ಸಿಂದಗಿ: ಪಟ್ಟಣದ ಆದಿಶೇಷ ಸಂಸ್ಥಾನ ಹಿರೇಮಠದ ೨೮ನೆಯ ಜಾತ್ರಾಮಹೋತ್ಸವದ ನಿಮಿತ್ತ ಜ.೧೪ರಿಂದ ಜ.೨೩ವರೆಗೆ ಎಡಿಯೂರ ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಪ್ರಾರಂಭೋತ್ಸವ ಹಾಗೂ ಜ.೨೩ರಂದು ಬೆಳಿಗ್ಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಹಾಗೂ ಧರ್ಮಸಭೆ ನಡೆಯಲಿದೆ ಎಂದು ಆದಿಶೇಷ ಸಂಸ್ಥಾನ ಹಿರೇಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಶ್ರೀಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ಜ.೨೩ರ ಜಾತ್ರಾಮಹೋತ್ಸವ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ. ಪಾಟೀಲ ಅವರಿಗೂ ಆವ್ಹಾನ ನೀಡಲಾಗಿದೆ. ಅವರು ಸೇರಿದಂತೆ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರಾದಿಯಾಗಿ ಜನಪ್ರತಿನಿಧಿಗಳು ಅಂದಿನ ಧರ್ಮಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಜ.೧೪ರಿಂದ ಜ.೨೩ರವರೆಗೆ ಸಂಜೆ ೬.೩೦ ಗಂಟೆಗೆ ಶ್ರೀಮಠದ ಆವರಣದಲ್ಲಿ ಎಡಿಯೂರ ಸಿದ್ದಲಿಂಗೇಶ್ವರರ ಮಹಾಪುರಾಣ ಪ್ರವಚನ ಕಾರ್ಯಕ್ರಮ ನಡೆಯುವುದು. ಜ.೨೨ರಂದು ರಂದು ಸದ್ಗುರು ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ಜಾಹಗೀರದಾರ ಅವರ ೫೩ನೆಯ ವರ್ಷದ ಅನುಷ್ಠಾನದ ಸುವರ್ಣ ಮಹೋತ್ಸವ, ಜಂಗಮವಟುಗಳಿಗೆ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.
ಜ.೨೩ರ ಬೆಳಗಿನ ಬ್ರಾಹ್ಮೀ ಮುಹೂರ್ತದ ೫ ಗಂಟೆಗೆ ಆಶ್ಲೇಷ ನಾಗಪೂಜೆ ನಡೆಯಲಿದೆ. ಈ ವೇಳೆ ಕಾಳಸರ್ಪದೋಷ, ಕುಜದೋಷ ಸಮಸ್ಯೆಗಳಿಗೆ ಮುಕ್ತಿ ಕೊಡಲಾಗುತ್ತಿದ್ದು, ಆಸಕ್ತರು ಮುಂಚಿತವಾಗಿ ಶ್ರೀಮಠದಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕು ಎಂದು ಕರೆ ನೀಡಿದರು.
ಶ್ರೀಮಠದ ಜಾತ್ರಾ ಮಹೋತ್ಸವ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀಮಠದ ಭಕ್ತರು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದು ಪುನೀತರಾಗಬೇಕು ಎಂದು ಹೇಳಿದರು.
ಈ ವೇಳೆ ಎಂ.ಎಂ ಹಂಗರಗಿ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಬಿರಾದಾರ ಇಬ್ರಾಹಿಂಪುರ, ಆನಂದ ಶಾಬಾದಿ, ಪಂಡಿತ ಯಂಪುರೆ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

