ಮೊದಲ ಪುಟ
ಅಥಣಿ: ಇಡೀ ಪಟ್ಟಣ ನಿದ್ದೆಯಲ್ಲಿದ್ದಾಗ ಜತ್ ರಸ್ತೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಸುಕಿನ 3:30ಕ್ಕೆ ಕಾಣಿಸಿಕೊಂಡ ಒಂದು ಕಿಡಿ, ಕೆಲವೇ ನಿಮಿಷಗಳಲ್ಲಿ ಕೋಟ್ಯಂತರ ಕನಸುಗಳನ್ನು ಸುಟ್ಟು ಬೂದಿ ಮಾಡಿದೆ.
ಪಟ್ಟಣದ ಹೆಸರಾಂತ ಬ್ರಹ್ಮಾ ಎಂಟರ್ಪ್ರೈಸಸ್ ಪೀಠೋಪಕರಣ, ಬ್ರಾಂಡೆಡ್ ಬಟ್ಟೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ದೊಡ್ಡ ಮಳಿಗೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.
ಏನಾಯಿತು?: ಮಧ್ಯರಾತ್ರಿ ಏಕಾಏಕಿ ಮಳಿಗೆಯೊಳಗಿಂದ ಹೊಗೆ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಇಡೀ ಅಂಗಡಿಯನ್ನು ಆವರಿಸಿದೆ. ಒಳಗಿದ್ದ ಸೋಫಾ, ಬೆಡ್, ಟಿವಿ, ಫ್ರಿಜ್, ದುಬಾರಿ ಬಟ್ಟೆಗಳು – ಯಾವುದೂ ಉಳಿದಿಲ್ಲ. ಎಲ್ಲವೂ ಕಣ್ಣೆದುರೇ ಸುಟ್ಟು ಕರಕಲಾಗಿದೆ.
ಸದ್ದು ಕೇಳಿ ಓಡಿ ಬಂದ ಸ್ಥಳೀಯರು ನೀರು ಹಾಕಿ ನಂದಿಸಲು ಯತ್ನಿಸಿದರೂ ಬೆಂಕಿಯ ರೌದ್ರಾವತಾರದ ಮುಂದೆ ಅವರ ಪ್ರಯತ್ನ ವಿಫಲವಾಗಿದೆ.
ಅಗ್ನಿಶಾಮಕ ದಳದ ಹರಸಾಹಸ: ಸುದ್ದಿ ತಿಳಿದು ಬಂದ ಅಗ್ನಿಶಾಮಕ ವಾಹನ, ಬೆಂಕಿಯ ತೀವ್ರತೆಗೆ ನೀರು ಸಾಲದೆ ಹಲವು ಬಾರಿ ವಾಪಸ್ ಹೋಗಿ ನೀರು ತುಂಬಿ ತರಬೇಕಾಯಿತು. ಸುಮಾರು 2 ಗಂಟೆಗಳ ಹೋರಾಟದ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ರೂ.100 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಶಾರ್ಟ್ ಸರ್ಕ್ಯೂಟ್ ನಿಂದಲೇ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಅದೃಷ್ಟವಶಾತ್ ಮಳಿಗೆಯಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಭೀಕರವಾಗುತ್ತಿತ್ತು.
ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

