ವಿಜಯಪುರ: ದೇಶದ ಅಭ್ಯುದಯಕ್ಕೆ ಎಲ್ಲ ಅರ್ಹ ಮತದಾರರು ಮತದಾನದ ಹಕ್ಕನ್ನು ಚಲಾಯಿಸಬೇಕು. ಸಂವಿಧಾನ ಕಲ್ಪಿಸಿದ ಮತದಾನದಿಂದ ಯಾರೂ ವಂಚಿತರಾಗದೇ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ್ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಭಿವೃದ್ದಿಯಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ೧೮ ವರ್ಷ ಪೂರೈಸಿದ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ ಪ್ರತಿಯೊಬ್ಬರು ಮತದಾನದಿಂದ ದೂರ ಉಳಿಯದೇ ಮತ ಚಲಾಯಿಸಬೇಕು. ನಗರ ಪ್ರದೇಶದ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಮತದಾರರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮತದಾರರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ಹಾಗೂ ಮಹತ್ವ ತಿಳಿಸುವಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮತದಾರ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿ, ೨೦೧೧ರಿಂದ ದೇಶಾದ್ಯಂತ ರಾಷ್ಟ್ರೀಯ ಮತದಾನ ದಿನವನ್ನು ಆಚರಿಸಲಾಗುತ್ತಿದೆ. ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬುದು ಧ್ಯೇಯವಾಕ್ಯದೊಂದಿಗೆ ಮತದಾರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಈ ವರ್ಷ ೩೭ ಸಾವಿರ ಯುವ ಮತದಾರರು ಜಿಲ್ಲೆಯ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವ ಮೂಲಕ ಸೇರ್ಪಡೆಗೊಂಡಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಟೋಲ್‌ಫ್ರೀ ಸಂಖ್ಯೆ ೧೯೫೦ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೋನಾವಣೆ ಮಾತನಾಡಿ, ನಮಗೆ ದೊರಕಿದ ಮತದಾನದ ಕರ್ತವ್ಯವನ್ನು ಮತದಾನ ಮಾಡುವ ಮೂಲಕ ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮವಾಗಿ ಮತದಾನದ ಹಕ್ಕನ್ನು ಪಡೆದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು. ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಿವಿಧ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಪ್ರೌಢಶಾಲೆ, ಪದವಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮದ ಸಂಪೂರ್ಣ ವಿವರನ್ನು ವಿಶೇಷಚೇತನರಿಗೆ ಸಂಜ್ಞೆ ಭಾಷೆಯ ಮೂಲಕ ರಾಚಯ್ಯ ಮಠಪತಿ ತಿಳಿಸಿಕೊಟ್ಟರು.
ಎಂ.ಬಿ.ರಜಪೂತ ವಿಶೇಷ ಉಪನ್ಯಾಸ ನೀಡಿದರು.
ಪ್ರೊಬೆಷನರಿ ಐಪಿಎಸ್ ಅಧಿಕಾರಿ ಶ್ರೀಮತಿ ಶಾಲು, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

