ವೀಣಾಂತರಂಗ’
*– ವೀಣಾ ಹೇಮಂತ್ ಗೌಡ ಪಾಟೀಲ್* ಮುಂಡರಗಿ-ಗದಗ

ರಸ್ತೆಯ ತಿರುವಿನಲ್ಲಿ ಕೈಕಾಲು ಗಟ್ಟಿಮುಟ್ಟಾಗಿದ್ದ ಓರ್ವ ಮನುಷ್ಯ ಭಿಕ್ಷೆ ಬೇಡುತ್ತಿದ್ದ. ಭಿಕ್ಷೆ ಹಾಕದೆ ಮುಂದೆ ಹೋಗುತ್ತಿದ್ದ ಜನರನ್ನು ಹೀಯಾಳಿಸುತ್ತಾ, ಈ ಜಗತ್ತನ್ನು ಪಾಪಿಗಳ ಲೋಕವೆಂದು ಕೊಂಚ ಮಾತ್ರದ ಕನಿಕರವೂ ಇಲ್ಲದ ಜನರೆಂದು ಎಲ್ಲರನ್ನೂ ದೂಷಿಸುತ್ತಾ ಗೊಣಗುತ್ತ ಕುಳಿತಿದ್ದನು. ತನ್ನನ್ನು ತಾನು ಕನಿಕರದ, ಅಪಹಾಸ್ಯದ, ಅವಜ್ಞೆಯ ವಸ್ತುವನ್ನಾಗಿಸಿಕೊಂಡು ಭಿಕ್ಷೆ ಬೇಡುತ್ತಿದ್ದ ಆತನದು ಹೀನಾಯ ಪರಿಸ್ಥಿತಿ. ಸ್ವಯಂಕೃತ ಅಪರಾಧ,!!
ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಿಕೊಳ್ಳದ ಮಗುವೊಂದು ಪರೀಕ್ಷಾ ಮೇಲ್ವಿಚಾರಕರ ಮತ್ತು ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಶಿಕ್ಷಕರ ಗುಂಪನ್ನು ಹೀಯಾಳಿಸುವುದು, ಶಾಲೆಯ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸದಿದ್ದರೆ ಶಾಲೆಯಲ್ಲಿ ಭೇದ ಭಾವ ಮಾಡುವರೆಂಬ ಆರೋಪ ಮಾಡುವ ಹಲವಾರು ಜನ ನಮ್ಮ ಸಮಾಜದಲ್ಲಿ ಇರುತ್ತಾರೆ. ಕೆಲವೊಮ್ಮೆ ಅವರ ಆಪಾದನೆಗಳು ನಿಜವಾದರೂ ಬಹಳಷ್ಟು ಬಾರಿ ಈ ಮಾತುಗಳಲ್ಲಿ ಹುರುಳಿರುವುದಿಲ್ಲ.
ಅಂತಹವರಿಗೆ ನೀವೇನಾದರೂ ತಿಳಿಯಹೇಳಹೊರಟರೆ ನಿಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ. ಅವರದು ಒಂದು ರೀತಿಯ ಅರೆಬೆಂದ ಪರಿಸ್ಥಿತಿ. ಪೂರ್ತಿ ತಿಳಿದವರಿಗೆ ಮತ್ತು ಏನೂ ತಿಳಿಯದವರಿಗೆ ಹೇಳಿದರೆ ಅರಿತುಕೊಳ್ಳಬಹುದು ಆದರೆ ಈ ಅರೆ ಬೆಂದ ಸ್ಥಿತಿಯಲ್ಲಿರುವವರಿಗೆ ಹೇಳುವುದು ಕಷ್ಟ ಸಾಧ್ಯ. ಅರಿತುಕೊಳ್ಳುವುದು ಇನ್ನೂ ದೂರದ ಮಾತು.
ತನ್ನ ಜೀವಿತದ ಕೊನೆಯವರೆಗೂ ರಾಮ ಬರುವನೆಂದು ಶಬರಿ ಕಾಯಲಿಲ್ಲವೇ?
ತನ್ನ ಶಾಪ ಮುಕ್ತಿ ರಾಮನಿಂದ ಎಂದು ಶಿಲೆಯಾಗಿದ್ದ ಅಹಲ್ಯೆ ಕಾಯಲಿಲ್ಲವೇ?? ನಾನು ಅದೆಷ್ಟೇ ಪಾಡು ಪಟ್ಟರೂ ಸತ್ಯವನ್ನು ಕೈ ಬಿಡದ ಸತ್ಯ ಹರಿಶ್ಚಂದ್ರ ನಮ್ಮ ದೇಶದ ಆದರ್ಶ ಪುರುಷನಲ್ಲವೇ??
