ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ | ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತಟದಲ್ಲಿರುವ ಪುಣ್ಯಕ್ಷೇತ್ರ ಕೊಲ್ಹಾರ ಪಟ್ಟಣದ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಬನಶಂಕರಿ ದೇವಿಯ ಪುರಾಣ ಪ್ರವಚನದ ಮಹಾಮಂಗಲ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮ ಅ.20ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಜರುಗಲಿದೆ.
1948ರ ಪರಾಭವ ನಾಮ ಸಂವತ್ಸರದ ಆಶ್ವಿನ ಶುದ್ಧ ಪ್ರತಿಪದೆಯ ಅಂಗವಾಗಿ ಅ.11ರಿಂದ ಆರಂಭಗೊಂಡಿರುವ ಶ್ರೀ ಬನಶಂಕರಿ ದೇವಿಯ ಘಟಸ್ಥಾಪನೆ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಮತ್ತು ಸಡಗರದಿಂದ ನಡೆಯುತ್ತಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಪುರಾಣ ಪ್ರವಚನಕಾರ ಶ್ರೀ ಮಲ್ಲೇಶಪ್ಪ ಶರಣರು (ಗೆದ್ದಪ್ಪನವರ) ಅವರಿಂದ ಪ್ರತಿದಿನ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ಶ್ರೀ ಬನಶಂಕರಿ ದೇವಿಯ ಪುರಾಣ ಪ್ರವಚನ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಮಹಿಮೆ ಹಾಗೂ ಧಾರ್ಮಿಕ ಸಂದೇಶಗಳನ್ನು ಆಲಿಸುತ್ತಿದ್ದಾರೆ.
ಅ.20ರಂದು ಬೆಳಗ್ಗೆ 10 ಗಂಟೆಗೆ ಅಶ್ವಿನ ಶುದ್ಧ ನವಮಿ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪುರಾಣ ಮಹಾಮಂಗಲ ನೆರವೇರಲಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಪುರಾಣ ಮಹಾಮಂಗಲದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಆಗಮಿಸುವ ಭಕ್ತಾದಿಗಳಿಗೆ ಅನ್ನಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಬಸಶಂಕರಿ ದೇವಿಯ ದರ್ಶನ ಪಡೆದು, ಪುರಾಣ ಮಹಾಮಂಗಲ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನಪ್ರಸಾದದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವತಿಯಿಂದ ಪ್ರಕಟಣೆಯಲ್ಲಿ ಕೋರಲಾಗಿದೆ.

