– ಜಯಶ್ರೀ.ಜೆ. ಅಬ್ಬಿಗೇರಿ*
ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨

ದಿಂಬಿಗೆ ತಲೆಯನ್ನು ಕೊಟ್ಟು ಅದೆಷ್ಟು ಪ್ರೀತಿಯಿಂದ ಕರೆದರೂ ಬಳಿ ಬಾರದೇ ಕಾಡುವ ನಿದ್ರಾ ರಾಣಿಯನ್ನು ಒತ್ತಾಯ ಪೂರ್ವಕವಾಗಿ ಮಾತ್ರೆಗಳ ಮೂಲಕ ಆಮಂತ್ರಿಸಿ ಸ್ವಲ್ಪ ಹೊತ್ತು ಮಾತ್ರ ಅವಳ ಬಳಿಯಿದ್ದು ಉಳಿದ ಹೊತ್ತು ನರಕಯಾತನೆ ಅನುಭವಿಸುವಂತೆ ಮಾಡುತ್ತಾಳೆ. ಕೆಲವರ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಿ, ನಿತ್ಯದ ಕೆಲಸಗಳಲ್ಲಿ ಸೊಗಸಿಲ್ಲದಂತೆ ಮಾಡುತ್ತಾಳೆ. ಇನ್ನೂ ಕೆಲವರು ಕೇಳುವ ಮುನ್ನವೇ ತಾನೇ ಬಳಿ ಹೋಗಿ ತನ್ನ ತೋಳ ತೆಕ್ಕೆಯಲ್ಲಿ ಬಂಧಿಸಿ ಸುಖವಾದ ನಿದ್ದೆ ಕರುಣಿಸುತ್ತಾಳೆ. ಹಲವರಿಗೆ ಎಲ್ಲಿ ಹೋದರೂ ಬೆನ್ನು ಹತ್ತಿ ಕಾಡಿ ನಿಂತಲ್ಲಿ ಕೂತಲ್ಲಿ ಆವರಿಸಿಕೊಂಡು ಜನರಿಂದ ನಿದ್ದೆ ಬಡುಕ/ಕಿ ಎಂಬ ಉಪಾದಿಯನ್ನು ಕೊಡಿಸುತ್ತಾಳೆ. ಇವಳು ಅತಿಯಾಗಿ ಬಳಿ ಬಂದರೂ ತೊಂದರೆ ಬಾರದಿದ್ದರೂ ತೊಂದರೆ. ಇಂದು ನಮಗೆಲ್ಲ ಜೀವನದಲ್ಲಿ ಒತ್ತಡ ಸಾಮಾನ್ಯವೆನಿಸುವಷ್ಟು ಸಾಮಾನ್ಯವಾಗಿದೆ.. ಹೀಗಾಗಿ ಅತೀ ಅವಶ್ಯವಾಗಿರುವ ನಿದ್ದೆಯೂ ಕಣ್ಣು ತುಂಬಿಕೊಳ್ಳದೇ ದುಬಾರಿಯಾಗುತ್ತಿದೆ. ಎಷ್ಟು ನಿದ್ದೆ ಮಾಡಿದರೂ ಸುಖ ನಿದ್ದೆ ಮಾಯವಾಗಿ ಸಾಲುತ್ತಿಲ್ಲವೆ ನಿದ್ದೆ ಸಾಲುತಿಲ್ಲವೇ ಎನ್ನುವಂತಾಗಿದೆ. ಹಾಯಾದ ನಿದ್ದೆ ನಮ್ಮದಾಗಿದ್ದರೆ ಉತ್ತಮ ಆರೋಗ್ಯಕ್ಕೆ ಬೇಕಾಗಿರುವ ಹೃದಯ ಮತ್ತು ಹಾರ್ಮೋನುಗಳ ಕಾರ್ಯ ವೈಖರಿ ಉತ್ತಮ ರೀತಿಯಲ್ಲಿರುತ್ತದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಯ ಹಿಂದೆ ಬಿದ್ದು ಇತರರಿಗಿಂತ ಮುಂದೆ ಬರಬೇಕೆಂಬ ಅತಿಯಾದ ಆಸೆಯಲ್ಲಿ ನಿದ್ದೆ ಕಡಿಮೆಗೊಳಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಆಹಾರ ವ್ಯಾಯಾಮ ಮಾತ್ರ ಆರೋಗ್ಯಕ್ಕೆ ಸಹಕಾರಿ ಎಂದು ತಿಳಿದು ವಿಶ್ರಾಂತಿ ನಿದ್ದೆಯನ್ನು ಅಲಕ್ಷಿಸಿದರೆ ಆರೋಗ್ಯ ಹಾಳಾಗುವುದು ಖಂಡಿತ. ನಿದ್ದೆ ಸರಿಯಾಗದಿದ್ದರೆ ಯಾವ ಕೆಲಸದ ಮೇಲೂ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ. ನಿದ್ರಾ ಹೀನತೆಯಿಂದ ಉತ್ಸಾಹವಂತೂ ಕಮ್ಮಿಯಾಗುತ್ತದೆ ಅದರ ಜೊತೆಗೆ ನಮ್ಮ ಮೆದುಳಿನ ಚುರುಕುತನಕ್ಕೂ ಹೊಡೆತ ಬೀಳುತ್ತದೆ. ನಮ್ಮ ದೇಹದ ಅಂಗಾಂಗಗಳು ಮಾಡುವ ಕೆಲಸ ಒಂದೇ ಆದರೂ ನಾವು ಬಾಳುವ ರೀತಿ ನಮ್ಮ ಆಚಾರ ವಿಚಾರಗಳು ವಿಭಿನ್ನವಾಗಿವೆ. ಬದುಕಿನಲ್ಲಿ ಬರುವ ಸನ್ನಿವೇಶಗಳಿಗೆ ಆಲೋಚಿಸಿ ಸ್ಪಂದಿಸುವ ರೀತಿಯೂ ಭಿನ್ನವಾಗಿದೆ. ಹಾಗಾಗಿಯೇ ನಮ್ಮೆಲ್ಲರ ನಿದ್ದೆಯ ಪ್ರಮಾಣದಲ್ಲೂ ವ್ಯತ್ಯಾಸವಾಗುತ್ತಿದೆ. ಹಸುಗೂಸಿನ ನಿದ್ದೆ ನೋಡಲು ಸೊಗಸು. ಅಂಥ ನಿದ್ದೆ ನಮಗೆ ಬೇಕೆಂದು ಬಯಸುತ್ತೇವೆ.
ಕಾರಣಗಳು
ಹಿರಿಯರಿಗೆ ಮಕ್ಕಳ ಓದು ಮದುವೆ ಮನೆ ಖರ್ಚು ವೆಚ್ಛ ಕಛೇರಿಯಲ್ಲಿಯ ಕೆಲಸದ ಒತ್ತಡ. ಮಕ್ಕಳಿಗೆ ಹೆಚ್ಚು ಅಂಕ ಗಳಿಸುವ ಒತ್ತಡ, ಮಹಿಳೆಯರಿಗೆ ಮನೆಗೆಲಸ ಹಾಗೂ ಕುಟುಂಬ ನಿರ್ವಹಣೆಯ ಚಿಂತೆ ಹೀಗೆ ಏನೇನೋ ಚಿಂತೆಗಳನ್ನು ತಲೆಯಲ್ಲಿಟ್ಟುಕೊಂಡು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದರಿಂದ ನಿದ್ರಾಹೀನತೆ ಉಂಟಾಗುತ್ತದೆ. ಮಧುಮೇಹ ರಕ್ತದೊತ್ತಡದಂಥ ಕಾಯಿಲೆಗಳಿಗೆ ದೇಹದಲ್ಲಿ ಜಾಗ ಕೊಟ್ಟು ನಿದ್ದೆಯನ್ನು ದೂರಗೊಳಿಸಿದ್ದೇವೆ. ಹೃದಯ ತೊಂದರೆಯಿದ್ದರೂ ನಿದ್ದೆ ಹತ್ತಿರ ಸುಳಿಯುವುದಿಲ್ಲ.ಎಂಬುದು ಸಂಶೋಧನೆಯಿಂದ ದೃಡಪಟ್ಟ ಅಂಶ.
