಟ್ಟಗಳನ್ನೇ ಅಲುಗಾಡಿಸಬಲ್ಲ ಮನುಷ್ಯನಿಗೆ ಕೆಟ್ಟ ಅಭ್ಯಾಸಗಳು ಅದ್ಯಾವ ಲೆಕ್ಕ? ಮಾನಸಿಕ ದೃಢತೆ, ಅಚಲ ನಂಬಿಕೆ, ಸ್ವಯಂ ಶಿಸ್ತುಗಳು ಮನುಷ್ಯನು ತನ್ನ ಕೆಟ್ಟ ಅಭ್ಯಾಸಗಳನ್ನು ಬದಲಿಸಿಕೊಳ್ಳಲು ಸಹಾಯ ಮಾಡುತ್ತವೆ. ಈ ನಿಟ್ಟಿನಲ್ಲಿ ಆತ ಯಶಸ್ಸಿನ ಪುಟ್ಟ ಪುಟ್ಟ ಅಳತೆ ಗೋಲುಗಳನ್ನು ತನಗೆ ತಾನೇ ಹಾಕಿಕೊಳ್ಳಬೇಕು. ಒಂದು ದಿನ, ಒಂದು ವಾರ, 15 ದಿನ, ಒಂದು ತಿಂಗಳು ಹೀಗೆ ಇಷ್ಟು ಸಮಯದವರೆಗೆ ತನ್ನನ್ನು ತಾನು ಈ ಚಟಗಳಿಂದ ದೂರವಿಟ್ಟುಕೊಂಡರೆ ತನ್ನನ್ನು ತಾನು ಅಭಿನಂದಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಒಂದು ಬಾರಿ ಆತ್ಮವಿಶ್ವಾಸ ಹೊಂದಿದ ವ್ಯಕ್ತಿ ಮತ್ತೆ ಕುಸಿಯದಂತೆ ನಿರಂತರವಾಗಿ ಪ್ರಯತ್ನಗಳನ್ನು ಮಾಡಿದ ವ್ಯಕ್ತಿ ಸಮಾಜದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸಬಲ್ಲ.
ಇನ್ನು ಕೆಲವು ಪುಟ್ಟ ದುರಭ್ಯಾಸಗಳು ಮನುಷ್ಯನಲ್ಲಿ ಇರುತ್ತವೆ.. ಒಮ್ಮಿಂದೊಮ್ಮೆಲೆ ಸಿಟ್ಟಿಗೇಳುವುದು, ಉಗುರು ಕಡಿಯುವುದು, ಬೇರೆಯವರೊಂದಿಗೆ ಮಾತನಾಡುವಾಗ ಮೂಗಿನ ಹೊರಳೆಗಳಲ್ಲಿ ಕೈ ಹಾಕಿ ತಿರುಗಿಸುವುದು, ಎಲ್ಲವೂ ತನಗೆ ಗೊತ್ತಿದೆ ಎಂಬಂತೆ ಮಾತನಾಡುವುದು, ಬೇರೆಯವರನ್ನು ಅಪಹಾಸ್ಯ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡುವುದು, ಉಗುಳುವುದು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದೇ ಇರುವುದು, ಟ್ರಾಫಿಕ್ ಸಿಗ್ನಲ್ಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದು ಮುಂತಾದ ಅಭ್ಯಾಸಗಳು ನಿರಂತರವಾಗಿ ಜಾರಿಯಲ್ಲಿದ್ದರೆ ಮುಂದೆ ಬೆಳೆದು ಹೆಮ್ಮರವಾಗಿ ನಮ್ಮನ್ನು ಮಾನಸಿಕವಾಗೀ ಕಂಗೆಡಿಸುತ್ತವೆ. ಇವುಗಳನ್ನು ನಿಯಂತ್ರಿಸಲು ಈ ಅಭ್ಯಾಸಗಳು ತಪ್ಪು ಎಂಬುದನ್ನು ಮನಸ್ಸಿಗೆ ಪದೇ ಪದೇ ಮನದಟ್ಟು ಮಾಡಿಕೊಡುತ್ತಾ ನಿಧಾನವಾಗಿ, ಹಂತ ಹಂತವಾಗಿ ತಾಳ್ಮೆಯನ್ನು ತಂದುಕೊಳ್ಳುತ್ತಾ ನಮ್ಮ ಈ ದುರಭ್ಯಾಸಗಳಿಂದ ಆಗುವ ಕೆಡುಕುಗಳನ್ನು ಪುನರ್ಮನನ ಮಾಡಿಕೊಳ್ಳುತ್ತಾ ಅವುಗಳ ಮೇಲೆ ಹಿಡಿತ ಸಾಧಿಸಬೇಕು.
