ಮೈಸೂರು ದಸರಾದಲ್ಲಿ ಸಿಎಂ ಕಪ್ ಬಿಲ್ಲುಗಾರಿಕೆ ಪಂದ್ಯಾವಳಿಯಲ್ಲಿ ಚಿನ್ನ ಮತ್ತು ಇತರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದ ಬಿಲ್ಲುಗಾರ್ತಿ ದೇವಮ್ಮ ಮಾನಪ್ಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೈಸೂರು ದಸರಾದಲ್ಲಿ ಸಿಎಂ ಕಪ್ ಬಿಲ್ಲುಗಾರಿಕೆ ಪಂದ್ಯಾವಳಿಯಲ್ಲಿ ಚಿನ್ನ ಮತ್ತು ಇತರ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದ ಬಿಲ್ಲುಗಾರ್ತಿ ತನ್ನ ಸಾಧನೆಗೆ ಕಾರಣರಾದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಷಿ ಘಟನೆ ಸೋಮವಾರ ನಡೆಯಿತು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಪುರ ಗ್ರಾಮದ ಬಡ ಕುಟುಂಬದ ದೇವಮ್ಮ ಮಾನಪ್ಪ ಎನ್ನುವ ಯುವತಿ ದ್ವಿತೀಯ ಪಿಯುಸಿ ಓದುತ್ತಿದ್ದು, ಬಿಲ್ಲುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಆದರೆ, ಆಕೆಗೆ, ಬಿಲ್ಲು, ಬಾಣ ಕ್ರೀಡಾ ಸಲಕರಣೆ ಖರೀದಿಲು ಆರ್ಥಿಕ ಸಮಸ್ಯೆ ಎದುರಾಗಿತ್ತು. ಈ ವಿಷಯ ತಿಳಿದ ಸಚಿವ ಎಂ. ಬಿ. ಪಾಟೀಲ ಅವರು, ಯವತಿಗೆ ಕಳೆದ ವರ್ಷ ಸಿಎಸ್‌ಆರ್ ಫಂಡ್‌ನಲ್ಲಿ ರೂ. 3.50 ಲಕ್ಷ ಹಣಕಾಸಿನ ನೆರವು ನೀಡಿ ಬಿಲ್ಲುಗಾರಿಕೆ ಕಿಟ್ ಒದಗಿಸಿದ್ದರು.
ಹೊಸ ಬಿಲ್ಲು, ಬಾಣ ಗಳೊಂದಿಗೆ ತನ್ನ ಗುರಿಯತ್ತ ಮುನ್ನುಗ್ಗಿದ ಯುವತಿ ಮೈಸೂರು ದಸರಾದಲ್ಲಿ ಬಿಲ್ಲಗಾರಿಕೆಯಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ಅಲ್ಲದೇ, ಹಲವು ರಾಜ್ಯ, ರಾಷ್ಟ್ರದ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ ಅನೇಕ ಪದಕಗಳನ್ನು ಗೆದ್ದಿದ್ದಾಳೆ. ಈ ಸಂತಸವನ್ನು ಹಂಚಿಕೊಳ್ಳಲು ಪ್ರತಿಭಾವಂತ ಬಿಲ್ಲುಗಾರ್ತಿ ಸುರಪುರದಿಂದ ತನ್ನ ಸಹೋದರನೊಂದಿಗೆ ವಿಜಯಪುರಕ್ಕೆ ಬಂದು ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿಯಾದಳು. ಅಲ್ಲದೇ, ತಾನು ಮೈಸೂರು ದಸರಾ, ಗೋವಾ, ಉಡುಪಿ ಮುಂತಾದ ಕಡೆ ನಡೆದ ಸ್ಪರ್ಧೆಗಳಲ್ಲಿ ಗೆದ್ದ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಸಚಿವರಿಗೆ ತೋರಿಸಿ ಸಂತಸ ವ್ಯಕ್ತಪಡಿಸಿದಳು. ತನ್ನ ಸಾಧನೆಗೆ ಸಚಿವರು ನೀಡಿದ ಸಹಾಯ ಪ್ರಮುಖ ಕಾರಣ ಎಂದು ಧನ್ಯವಾದ ಹೇಳಿದಳು.
ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಎಂ. ಬಿ. ಪಾಟೀಲ ಅವರು, ಗ್ರಾಮೀಣ ಪ್ರತಿಭೆಗೆ ನೀಡಿದ ಪ್ರೋತ್ಸಾಹದಿಂದಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್ ದಾರಿಯಲ್ಲಿ ಕಲ್ಯಾಣ ಕರ್ನಾಟಕದ ಬಿಲ್ಲುಗಾರ್ತಿ ದೇವಮ್ಮ ಮುಂದೆ ಸಾಗಲಿ ಎಂದು ಶುಭ ಹಾರೈಸಿದರು.
ಬಡ ಕುಟುಂಬದ ದೇವಮ್ಮ ತಮ್ಮ ಸಾಧನೆಯ ಪಯಣವನ್ನು ಹಂಚಿಕೊಂಡಿದ್ದು, ಅವರ ಪರಿಶ್ರಮ ಮತ್ತು ಛಲಕ್ಕೆ ಮನಸೋತಿದ್ದೇನೆ. ತಂದೆಯನ್ನು ಕಳೆದುಕೊಂಡು, ಸೀಮಿತ ಆರ್ಥಿಕ ಸೌಲಭ್ಯಗಳ ನಡುವೆಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವ ದೇವಮ್ಮ ಅವರ ಕನಸುಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಅವರಿಗೆ ಮುಂದಿನ ದಿನಗಳಲ್ಲಿ ಒಲಿಂಪಿಕ್ ಮಟ್ಟದ ತರಬೇತಿ ಮತ್ತು ಅಗತ್ಯ ಕ್ರೀಡಾ ಪರಿಕರಗಳಿಗಾಗಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಪ್ರತಿಭೆಗೆ ಪ್ರೋತ್ಸಾಹ, ಪರಿಶ್ರಮಕ್ಕೆ ಬೆಂಬಲ ದೊರೆತರೆ ಗ್ರಾಮೀಣ ಕ್ರೀಡಾಪಟುಗಳೂ ಜಾಗತಿಕ ವೇದಿಕೆಯಲ್ಲಿ ಮಿಂಚಬಲ್ಲರು. ದೇವಮ್ಮ ಅವರು ಒಲಿಂಪಿಕ್ಸ್ನಲ್ಲಿ ಭಾರತದ ಪರ ಪದಕ ಗೆಲ್ಲುವ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