ನಿದ್ದೆಗೆಟ್ಟು ಓದಬೇಕೆಂದು ಚಹ ಇಲ್ಲವೇ ಕಾಫಿಯ ಸೇವನೆ ವಿದ್ಯಾರ್ಥಿಗಳಲ್ಲಿ ಬಹು ವರ್ಷಗಳಿಂದ ನಡೆದು ಬಂದಿದೆ. ಇದು ನಿಜಕ್ಕೂ ಅನಾರೋಗ್ಯವನ್ನು ಆಹ್ವಾನಿಸಿದಂತೆಯೇ ಸರಿ. ಊಟಕ್ಕಿಂತಲೂ ಹೆಚ್ಚು ಚಹ ಕಾಫಿ ಹೀರುವ ಇಲ್ಲವೇ ಊಟವಾದ ಮೇಲೆ ಸಹ ಹೀರುವ ಚಟ ನಿದ್ರಾ ಹೀನತೆಗೆ ಕಾರಣವಾಗುತ್ತದೆ. ಊಟ ಮಾಡದೇ ಮಲಗುವುದು ಇಲ್ಲವೇ ಅತಿಯಾದ ಆಹಾರ ಸೇವನೆಯಿಂದ ಅಜೀರ್ಣ ಸಮಸ್ಯೆ. ಹಸಿವಿನಿಂದ ಬಳಲಿರುವುದು ಅಶಕ್ತತೆ ಮಾನಸಿಕ ನೋವು ಅತಿಯಾದ ದಣಿವು ತಲೆನೋವು ಸುಖ ನಿದ್ದೆಗೆ ವೈರಿಗಳಾಗಿವೆ ಆರೋಗ್ಯಕ್ಕೆ ಬೇಕಾದಷ್ಟು ಅವಧಿ ಮಾತ್ರ ನಿದ್ದೆ ಮಾಡಿ ಅತಿಯಾದ ನಿದ್ದೆಯಿಂದ ಸ್ಥೂಲ ಕಾಯಿಗಳಾಗಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು. ಮನಸ್ಸು ಘಾಸಿಯಾಗುವ ಸಂಭವನೀಯತೆಯೂ ಹೆಚ್ಚು. ಮಲಗುವ ಕೋಣೆಯು ಅತಿಯಾಗಿ ತಣ್ಣಗಿದ್ದರೆ ಅಥವಾ ಗಾಳಿಯಾಡದಿದ್ದರೂ ನಿದ್ದೆ ಬಾರದು. ನಿದ್ರಾಹೀನತೆಗೆ ಸೊಳ್ಳೆಗಳ ಕಾಟವನ್ನೂ ಲೆಕ್ಕಿಸಲೇಬೇಕು. ಒಟ್ಟಿನಲ್ಲಿ ಮಲಗುವ ಕೋಣೆಯು ನಿದ್ದೆಗೆ ಸಹಕಾರಿಯಾಗುವಂತಿರಬೇಕು. ನಿದ್ದೆ ಬರುವ ವಾತಾವರಣಕ್ಕೆ ತೊಂದರೆಯಾಗದಿರುವ ಹಾಗೆ ಮಲಗುವ ಕೋಣೆ ಇದ್ದಾಗಲೂ ನಿದ್ದೆ ಬಾರದಿದ್ದರೆ ವೈದ್ಯರನ್ನು ಸಂಪರ್ಕಿಸಲೇಬೇಕು.
ವೈದ್ಯರ ಸಲಹೆ
ರಾತ್ರಿ ಲಘು ಆಹಾರ ಸೇವನೆ. ಉಂಡು ನೂರಡಿಯಿಡುವುದು.. ನಿದ್ದೆಗೆ ಜಾರುವ ಎರಡ್ಮೂರು ತಾಸುಗಳ ಮೊದಲೇ ಊಟ ಮಾಡುವುದು. ಮಲಗುವ ಮುನ್ನ ಒಳ್ಳೆಯ ಪುಸ್ತಕಗಳ ಓದು ಮನೆ ಮಂದಿಯೊಂದಿಗೆ ಹಾಸ್ಯಭರಿತ ಮಾತುಕತೆ ಸಂಗೀತ ಆಲಿಸುವಿಕೆ ಅಥವಾ ಉತ್ತಮ ಚಿಂತನೆಯ ಟಿವಿ ಕಾರ್ಯಕ್ರಮಗಳ ವೀಕ್ಷಣೆ ಮದ್ಯಾಹ್ನದ ಹೊತ್ತು ಅತಿ ನಿದ್ದೆಮಾಡಿದರೆ ರಾತ್ರಿ ನಿದ್ದೆ ಬಾರದು. ಅತಿಯಾದ ದುಡಿಮೆಯಿಂದ ದಣಿದಿದ್ದರೆ ಪ್ರವಾಸದ ಬಳಲಿಕೆಯಿದ್ದರೆ ಸ್ನಾನ ಮಾಡಿ ನಿದ್ದೆಗೆ ಜಾರುವುದು. ನಿದ್ದೆ ಬರುವ ಮುನ್ನವೇ ಹಾಸಿಗೆಯಲ್ಲಿ ಉರುಳಬೇಡಿ. ತೂಕಡಿಕೆಯಿಂದ ಕಣ್ಣು ಮುಚ್ಚುವಂತೆನಿಸಿದಾಗ ಮಲಗಿ. ನಿದ್ದೆಗೆ ಸಮಯ ನಿಗದಿ ಪಡಿಸಿ ಪ್ರತಿ ರಾತ್ರಿ ಅದೇ ಸಮಯಕ್ಕೆ ಮಲಗುವದು.. ಬೇಗ ಮಲಗಿ ಬೇಗ ಏಳಿ ನಿಯಮ ಪಾಲಿಸುವುದು. ಹೀಗೆ ವೈದ್ಯರಿಂದ ಪಡೆದ ಸೂಕ್ತ ಸಲಹೆಗಳನ್ನು ಪಾಲಿಸಿ ನೆಮ್ಮದಿಯ ನಿದ್ದೆಯನ್ನು ಪಡೆಯಬಹುದು. ಮೈ ಮನಗಳನ್ನು ಉಲ್ಲಸಿತವಾಗಿಟ್ಟುಕೊಳ್ಳಬಹುದು.
ಜಯಶ್ರೀ.ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨


