ಮಳೆ ಕೊರತೆ, ಕಬ್ಬಿನ ಬೆಳವಣಿಗೆ ಕುಂಠಿತ | ರಿಕವರಿ ಆತಂಕದಲ್ಲಿ ರೈತರು, ಸಕ್ಕರೆ ಕಾರ್ಖಾನೆಗಳು!
ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಳೆಯ ಕೊರತೆಯಿಂದ ಕಬ್ಬಿನ ಬೆಳವಣಿಗೆ ಕುಂಠಿತವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಸಕ್ಕರೆ ಅಂಶ ಸಿಗದೆ ರಿಕವರಿ ಕುಸಿಯುವ ಆತಂಕ ಕಬ್ಬು ಬೆಳೆಗಾರರನ್ನು ಕಾಡುತ್ತಿದೆ. ಒಂದೆಡೆ ಬೆಳೆ ಬೆಳೆಯಲು ಮಾಡಿದ ಖರ್ಚು ಕೈಗೆಟುಕದ ಸ್ಥಿತಿಯಲ್ಲಿದ್ದರೆ, ಮತ್ತೊಂದೆಡೆ ಕಬ್ಬಿನ ಇಳುವರಿ ಹಾಗೂ ರಿಕವರಿ ಕಡಿಮೆಯಾದರೆ ಅದರ ಪರಿಣಾಮ ರೈತರ ಆದಾಯದ ಜೊತೆಗೆ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯ ಮೇಲೂ ಬೀಳಲಿದೆ. ಇಂತಹ ಸಂಕಷ್ಟದ ನಡುವೆ ರೈತರು ಮತ್ತು ಕಾರ್ಖಾನೆಯ ಉಳಿವಿಗೆ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಮರಗೂರ–ಧೂಳಖೇಡ ಬಳಿಯ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ನಡೆದ 9ನೇ ವರ್ಷದ ಅಗ್ನಿ ಪ್ರದೀಪನ ಹಾಗೂ ಬಾಯ್ಲರ್ ಮತ್ತು ಕೆನಕ್ಯಾರಿಯರ್ (ಮೋಳಿ) ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಭೀಮಾಶಂಕರ ಕಾರ್ಖಾನೆ ನನ್ನೊಬ್ಬನದ್ದಲ್ಲ. ಇದು ಇಂಡಿ, ಸಿಂದಗಿ ಹಾಗೂ ಚಡಚಣ ಭಾಗದ ರೈತರ ಕನಸಿನ ಕೂಸು. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ರೈತರ ಕೈಯಲ್ಲಿದೆ. ಆದರೆ, ಪ್ರಕೃತಿಯ ವೈಪರೀತ್ಯದಿಂದ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಕಬ್ಬಿನ ಬೆಳವಣಿಗೆಗೆ ಹೊಡೆತ ಬಿದ್ದಿದೆ. ಕಬ್ಬಿನಲ್ಲಿ ಸಕ್ಕರೆ ಅಂಶ ಕಡಿಮೆಯಾದರೆ ರಿಕವರಿ ಕುಸಿಯುತ್ತದೆ. ರಿಕವರಿ ಕಡಿಮೆಯಾದರೆ ಸಕ್ಕರೆ ಉತ್ಪಾದನೆ ಇಳಿಕೆಯಾಗುತ್ತದೆ. ಇದರಿಂದ ರೈತರು ಮತ್ತು ಕಾರ್ಖಾನೆಗಳೆರಡೂ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ” ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಕ್ಕರೆಯ ಕನಿಷ್ಠ ಮಾರಾಟ ದರ ಪ್ರತಿ ಕೆ.ಜಿ.ಗೆ ₹31 ಇರುವುದರಿಂದ ಉತ್ಪಾದನಾ ವೆಚ್ಚ ಹಾಗೂ ಇತರ ಆರ್ಥಿಕ ಒತ್ತಡಗಳ ನಡುವೆ ರೈತರಿಗೆ ಹೆಚ್ಚಿನ ದರ ನೀಡುವುದು ಕಷ್ಟವಾಗುತ್ತಿದೆ. ಸರ್ಕಾರದ ನಿರ್ಧಾರಕ್ಕೆ ತಲೆಬಾಗುತ್ತೇನೆ; ಸರ್ಕಾರದ ನಿರ್ಧಾರವೇ ನನ್ನ ನಿರ್ಧಾರ ಎಂದು ಅವರು ಹೇಳಿದರು.
ರೈತರು ಕೈಜೋಡಿಸಿದರೆ ಕಾರ್ಖಾನೆಗೆ ಬಲ
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಉತ್ತಮ ಗುಣಮಟ್ಟದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಅವು ದೀರ್ಘಕಾಲ ಬಾಳಿಕೆ ಬರುವ ಸಾಮರ್ಥ್ಯ ಹೊಂದಿವೆ. ಆದರೆ ಯಂತ್ರೋಪಕರಣಗಳ ಗುಣಮಟ್ಟವೊಂದರಿಂದಲೇ ಕಾರ್ಖಾನೆ ಲಾಭದಾಯಕವಾಗಲು ಸಾಧ್ಯವಿಲ್ಲ. ರೈತರು ಸರಿಯಾದ ಸಮಯಕ್ಕೆ ಕಟಾವಿಗೆ ಯೋಗ್ಯವಾದ ಕಬ್ಬನ್ನು ಪೂರೈಸುವುದು, ಉತ್ತಮ ರಿಕವರಿ ದೊರೆಯುವಂತೆ ಕೃಷಿ ನಿರ್ವಹಣೆ ಮಾಡುವುದು ಹಾಗೂ ಕಾರ್ಖಾನೆಯೊಂದಿಗೆ ಸಹಕಾರ ಹೊಂದುವುದು ಅಗತ್ಯ ಎಂದು ಹೇಳಿದರು.
ಹತ್ತಳ್ಳಿ ಮಠದ ಗುರು ಗುರುಪಾದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಖೇಡಗಿ ಮಠದ ಶಿವಬಸವ ಮಹಾಸ್ವಾಮಿಗಳು, ತಡವಲಗಾ ಮಠದ ಷ.ಬ್ರ. ಅಭಿನವ ರಾಚೋಟ್ಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ವಿಜಯ ಮಹಾಂತೇಶ ಶಿವಾಚಾರ್ಯ ಮಹಾಸ್ವಾಮಿಗಳು, ಎಂ.ಆರ್. ಪಾಟೀಲ, ಭೀಮುಕಾಕಾ ಕವಲಗಿ, ಶ್ರೀಮಂತ ಇಂಡಿ, ಜೇಟ್ಟೆಪ್ಪ ರವಳಿ, ನೀಲಕಂಠ ರೂಗಿ, ಸಣ್ಣಪ್ಪ ತಳವಾರ, ಬಿ.ಸಿ. ಸಾವಕಾರ, ಧರ್ಮಣ್ಣ ವಾಲಿಕಾರ ಸೇರಿದಂತೆ ಇಂಡಿ, ಸಿಂದಗಿ ಮತ್ತು ಚಡಚಣ ಭಾಗದ ರೈತರು ಉಪಸ್ಥಿತರಿದ್ದರು.

