ಮುದ್ದೇಬಿಹಾಳ: ಶಾಲಾ ಹಂತದಲ್ಲಿ ಅಭಿವೃದ್ಧಿ ಹಾಗೂ ನಿರ್ವಹಣೆಯ ಹೊಣೆ ಹೊತ್ತು ಮೂಲ ಸೌಕರ್ಯಗಳನ್ನು ಖಾತರಿಗೊಳಿಸುವುದರ ಜೊತೆ ಕಲಿಕೆಗೆ ಪೂರಕ ವಾತಾವರಣ ಕಟ್ಟಿ ಕೊಡಲು ಶ್ರಮಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯವು ನಾಡಿಗೆ ಮಾದರಿಯಾಗಿದೆ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ ಶಂಕರಗೌಡ ಸೋಮನಾಳ ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಲ್ಕೋ ಸೋಲಾರ ಪ್ರೈವೇಟ್ ಲಿಮಿಟೆಡ್, ನೆಕ್ಸ್ಟ್ ಎಜ್ಯೂಕೇಷನ್ ಬೆಂಗಳೂರು ಇವರ ತಾಂತ್ರಿಕ ಜ್ಞಾನ ಹಾಗೂ ಮೆಂಡಾ ಫೌಂಡೇಷನ್ ಬೆಂಗಳೂರು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಬುನ್ನೀಸಾ ಬೀಳಗಿ ಇವರ ಆರ್ಥಿಕ ನೆರವಿನೊಂದಿಗೆ ಸ್ಥಾಪಿತವಾದ ಸ್ಮಾರ್ಟ್ (ಡಿಜಿಟಲ್) ಕ್ಲಾಸ ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ವ್ಯಾಮೋಹ ಹಾಗೂ ಖಾಸಗಿ ಶಾಲೆಗಳ ಹಾವಳಿಯಿಂದ ಮುಚ್ಚುವ ಹಂತ ತಲುಪಿರುವ ಸರ್ಕಾರಿ ಶಾಲೆ ಉಳಿಸಲು ನಡೆದ ಕ್ರಿಯಾತ್ಮಕ ನಡಿಗೆ ಸರ್ವ ಮಾನ್ಯವಾಗಲಿ. ದೇಶದ ಭವಿಷ್ಯವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಸರ್ಕಾರಿ ಶಾಲೆಗಳ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ನಿರೂಪಿಸಲು ಅತ್ಯಾಧುನಿಕ ಸೌಲಭ್ಯಗಳ ಜೊತೆ ಗುಣಾತ್ಮಕ ತರಬೇತಿಗೆ ಸಜ್ಜುಗೊಳಿಸಿದ ರೀತಿ ಅನನ್ಯ ಎಂದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಜೇಬುನ್ನೀಸಾ ಬೀಳಗಿ, ಚಿಂತಕ ಅರವಿಂದ ಕೊಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ ಧರಿಕಾರ ಮಾತನಾಡಿ ಸರ್ಕಾರಿ ಶಾಲೆಯ ಬಗ್ಗೆ ಜಾಗೃತಿ ಮೂಡಿಸಿ, ಸಿಗುವ ಸೌಲಭ್ಯಗಳ ಬಗ್ಗೆ ತಿಳಿಹೇಳಿ, ಅತ್ಯಾಧುನಿಕ ತರಬೇತಿಯ ಭರವಸೆ ನೀಡುವ ಮೂಲಕ ಶಾಲೆ ಕಟ್ಟುವ ಸಂಕಲ್ಪ ತೊಟ್ಟು ಕಾರ್ಯಾಚರಣೆಗಿಳಿದ ಹಳೆಯ ವಿದ್ಯಾರ್ಥಿಗಳ ಚಳುವಳಿಯು ಅಸಾಧ್ಯವೆನ್ನುವುದನ್ನು ಸಾಧ್ಯವಾಗಿಸಿದ್ದು ಇಡೀ ಇಲಾಖೆ ಶಾಲೆಯ ಬಗ್ಗೆ ಅಭಿಮಾನ ಪಡುವಂತಾಗಿದೆ. ಮಕ್ಕಳು ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಅಪ್ರತಿಮ ಸಾಧನೆ ಮಾಡಬೇಕು ಎಂದರು.
ವಿಶ್ರಾಂತ ಶಿಕ್ಷಕಿ ಜೋಡಬಿ ಬೀಳಗಿ, ವಿಶ್ರಾಂತ ವೈಧ್ಯಾಧಿಕಾರಿ ಡಾ. ಎಸ್.ವಿ.ಒಡ್ಡೋಡಗಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ರಶ್ಮಿ ಕೊಪ್ಪ, ಶಿಕ್ಷಣ ಸಂಯೋಜಕ ಎಚ್.ಎ.ಮೇಟಿ, ಸೆಲ್ಕೋ ಸೋಲಾರನ ರಮೇಶ ಮತ್ತಿತರರು ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಚಾಂದಬಾಷಾ ಮಾಳನೂರ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ಕಲ್ಲೂರ, ಕೋಶಾಧ್ಯಕ್ಷ ಮೊಹನಂದ ಬಾಗಲಕೋಟ, ಸಂಘಟನಾ ಕಾರ್ಯದರ್ಶಿ ಬಸವರಾಜ ಹಡಪದ, ಸೆಲ್ಕೊ ಸೋಲಾರ ಮಾರಾಟ ವ್ಯವಸ್ಥಾಪಕ ಬಸವರಾಜ ಕಲ್ಯಾಣಿ ಸೇರಿದಂತೆ ಮತ್ತೀತರರು ಇದ್ದರು.
ಇದೇ ಸಂದರ್ಭದಲ್ಲಿ ಡಿಜಿಟಲ್ ಕ್ಲಾಸ ಸ್ಥಾಪನೆಗೆ ಸಹಾಯ ನೀಡಿದ ಡಾ.ಜೇಬುನ್ನಿಸಾ ಬೀಳಗಿ, ಜೋಡಬಿ ಬೀಳಗಿ, ಸೆಲ್ಕೋ ಕಂಪನಿಯ ರಮೇಶ ಇವರನ್ನು ಹಳೆ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಎಸ್.ಜಿ.ಭದ್ರಗೊಂಡ ಸ್ವಾಗತಿಸಿದರು. ಸಿ.ಆರ್.ಪಿ ಅಮರೇಶ ಕಸಬೇಗೌಡರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮಹಾದೇವಪ್ಪ ಮೇಟಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