ಆದರೂ ಸಾಮಾನ್ಯವಾಗಿ ಕೆಲವಷ್ಟು ವಿಷಯಗಳನ್ನು ನಾವು ಅರಿತುಕೊಳ್ಳಬೇಕು ಅಂತೆಯೇ ನಡೆದುಕೊಳ್ಳಬೇಕು.
* ನಮ್ಮ ಮಗು ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿಲ್ಲವೆಂದಾದರೆ ಅಲ್ಲಿ ಭೇದಭಾವ ತೋರುತ್ತಾರೆ ಎಂಬ ಮಾತೇ ತಪ್ಪು… ಎಷ್ಟೋ ಬಾರಿ ಕೆಲ ಮಕ್ಕಳು ಏಕ ಪಠ್ಯಗ್ರಾಹಿಗಳಾಗಿದ್ದು ನಮ್ಮ ಗ್ರಹಿಕೆಗೂ ಮೀರಿ ಈ ಮಕ್ಕಳಿಗಿಂತ ಹೆಚ್ಚು ಪರಿಶ್ರಮವಹಿಸಿರುತ್ತಾರೆ.
* ಪ್ರಯತ್ನವನ್ನೇ ಮಾಡದೆ ಫಲವನ್ನು ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು
* ಕಾಯದ ಹೊರತು ಹಾಲು ಕೆನೆಗಟ್ಟದು..
ಹಾಗೆಯೇ ನಿರಂತರ ಸಾಧನೆಯ ಫಲ ಖಂಡಿತವಾಗಿಯೂ ದೊರಕುತ್ತದೆ.
* ಸ್ಪರ್ಧೆ ಎಂದ ಮೇಲೆ ಸೋಲು ಗೆಲುವು ಸಹಜ. ನೂರಾರು ಮಕ್ಕಳು ಭಾಗವಹಿಸಿ ಒಂದು ಮಗು ಸ್ಪರ್ಧೆಯಲ್ಲಿ ವಿಜೇತವಾಗುವ ಕ್ರಿಯೆಯಲ್ಲಿ ನಾವು ನೋಡಬೇಕಾಗುವುದು ನಮ್ಮ ಮಗು ತನ್ನ ಗುಣಮಟ್ಟವನ್ನು ಕಾಯ್ದುಕೊಂಡಿದೆಯೇ, ಗುಣಮಟ್ಟದಲ್ಲಿ ಮುನ್ನಡೆ ಸಾಧಿಸಿದೆಯೇ ಎಂಬುದನ್ನು ಮಾತ್ರ ನೋಡಬೇಕು. ಪ್ರತಿ ಬಾರಿಯೂ ನಮ್ಮ ಮಕ್ಕಳೇ ಸ್ಪರ್ಧೆಗಳಲ್ಲಿ, ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಗಳಿಸಬೇಕು ಎಂಬ ಸ್ವಾರ್ಥಪರ ನಡವಳಿಕೆ ಖಂಡಿತಾ ಸಲ್ಲದು.
ಯಾವ ರೀತಿ ಭೂಮಿಯಿಂದ ಆವಿಯಾದ ನೀರಿನ ಹನಿಗಳು ಮೋಡದಲ್ಲಿ ಘನೀಭವಿಸಿ ಭಾರವಾಗಿ ಒತ್ತಡಕ್ಕೆ ಸಿಲುಕಿ ಮಳೆ ಸುರಿಯುವುದಿಲ್ಲವೇ?? ನೋಡ ಒಡೆಯದೆ ಮಳೆ ಹೇಗೆ ಬರುತ್ತದೆ…. ಮೋಡ ಒಡೆಯಲು ಬೇಕಾಗುವಷ್ಟು ಒತ್ತಡವನ್ನು ನಾವು ಸೃಷ್ಟಿಸಲೇಬೇಕು ಅಂದಾಗ ಮಾತ್ರ ವರ್ಷಧಾರೆಯನ್ನು ಕಾಣಲು ಸಾಧ್ಯ.
