ತಾನು ರಚಿಸಿದ ಪುಸ್ತಕದಿಂದ ಬಂದಿರುವ ರೂ.10 ಸಾವಿರ ರಾಯಲ್ಟಿ ಹಣವನ್ನು ಸಚಿವರಿಗೆ ಹಸ್ತಾಂತರಿಸಿದ ಶಿವಾನಿ ಬಿರಾದಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: 10 ವರ್ಷದ ವಿದ್ಯಾರ್ಥಿನಿಯೊಬ್ಬಳು ತಾನು ರಚಿಸಿದ ಪುಸ್ತಕದಿಂದ ಬಂದಿರುವ ರೂ.10 ಸಾವಿರ ರಾಯಲ್ಟಿ ಹಣವನ್ನು ವೃಕ್ಷಥಾನ್ ಹೆರಿಟೇಜ್ ರನ್ ಗೆ ದೇಣಿಗೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾಳೆ.
ವಿಜಯಪುರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಐಸಿಎಸ್ಇ ಶಾಲೆಯ 10 ವರ್ಷದ ಬಾಲಪ್ರತಿಭೆ ಶಿವಾನಿ ಬಿರಾದಾರ ಇಂದು ರವಿವಾರ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿಯಾಗಿ ದೇಣಿಗೆಯ ಚೆಕ್ ನೀಡಿದಳು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತನ್ನ ಸೃಜನಶೀಲ ಬರವಣಿಗೆಯಿಂದ ಮ್ಯಾಜಿಕ್ ಟೇಲ್ಸ್ ಫಾರ್ ಲಿಟಲ್ ಹಾರ್ಟ್ಸ್(Magic Tales for Little Hearts) ಎಂಬ ಪುಸ್ತಕವನ್ನು ರಚಿಸಿ ಅದರಿಂದ ಬಂದ ₹10,000 ರಾಯಲ್ಟಿ(ಪುಸ್ತಕ ಮಾರಾಟದಿಂದ ಬರುವ ಹಣವನ್ನು ಲೇಖಕರಿಗೆ ನೀಡುವ ಸಂಭಾವನೆ) ಹಣವನ್ನು ಪರಿಸರ ಜಾಗೃತಿಯ ಸಂಕೇತವಾಗಿರುವ ವೃಕ್ಷಥಾನ್ ಹೆರಿಟೇಜ್ ರನ್’ಗೆ ದೇಣಿಗೆಯಾಗಿ ನೀಡಿರುವುದು ಮನದುಂಬಿ ಬಂದಿದೆ. ಕಳೆದ ಎರಡು ವರ್ಷಗಳಿಂದ ವೃಕ್ಷಥಾನ್ ನಲ್ಲಿ ಭಾಗವಹಿಸುತ್ತಿರುವ ಶಿವಾನಿ, ಈ ಕಾರ್ಯಕ್ರಮದ ಆಶಯಗಳಿಂದ ಪ್ರೇರಿತರಾಗಿ ತನ್ನ ಪರಿಶ್ರಮದ ಗಳಿಕೆಯನ್ನು ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಸಮರ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಚಿಕ್ಕ ವಯಸ್ಸಿನಲ್ಲೇ ಈ ಬಾಲಕಿಯಲ್ಲಿ ಅರಳಿರುವ ಸೃಜನಶೀಲತೆ, ಅದಮ್ಯ ಪರಿಶ್ರಮ ಮತ್ತು ಉದಾತ್ತ ಸಾಮಾಜಿಕ ಕಳಕಳಿ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಈ ಬಾಲಕಿಯ ಪ್ರತಿಭೆ, ಪರಿಶ್ರಮ ಮತ್ತು ಉದಾತ್ತ ಮನೋಭಾವಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಶಿವಾನಿಯ ಮುಂದಿನ ಸಾಧನೆಯ ಹಾದಿ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ. ಇಂತಹ ಬಾಲಪ್ರತಿಭೆಗಳು ನಮ್ಮ ನಾಡಿನ ಹೆಮ್ಮೆ ಹಾಗೂ ಭವಿಷ್ಯದ ಭರವಸೆ ಮೂಡಿಸಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ಖಜಾಂಚಿ ಸಂತೋಷ ಔರಸಂಗ, ಅಗಸ್ತ್ಯ ಫೌಂಡೇಶನ್ ಪ್ರಾದೇಶಿಕ ಮುಖ್ಯಸ್ಥೆ ಗೀತಾ ಮಯೂರ ಪಾಟೀಲ ಉಪಸ್ಥಿತರಿದ್ದರು.

