ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಮಹಾದ್ವಾರದ ಮುಂಭಾಗ ಬುಧವಾರ ರಾತ್ರಿ ಟೇಲರ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಾದಚಾರಿ ರಸ್ತೆ ಮೇಲೆ ನುಗ್ಗಿ ಅಲ್ಲಿನ ಅಲಂಕಾರಿಕ ವಿದ್ಯುತ್ ಕಂಬ ಹಾಗೂ ಪಾದಚಾರಿ ರಸ್ತೆಯಲ್ಲಿಟ್ಟಿದ್ದ ಒತ್ತು ಗಾಡಿ, ವಿವಿಧ ವ್ಯಾಪಾರಸ್ಥರು ಇಟ್ಟಿದ್ದ ಹಣ್ಣು-ಹಂಪಲ, ವಿಭೂತಿ ಸೇರಿದಂತೆ ವಿವಿಧ ಸಾಮಗ್ರಿಗಳು ಹಾನಿಯಾದ ಘಟನೆ ನಡೆದಿದೆ.
ವಿಜಯಪುರದಿಂದ ಹೂವಿನಹಿಪ್ಪರಗಿ ಕಡೆಗೆ ಹೊರಟಿದ್ದ ಟೇಲರ್ ಲಾರಿಯಲ್ಲಿ ಯಾವುದೇ ಸಾಮಗ್ರಿಗಳು ಇರಲಿಲ್ಲ. ರಭಸವಾಗಿ ಬರುತ್ತಿದ್ದ ಟೇಲರ್ ಲಾರಿ ಬುಧವಾರ ರಾತ್ರಿ ಸುಮಾರು ೯ ಗಂಟೆಯ ನಂತರ ನೋಡುತ್ತಿದ್ದಂತೆ ರಸ್ತೆಯ ಬಲಕ್ಕೆ ಇರುವ ವಿಭಾಜಕದ ಮಧ್ಯದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಒಂದು ವಿದ್ಯುತ್ ಕಂಬ ನೆಲಕ್ಕೆರುಳಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ಟೇಲರ್ ಲಾರಿ ಎಡಕ್ಕೆ ಬಸವೇಶ್ವರ ದೇವಸ್ಥಾನದ ಮಹಾದ್ವಾರದ ಮುಂಭಾಗವಿರುವ ಪಾದಚಾರಿ ರಸ್ತೆ ಮೇಲೆ ಒಮ್ಮೆಲೆ ನುಗ್ಗಿದೆ. ಈ ವೇಳೆಯಲ್ಲಿ ಯಾವುದೇ ವಾಹನ, ಜನರ ಸಂಚಾರವಿಲ್ಲದೇ ಇರುವದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಟೇಲರ್ ಲಾರಿ ತಾಲೂಕಿನ ಹೂವಿನಹಿಪ್ಪರಗಿ ಹತ್ತಿರ ಕಾಲುವೆ ಕಾಮಗಾರಿ ಮಾಡುತ್ತಿರುವ ಜೆಎನ್ಎಸ್ ಕನ್ಸ್ಟ್ರಕ್ಷನ್ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪಿಐ ಶರಣಗೌಡ ನ್ಯಾಮಣ್ಣನವರ, ಕ್ರೈಂ ಪಿಎಸ್ಐ ಎನ್.ಟಿ.ದಡ್ಡಿಮನಿ ಅವರು ಸ್ಥಳಕ್ಕೆ ತಮ್ಮ ಸಿಬ್ಬಂದಿಗಳೊಂದಿಗೆ ಆಗಮಿಸಿ ಅಪಘಾತಕ್ಕೆ ಈಡಾದ ಟೇಲರ್ ಲಾರಿಯನ್ನು ಜೆಸಿಬಿಯ ನೆರವಿನಿಂದ ತೆರವುಗೊಳಿಸಿ ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಂಡರು.
ಒಂದು ವೇಳೆ ಈ ಘಟನೆ ಹಗಲು ವೇಳೆ ಇಲ್ಲವೇ ಸಂಜೆ ಹೊತ್ತು ನಡೆದಿದ್ದರೆ ಅಪಾಯ ಬಹಳವಾಗುತ್ತಿತ್ತು. ರಸ್ತೆ ವಿಭಜಕದ ಮಧ್ಯೆದಲ್ಲಿ ಅಳವಡಿಸಲಾದ ವಿದ್ಯುತ್ ಕಂಬದ ಕೆಳಗೆ ಇರುವ ಕಟ್ಟೆ ವಿಭಜಕದ ಹೊರಗೆ ಬಂದಿದೆ. ಇದು ವಾಹನಗಳ ಅಪಘಾತಗಳಿಗೆ ಕಾರಣವಾಗುತ್ತಿದೆ. ವಿಜಯಪುರ ರಸ್ತೆಯಲ್ಲಿರುವ ರಸ್ತೆ ವಿಭಜಕದ ಮಧ್ಯೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳು ಸಹ ಬೆಳಗದೇ ಇರುವದು ಸಹ ಅಪಘಾತವಾಗಲು ಕಾರಣವಾಗುತ್ತಿದೆ. ಟೇಲರ್ ಲಾರಿ ಚಾಲಕ ಕುಡಿದು ವಾಹನ ಚಾಲನೆ ಮಾಡಿದ ಪರಿಣಾಮ ಈ ಘಟನೆ ನಡೆದಿದೆ ಎಂಬ ಮಾತು ನೆರೆದ ಜನರಿಂದ ಕೇಳಿಬಂದಿತ್ತು.
