ಆಲಮೇಲ: ಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಎಳ್ಳ ಅಮಾವಾಸ್ಯೆ ಚರಗ ಚಲ್ಲುವ ಹಬ್ಬವನ್ನು ಸಡಗರದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.
ರೈತರು ತಾವು ನಂಬಿರುವ ಮಣ್ಣನ್ನು ದೈವಭಾವದಿಂದ ಪೂಜಿಸುವ ಆಚರಣೆ ಇದಾಗಿದೆ. ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲನ್ನು ಕೊಡುವ ಭೂಮಿ ತಾಯಿಯನ್ನು ಪೂಜಿಸಿ, ಹೊಲದ ತುಂಬೆಲ್ಲಾ ಚೀಲಗಳು ತುಂಬಿ ಹೊರಗೆ ಚೆಲ್ಲುವಷ್ಟು ಬೆಳೆ ನೀಡಲಿ ಎಂದು ಗ್ರಾಮೀಣ ಭಾಗಗಳಲ್ಲಿ ಆಚರಿಸುವ ಹಬ್ಬವೇ ಚರಗ ಚೆಲ್ಲುವ ಹಬ್ಬವಾಗಿದೆ.
ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳು ಅಮಾವಾಸ್ಯೆ ಅಪ್ಪಟ ರೈತರ ಹಬ್ಬ. ಹೊಲಗಳಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿಕಂಟಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಚರಗ ಚಲ್ಲುವ ಹಬ್ಬದ ವಿಶೇಷತೆ.
ಅಮವಾಸ್ಯೆಯ ಮೂರ್ನಾಲ್ಕು ದಿನ ಮುಂಚಿತವಾಗಿ ರೈತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಹಬ್ಬದ ವಿಶೇಷವಾಗಿ ಕಡಬ, ಸಜ್ಜೆ ರೊಟ್ಟಿ,ಜೋಳದ ರೊಟ್ಟಿ, ನಾನಾ ಬಗೆಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಮತ್ತು ಶೇಂಗಾದ ಹೋಳಿಗೆ ತಯಾರಿಸಲಾಗುತ್ತದೆ.
ಅಮಾವಾಸ್ಯೆ ದಿನ ಬೆಳಗ್ಗೆ ಎದ್ದ ರೈತರು ಮೊದಲು ಎಲ್ಲವನ್ನು ಸಿದ್ದಪಡಿಸಿಕೊಂಡು. ನಂತರ ಮನೆಯಲ್ಲಿ ಮಾಡಿದ್ದ ಬಗೆ ಬಗೆಯ ಆಹಾರ ಪದಾರ್ಥಗಳನ್ನು ದೊಡ್ಡ ಬುತ್ತಿಯಲ್ಲಿ ಕಟ್ಟಿಕೊಂಡು, ಕುಟುಂಬದವರೆಲ್ಲರು ಅವರ ಆಪ್ತರು ಸೇರಿ ಹೊಲಕ್ಕೆ ಹೋಗುವುದು ದೊಡ್ಡ ಸಡಗರದಂತೆ ಕಾಣುತ್ತದೆ.
ಜತೆಗೆ ತಮ್ಮ ಸಂಬಂಧಿಗಳು, ಊರಿನ ಇತರರು, ಹಿತೈಷಿಗಳನ್ನು ಹೊಲಕ್ಕೆ ಕರೆದೊಯ್ದು, ಚರಗ ಚೆಲ್ಲಿದ ನಂತರ ಹೊಲದಲ್ಲೇ ಸಾಮೂಹಿಕ ಊಟ ಸವಿದು ಆತ್ಮೀಯತೆ ಮೆರೆಯುತ್ತಾರೆ.
ಆಲಮೇಲ ಪಟ್ಟಣ ಪಂಚಾಯತ ಸದಸ್ಯ ಚಂದ್ರಶೇಖರ ಹಳೇಮನಿಯವರ ಹೊಲದಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ ಸಾಮೂಹಿಕ ಬೋಜನದಲ್ಲಿ ಸುನೀಲ ಉಪ್ಪಿನ, ಸಂಜೀವಕುಮಾರ ಗುಂದಗಿ, ಮಲ್ಲು ಅಚಲೇರಿ, ಗನಿ ದೇವರಮನಿ, ಪ್ರಕಾಶ ಉಪ್ಪಿನ, ಸಿದ್ಧರಾಮ್ ಬಿರಾದಾರ, ಅಯೂಬ್ ಸುಂಬಡ, ದಯಾನಂದ ನಾರಾಯಣಕರ, ಮಹಾಂತೇಶ ಹಳೇಮನಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