ಇನ್ನು ನಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ, ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ, ಕ್ರೀಡಾ ತರಬೇತಿ ಶಿಬಿರಗಳಲ್ಲಿ ಉತ್ತಮ ಫಲಿತಾಂಶವನ್ನು ಕಾಣಲು ಹೊಸ ರೀತಿಯ ತರಬೇತಿಗಳನ್ನು ನೀಡುವ ಮೂಲಕ ವ್ಯಕ್ತಿಗತ ಸಮಸ್ಯೆಗಳ ಮೂಲವನ್ನು ಸಮಾಲೋಚನೆಗಳ ಮೂಲಕ ಬಗೆಹರಿಸುವ ಮತ್ತು ವೈಯಕ್ತಿಕ ಕಾಳಜಿ ವಹಿಸುವುದು. ಸಣ್ಣ ಸಣ್ಣ ಯಶಸ್ಸುಗಳಿಗೆ ಅಭಿನಂದನೆಗಳು ಮತ್ತು ಪ್ರೋತ್ಸಾಹದಾಯಕ ಉಡುಗೊರೆಗಳನ್ನು ನೀಡುವ ಮೂಲಕ ಹುರಿದುಂಬಿಸುವುದು ಅವಶ್ಯಕತೆ ಬಿದ್ದಲ್ಲಿ ತಮ್ಮ ಉದ್ಯೋಗಿಗಳ ವೈಯುಕ್ತಿಕ ಏಳಿಗೆಗೆ ಅನುಕೂಲವಾಗುವಂತೆ ಅವರಿಗೆ ಹೆಚ್ಚಿನ ತರಬೇತಿ ನೀಡುವುದು ತನ್ಮೂಲಕ ಸಂಸ್ಥೆಯ ಉನ್ನತಿಯನ್ನು ಸಾಧಿಸುವುದು ಅತಿ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಕಂಡುಬರುತ್ತದೆ. ಮೇಲಧಿಕಾರಿಯನ್ನು ಟೀಮ್ ಲೀಡರ್ ಎಂದು ಕರೆಯುತ್ತಾ ಕಿರಿ ಕಿರಿಯರೆಲ್ಲರೂ ಒಗ್ಗಟ್ಟಿನಿಂದ ಒಂದು ಗುಂಪಾಗಿ ಕೆಲಸ ಮಾಡುತ್ತಾ ಒಳ್ಳೆಯ ಸ್ಪರ್ಧಾತ್ಮಕ ಬೆಳವಣಿಗೆಗಳ ಮೂಲಕ ತಮ್ಮ ಗುರಿಯನ್ನು ತಲುಪುವುದು ಈ ಸಂಸ್ಥೆಗಳ ಮುಖ್ಯ ಆದ್ಯತೆಯಾಗಿರುತ್ತದೆ. ಮಾನವ ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಅವುಗಳ ಉಳಿಸಿಕೊಳ್ಳುವಿಕೆಗಾಗಿ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು ಈ ಅಧಿಕಾರಿಗಳು ಮನಶಾಸ್ತ್ರದಲ್ಲಿ ಹೆಚ್ಚಿನ ಪರಿಣತಿಯನ್ನು ಹೊಂದಿದ್ದು ಔದ್ಯೋಗಿಕ ಕ್ಷೇತ್ರದಲ್ಲಿ ಜನರು ಅನುಭವಿಸಬಹುದಾದ ತೊಂದರೆಗಳು ಕೌಟುಂಬಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಗಳಿಂದಾಗಿ ಉಂಟಾಗುವ ಕೀಳರಿಮೆ ಮತ್ತು ಅವುಗಳ ಪರಿಣಾಮವಾಗಿ ಪ್ರಗತಿಯಲ್ಲಿ ಕುಂಠಿತತೆ ಹೊಂದಿರುವವರನ್ನು ವಿಶೇಷವಾಗಿ ಆಯ್ಕೆ ಮಾಡಿ ಅವರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಲ್ಲಿ ಮತ್ತು