ಬಿ.ಎಲ್.ಡಿ.ಇ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ
ವಿಜಯಪುರ: ಇಂದಿನ ಯುವಕರು ಅನ್ಯ ಚಟಕ್ಕೆ ದಾಸರಾಗದೆ ನಿರ್ದಿಷ್ಟ ಗುರಿಯತ್ತ ಸಾಗಬೇಕು. ಜೀವನದಲ್ಲಿ ಸಾಧನೆ ಮಾಡಬೇಕಾದರೆ ತ್ಯಾಗ ಮತ್ತು ನಿಸ್ವಾರ್ಥಸೇವೆಯನ್ನು ಮಾಡಬೇಕು. ಅದಕ್ಕೆ ಉತ್ತಮ ನಿದರ್ಶನವೇ ಸ್ವಾಮಿ ವಿವೇಕಾನಂದರು ಎಂದು ಜಿಲ್ಲಾ ನೆಹರು ಯುವ ಕೇಂದ್ರ ನಿವೃತ್ತಾಧಿಕಾರಿ ಎಸ್.ಯು ಜಮಾದಾರ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸಪ್ತಾಹ ಹಿನ್ನೆಲೆಯಲ್ಲಿ ನೆಹರು ಯುವ ಕೇಂದ್ರ ವಿಜಯಪುರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ಸಂಶೋಧನಾ ಪರಿಷತ್ತು ವಿಜಯಪುರ, ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕಗಳು, ಯೂತ್ ರೆಡ್ ಕ್ರಾಸ್ ರೆಡ್ ರಿಬ್ಬನ್ ಕ್ಲಬ್, ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯೋಜನಡಿಯಲ್ಲಿ ಜರುಗಿದ ರಾಷ್ರೀಯ ಯುವ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ದೇಶಕಂಡ ಮಹಾನ್ ಚಿಂತಕರು, ಸನ್ಯಾಸಿಗಳು. ಇವರ ಸಂದೇಶಗಳು ಮಾನವನ ಬದುಕಿಗೆ ಉಪಯುಕ್ತವಾದವುಗಳು. ಇಂದಿನ ಯುವಕರು ಅವರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ. ಸ್ವಾಮಿ ವಿವೇಕಾನಂದರ ಜೀವನ ಯಶೋಗಾಥೆ ಇಂದಿನ ಯುವಕರು ಅಳವಡಿಸಿಕೊಳ್ಳಬೇಕಾಗಿದೆ. ಯುವಕರು ಸದಾ ಉತ್ಸಾಹ ಭರಿತರಾಗಿ, ಸದಾ ದೇಶದ ಪ್ರಜ್ಞಾವಂತ ಪ್ರಜೆಗಳಾಗಿ ಬದುಕಲು ವಿವೇಕಾನಂದರು ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ರಂಗನಾಥ ರಾಠೋಡ ಮಾತನಾಡಿ, ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿಗಳು ಸತತವಾಗಿ ಓದಿನಲ್ಲಿ ತೊಡಗಿಸಿಕೊಂಡು ವಿವೇಕಾನಂದರ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅನ್ಯ ದೇಶಿಯ ಸಂಸ್ಕೃತಿಯನ್ನು ಬಿಟ್ಟು ಪವಿತ್ರವಾದ ನಮ್ಮ ದೇಶದ ಸಂಸ್ಕೃತಿಯನ್ನು ಗೌರವಿಸಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ದೇಶಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ, ಮುಖ್ಯೋಪಾಧ್ಯಾಯರಾದ ಸಂಗಮೇಶ ಪೂಜಾರಿ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ ಮಾತನಾಡಿ, ಜೀವನದಲ್ಲಿ ಅಧ್ಯಾತ್ಮಿಕ ಜ್ಞಾನ ವೃದ್ದಿಯಾಗಬೇಕಾದರೆ ಸ್ವಾಮಿ ವಿವೇಕಾನಂದ ಅವರೆ ಸ್ಪೂರ್ತಿ. ಅವರಂತೆ ನಾವು ನಿರಂತರ ಅದ್ಯಯನಶಿಲರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿ ರಾಹುಲ್.ಎಸ್ ಡೊಂಗ್ರೆ, ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

