*– ಇಲಾಹಿ ಇ. ಜಮಖಂಡಿ*
ಚಿಮ್ಮಡ: ಮಕ್ಕಳು ಈ ಹಿಂದೆ ಶಾಲೆಗೆ ರಜೆ ಸಿಕ್ಕರೆ ಸಾಕು ಜಿಗಿಯಿತ್ತ, ಕುಣಿಯುತ್ತ ಮನೆಗೆ ಓಡೋಡಿ ಬರುತಿದ್ದರು. ಈಗ ಕಾಲ ಬದಲಾಗಿದೆ, ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಪೈಪೋಟಿ ಶುರುವಾಗಿದೆ. ಜ್ಞಾನಾರ್ಜನೆ ಎಲ್ಲಿ ಯಾವ ಸಮಯದಲ್ಲಿ ಸಿಕ್ಕರೂ ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬೀಳುತಿದ್ದಾರೆ.
ಇದಕ್ಕೆ ಉದಾಹರಣೆ ಎಂಬಂತೆ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮಹಾಂತೇಶ ಬಡಿಗೇರ ಕಳೆದ ಹಲವು ತಿಂಗಳುಗಳಿಂದ ಎನ್‌ಎಂಎಂಎಸ್, ಮಾನಸಿಕ ಸ್ಥಿರತೆ, ಇಂಗ್ಲಿಷ ಸೇರಿದಂತೆ ಹಲವು ವಿಷಯಗಳ ಕುರಿತು ಬೆಳಿಗ್ಗೆ ೬ ರಿಂದ ೭ ಘಂಟೆಯವರೆಗೆ ವಿಶೇಷ ತರಬೇತಿ ತರಗತಿಗಳನ್ನು ಭೋದಿಸುತಿದ್ದು, ಈ ವಿಶೇಷ ತರಗತಿಗೆ ಬೆಳಗಿನ ಚುಮು ಚುಮು ಛಳಿಯಲ್ಲೂ ಪ್ರತಿದಿನ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿರುವುದು ವಿದ್ಯಾರ್ಥಿಗಳ ಜ್ಞಾನದ ದಾಹಕ್ಕೆ ಹಿಡಿದ ಕನ್ನಡಿ.
ಹಲವು ವಿದ್ಯಾರ್ಥಿಗಳು ಬೆಳಿಗ್ಗೆ ೫ ಘಂಟೆಗೆ ಎದ್ದು ಛಳಿಗಾಳದ ವಿಪರೀತ ಛಳಿಯಲ್ಲಿ ಸುಮಾರು ಐದು ಕಿ.ಮಿ. ಸೈಕಲ್ ಸವಾರಿ ಮಾಡಿಕೊಂಡು ಬಂದು ಈ ವಿಶೇಷ ತರಗತಿಗಳಿಗೆ ಹಾಜರಾಗುತಿದ್ದಾರೆ.
ಈ ರೀತಿಯ ಪೈಪೋಟಿ ನಗರ ಪ್ರದೇಶಗಳ ಖಾಸಗಿ ಶಾಲೆಗಳಲ್ಲಿ ಮಾತ್ರ ಕಾಣಸಿಗುತಿತ್ತು. ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿಯೂ ಅದರಲ್ಲೂ ಸರಕಾರಿ ಶಾಲೆಗಳಲ್ಲಿ ಕಂಡು ಬರುತ್ತಿರುವುದು ಉತ್ತಮ ಬೆಳವಣಿಗೆ. ತಮ್ಮ ಅಮೂಲ್ಯ ಹೆಚ್ಚುವರಿ ಸಮಯವನ್ನು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮೀಸಲಿಟ್ಟು ಮಕ್ಕಳನ್ನು ಈಗಿನಿಂದಲೇ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುತ್ತಿರುವ ಶಿಕ್ಷಕ ಮಹಾಂತೇಶ ಬಡಿಗೇರ ರವರ ಕಾರ್ಯಕ್ಕೆ ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

