ಪಾಲಿಕೆಯ ಆಸ್ತಿ ಲೀಜ್ ಅಥವಾ ಮಾರಾಟಕ್ಕೆ ಶಾಸಕರು & ಪಾಲಿಕೆ ಸರ್ವ ಸದಸ್ಯರ ಒಪ್ಪಿಗೆ ಅಗತ್ಯ | ಶಾಸಕ ಯತ್ನಾಳ ಅಭಿಮತ
ವಿಜಯಪುರ: ಮಹಾನಗರ ಪಾಲಿಕೆ ಒಡೆತನದಲ್ಲಿರುವ ಆಸ್ತಿಗಳನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಹಾಗೂ ಸರ್ಕಾರಿ ವಿವಿಧ ಯೋಜನೆಗಳಿಗಾಗಿ ಕಾಯ್ದಿರಿಸಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಮಹಾನಗರ ಪಾಲಿಕೆ ಒಡೆತನದ ಕೊಟ್ಯಂತರ ಬೆಲೆ ಬಾಳುವ ನಗರ ಮಧ್ಯಭಾಗದಲ್ಲಿರುವ ಅಥವಾ ಹೊರ ಭಾಗದಲ್ಲಿರುವ ಪಾಲಿಕೆ ಆಸ್ತಿಗಳನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಹಾಗೂ ಸರ್ಕಾರದ ವಿವಿಧ ಯೋಜನೆಗಳಾದ ವಸತಿ, ಸಮುದಾಯ ಭವನಗಳು, ಒಳಾಂಗಣ ಕ್ರೀಡಾಂಗಣ, ಮಳಿಗೆಗಳು, ನಿರ್ಗತಿಕರ ಭವನ, ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು ಮತ್ತಿತರೆ ಉದ್ದೇಶಕ್ಕಾಗಿ ಕಾಯ್ದಿರಿಸಬೇಕಾದುದ್ದನ್ನು, ಕೆಲ ಅಧಿಕಾರಿಗಳು ಲೀಜ್ ನೆಪದಲ್ಲಿ ಖಾಸಗಿ ವ್ಯಕ್ತಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರದ ಬಗ್ಗೆ ತಿಳಿದು ಬಂದಿದೆ.
ಒಂದು ವೇಳೆ ಖಾಸಗಿ ವ್ಯಕ್ತಿಗಳಿಗೆ ಅಥವಾ ನಕಲಿ ಸಂಸ್ಥೆಗಳಿಗೆ ಲೀಜ್ ನೆಪದಲ್ಲಿ ಮಾರಾಟ ಮಾಡಲು ಮುಂದಾದರೆ, ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಹೋರಾಟ ಮಾಡುವುದಲ್ಲದೆ, ಅವರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿ ಸೇವೆಯಿಂದ ವಜಾ ಮಾಡುವವರೆಗೂ ಕಾನೂನು ಹೋರಾಟಕ್ಕೂ ಯಾವುದೇ ಮುಲಾಜಿಲ್ಲದೆ ನಾವು ಮುಂದಾಗಬೇಕಾಗುತ್ತದೆ.
ಕಾರಣ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಪಾಲಿಕೆಯ ಆಸ್ತಿಗಳನ್ನು ಲೀಜ್ ಆಧಾರದ ಮೇಲೆ ಮಾರಾಟ ಮಾಡಬೇಕಾದರೆ ಎಚ್ಚರಿಕೆಯಿಂದ ಇರಬೇಕು ಹಾಗೂ ಶಾಸಕರು ಒಳಗೊಂಡಂತೆ, ಪಾಲಿಕೆಯ ಸರ್ವ ಸದಸ್ಯರ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