ವ್ಯಕ್ತಿತ್ವವನ್ನು ವಿಕಸಿತಗೊಳಿಸಿಕೊಳ್ಳಲು ಪರ್ಸನಾಲಿಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ನಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಈ ಮಾನವ ಸಂಪನ್ಮೂಲ ಅಧಿಕಾರಿಗಳು ಔದ್ಯೋಗಿಕ ಸಂಸ್ಥೆ ಮತ್ತು ಉದ್ಯೋಗಿಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ.
ಇನ್ನು ಸಾಮಾಜಿಕವಾಗಿ ಮನುಷ್ಯನು ಕೆಲವು ಅಭ್ಯಾಸಗಳನ್ನು ಪಾಲಿಸಲೇಬೇಕು. ನಾಗರಿಕ ಹಕ್ಕುಗಳನ್ನು ಹೊಂದಿರುವ ಪ್ರತಿಯೊಬ್ಬ ಮನುಷ್ಯನು ಸಮಾಜದ ವಿವಿಧ ಸ್ಥಳಗಳಲ್ಲಿ ಹೇಗೆಂದರೆ ಹಾಗೆ ವರ್ತಿಸದೆ ಸಾಮಾಜಿಕ ನಡಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮಂದಿರಗಳಲ್ಲಿ ಪ್ರವೇಶಿಸುವಾಗ ಅಲ್ಲಿ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಪಾಲಿಸಲೇಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಾಗ, ರಸ್ತೆಗಳಲ್ಲಿ ನಡೆಯುವಾಗ ಒಟ್ಟಿನಲ್ಲಿ ಯಾವುದೇ ರೀತಿಯ ಸಾರ್ವಜನಿಕ ಜೀವನದಲ್ಲಿ ಅಲ್ಲಲ್ಲಿ ಬರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸೌಹಾರ್ದಯುತ ಜೀವನವನ್ನು ಸಾಧಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೂಡ ಈ ಅಭ್ಯಾಸಗಳು ಸೂಕ್ತ. ನಿಯಮ ಬಾಹಿರ ಅಭ್ಯಾಸಗಳು ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದರೆ ಶಿಕ್ಷೆಗೆ ಗುರಿಯಾಗಬಹುದು ಜೊತೆಗೆ ಕೆಲವೊಮ್ಮೆ ಜೀವ ಹಾನಿಗೂ ಕಾರಣವಾಗಬಹುದು. ಆದ್ದರಿಂದ ಉತ್ತಮ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಸಮಾಜದ ನಾಗರಿಕರಾಗಿ ಬಾಳಲು ಉತ್ತಮ ಅಭ್ಯಾಸಗಳು ಮನುಷ್ಯನಿಗೆ ಅತ್ಯಂತ ಅವಶ್ಯಕ.
ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವಾಗ ಮತ್ತು ಹೊಸ ಅಭ್ಯಾಸಗಳನ್ನು ರೂಡಿಸಿಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.
*ಚಿಕ್ಕ ಚಿಕ್ಕ ಗುರಿಗಳನ್ನು ಇಟ್ಟುಕೊಂಡು ಒಂದೊಂದೇ ಹಂತಗಳಲ್ಲಿ ಅವುಗಳನ್ನು ತಲುಪಲು ಪ್ರಯತ್ನಿಸಿ
*ಅಭ್ಯಾಸಗಳನ್ನು ಸುಲಭ ಮತ್ತು ಸರಳವಾಗಿಸಿಕೊಳ್ಳಲು ಮುಂಚಿತವಾಗಿಯೇ ನಿಮ್ಮನ್ನು ನೀವು ಮಾನಸಿಕವಾಗಿ ತಯಾರು ಮಾಡಿಕೊಳ್ಳುವುದರ ಜೊತೆಗೆ ಅಗತ್ಯವಾದ ವಸ್ತುಗಳನ್ನು ಮೊದಲೇ ಎತ್ತಿಟ್ಟುಕೊಳ್ಳಿ. ಉದಾಹರಣೆಗೆ ಪ್ರತಿದಿನ ಮುಂಜಾನೆ ಜಾಗಿಂಗ್ ಮಾಡಬೇಕು ಎಂದು ಯೋಚಿಸಿದ್ದರೆ ಹಿಂದಿನ ದಿನ ರಾತ್ರಿಯೇ ನಿಮ್ಮ ಜಾಗಿಂಗ್ ಟ್ರ್ಯಾಕ್ ಸೂಟ್ ನ್ನು, ಶೂಗಳನ್ನು ಮತ್ತು ಸಾಕ್ಸುಗಳನ್ನು ಎತ್ತಿಟ್ಟುಕೊಳ್ಳಿ
*ಹೊಸ ಅಭ್ಯಾಸಗಳನ್ನು ನೀವು ರೂಢಿಸಿಕೊಳ್ಳುತ್ತಿರುವ ವಿಷಯವನ್ನು ಮನೆಯ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಹೇಳಿಕೊಳ್ಳಿ. ಅವರ ಹುರಿದುಂಬಿಸುವಿಕೆ ನಿಮಗೆ ಸಹಾಯಕವಾಗುತ್ತದೆ.
- ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳುವಾಗ ತಾಳ್ಮೆಯಿಂದ ವರ್ತಿಸಬೇಕು. ಒಂದೆರಡು ದಿನಗಳಲ್ಲಿ, ವಾರಗಳಲ್ಲಿ, ತಿಂಗಳಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಆದ್ದರಿಂದ ಚಿಕ್ಕ ಚಿಕ್ಕ ಯಶಸ್ಸುಗಳನ್ನು ಸಂಭ್ರಮಿಸಿ.
-ನೀವು ರೂಡಿಸಿಕೊಳ್ಳುತ್ತಿರುವ ಅಭ್ಯಾಸಗಳ ಪ್ರಗತಿ ವೈಯಕ್ತಿಕವಾಗಿ ನಿಮಗೂ ಮತ್ತು ನಿಮ್ಮ ಕುಟುಂಬ ಮತ್ತು ಜೊತೆ ಇರುವವರಿಗೆ ಗೋಚರವಾಗುವಂತೆ ಇರಲಿ. ಇದು ನಿಮ್ಮಲ್ಲಿ ಉತ್ಸಾಹವನ್ನು ಹುಮ್ಮಸ್ಸನ್ನು ತುಂಬುತ್ತದೆ
ಅಂತಿಮವಾಗಿ ನಮ್ಮ ಬದುಕಿನ ಹಾದಿಯನ್ನು ನಿಚ್ಚಳವಾಗಿ ಬದಲಾಯಿಸುವ ಅಭ್ಯಾಸಗಳನ್ನು ರೂಢಿಸಿಕೊಂಡು ಜೀವನದಲ್ಲಿ ಮುಂದೆ ಸಾಗೋಣ ಇತರರಿಗೂ ಮಾದರಿಯಾಗೋಣ.

– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