ಟೇಲರ್ ಲಾರಿ ಅಪಘಾತ ನಡೆದ ಸ್ಥಳದಲ್ಲಿ ದಿನನಿತ್ಯವೂ ಒತ್ತು ಗಾಡಿ ಮೇಲೆ ಹಣ್ಣಿನ ವ್ಯಾಪಾರ ಮಾಡುತ್ತಿರುವ ಬಸಯ್ಯ ಗಣಾಚಾರಿ ಅವರು, ಈ ಅಪಘಾತ ನಡೆಯುವ ಕೆಲ ಸಮಯದ ಮುಂಚೆ ಅಷ್ಟೇ ಮನೆಗೆ ಇಂದು ಹೋದೆ. ನಿತ್ಯವೂ ನಾನು ೯ ಗಂಟೆ ನಂತರ ಮನೆಗೆ ಹೋಗುತ್ತಿದ್ದೆ. ಇಂದು ಮಳೆ ಹನಿ ಬಂದ ಪರಿಣಾಮ ನಾನು ನನ್ನ ಮಗನೊಂದಿಗೆ ೯ ಗಂಟೆಯೊಳಗೆ ವ್ಯಾಪಾರವನ್ನು ಬಂದ್ ಮಾಡಿ ಎಂದಿನಂತೆ ನನ್ನ ಒತ್ತು ಗಾಡಿ, ಹಣ್ಣು-ಹಂಪಲ ಪ್ಯಾಕ್ ಮಾಡಿ ಇಟ್ಟು ಮನೆಗೆ ಹೋಗಿ ಹತ್ತು ನಿಮಿಷ ಆಗಿರಲಿಲ್ಲ. ನನಗೆ ಈ ವಿಷಯ ಗೊತ್ತಾಗಿ ಓಡಿ ಬಂದೆ. ನನ್ನ ಒತ್ತು ಗಾಡಿ, ಹಣ್ಣು ಹಾನಿಯಾಗಿದೆ. ಇಂದು ಯಾವುದೇ ವ್ಯಾಪಾರವಿಲ್ಲದೇ ಖಾಲಿ ಕುಳಿತುಕೊಂಡಿದ್ದೇನೆ. ನನಗೆ ಹಾನಿಯಾಗಿದೆ ಎಂದ ಅವರು, ನನ್ನ ಮೇಲೆ ಬಸವಣ್ಣ ದೇವರು ಇದ್ದಾನೆ. ಅವನೇ ನನ್ನ ಮತ್ತು ಮಗನ ಜೀವ ಕಾಪಾಡಿದ್ದಾನೆ. ನಿತ್ಯದಂತೆ ನಾವು ಇಲ್ಲಿಯೇ ಇದ್ದರೆ ಖಂಡಿತ ಈ ಲಾರಿ ನಮ್ಮ ಜೀವ ತೆಗೆದುಕೊಳ್ಳುತ್ತಿತ್ತು. ದೇವರು ದೊಡ್ಡವ ನಮ್ಮ ಜೀವ ಕಾಪಾಡಿದ ಎಂದು ದೇವರಿಗೆ ನಮಸ್ಕಾರ ಮಾಡುತ್ತಾ ಹೇಳಿದರು.
ಶಿವುಬಾಯಿ ಭಜಂತ್ರಿ, ನೀಲಮ್ಮ ಗಣಾಚಾರಿ ಎಂಬುವವರ ಒತ್ತುಗಾಡಿ, ಹಣ್ಣು, ವಿಭೂತಿ ಸೇರಿದಂತೆ ವಿವಿಧ ಸಾಮಗ್ರಿಗಳು ಹಾನಿಯಾಗಿವೆ. ಅಲ್ಲದೇ ಪುರಸಭೆಯವರು ಪಾದಚಾರಿ ರಸ್ತೆಗೆ ಅಳವಡಿಸಿದ ಗ್ರೀಲ್, ಅಲಂಕಾರಿಕ ವಿದ್ಯುತ್ ಕಂಬ ಸಹ ಕಿತ್ತುಹೋಗಿ ಅಂದಾಜು 2.50 ಲಕ್ಷ ರೂ. ಹಾನಿಯಾಗಿದೆ ಎಂದು ವಿದ್ಯುತ್ ಎಂಟರ್ ಪ್ರೈಜಿಸ್ ಕಂಪನಿಯ ವಿಜಿಟರ್ ದರ್ಶನಗೌಡ ಉಮೇಶ ಕೆ. ಈ ಕುರಿತು ಪ್ರಕರಣ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