ಅದೆಷ್ಟೇ ಗಟ್ಟಿಯಾಗಿದ್ದರೂ ನದಿಯಲ್ಲಿರುವ ಬಂಡೆಗಲ್ಲುಗಳು ಸವೆಯುವುದು ಅವುಗಳ ಮೇಲಾಗುವ ನಿರಂತರ ನೀರಿನ ಹೊಡೆತದಿಂದ
ಅದೆಷ್ಟೇ ಮುಚ್ಚಿಟ್ಟರೂ ಕಸ್ತೂರಿಯ ಕಂಪು ಎಲ್ಲೆಡೆ ಹರಡುವುದಿಲ್ಲವೇ. ಹಾಗೆಯೇ ಸತತ ಪರಿಶ್ರಮದಿಂದ ಮಗುವಿನ ವ್ಯಕ್ತಿತ್ವ ಸುಂದರವಾಗಿ ಅರಳಿ ತನ್ನ ಘಮವನ್ನು
ಖಂಡಿತವಾಗಿಯೂ ಪಸರಿಸುತ್ತದೆ.
ಮುಖ್ಯವಾಗಿ ಬೇಕಾಗಿರುವುದು ಸತತ ಪರಿಶ್ರಮ, ಕಾರ್ಯನಿರ್ವಹಿಸುವಲ್ಲಿ ಶ್ರದ್ಧೆ, ಕಾಯುವ ತಾಳ್ಮೆ ಮತ್ತು ವಿಜಯದ ಒಂದೊಂದೇ ಮೆಟ್ಟಿಲುಗಳ ಆರೋಹಣ ಕ್ರಿಯೆ. ಜೊತೆಗೆ ಅದೃಷ್ಟದ ಬೆಂಬಲ ಬೇಕೇ ಬೇಕು.
ಶಿಲ್ಪಿಯೋರ್ವನ ಉಳಿ ಪೆಟ್ಟಿನ ಒಂದೇ ಏಟನ್ನು ತಡೆಯಲಾರದೆ ಸೀಳಿ ಹೋಗಿ ಮೆಟ್ಟಿಲುಗಲ್ಲಾದ, ಹಲವಾರು ಪೆಟ್ಟುಗಳನ್ನು ಸಹಿಸಿ ಇನ್ನು ತಡೆಯಲಾರೆ ಎಂದು ಬಿರುಕು ಬಿಟ್ಟು ಕಂಬದ ಕಲ್ಲಾದ ಮತ್ತು ಸಾವಿರಾರು ಪೆಟ್ಟುಗಳನ್ನು ಸಹಿಸಿ ಅಂತಿಮವಾಗಿ ದೇವರ ಮೂರ್ತಿಯಾಗಿ ತನ್ನದೇ ಸೃಷ್ಟಿಕರ್ತ ಮತ್ತಿತರ ಜನರ ಕೈಯಲ್ಲಿ ಪೂಜಿಸಲ್ಪಟ್ಟ ದೈವ ಮೂರ್ತಿಯಾಗಿ ಬದಲಾದ ಕಲ್ಲುಗಳ ಕಥೆಯನ್ನು ನಾವು ಕೇಳಿದ್ದೇವೆ. ಈ ಕಥೆಯ ತಾತ್ಪರ್ಯ ತಾಳಿದವನು ಬಾಳಿಯಾನು ಎಂಬುದಷ್ಟೇ. ಮನುಷ್ಯನ ನಿಜವಾದ ಶಕ್ತಿ ಇರುವುದು ಆತನ ತಾಳ್ಮೆಯಲ್ಲಿ.
ಸಿಟ್ಟು ಮಾಡಿಕೊಳ್ಳಲು ಕ್ಷಣವೊಂದು ಸಾಕು. ಆದರೆ ಸಮಾಧಾನದಿಂದಿರಲು ಬೇಕಾಗುವುದೇ ನಿಜವಾದ ಅಂತಃಶಕ್ತಿ.
ಅಂತಹ ಆಂತರಿಕ ಶಕ್ತಿಯನ್ನು ಸ್ವತಃ ಬೆಳೆಸಿಕೊಳ್ಳುವ ಮತ್ತು ನಮ್ಮ ಮುಂದಿನ ಪೀಳಿಗೆಯಲ್ಲಿ ಅಂತಹ ಶಕ್ತಿಯನ್ನು
ತುಂಬುವ ಮಹತ್ತರ ಜವಾಬ್ದಾರಿಯನ್ನು ನಾವು ನಿರ್ವಹಿಸುವ ದಿಶೆಯಲ್ಲಿ ಹೆಜ್ಜೆಯನ್ನು
ಹಾಕೋಣ ಎಂಬ ಆಶಯದೊಂದಿಗೆ..

*– ವೀಣಾ ಹೇಮಂತ್ ಗೌಡ ಪಾಟೀಲ್* ಮುಂಡರಗಿ-ಗದಗ

