ತಿಕೋಟಾದಲ್ಲಿ ಸಂಭ್ರಮದ ಎಳ್ಳ ಅಮವಾಸ್ಯೆ ಆಚರಣೆ | ಸಾಮೂಹಿಕ ಭೋಜನ
ತಿಕೋಟಾ: ಗ್ರಾಮೀಣ ಭಾಗದ ರೈತಾಪಿ ವರ್ಗ ಆಚರಿಸುವ ವಿಶೇಷ ಹಬ್ಬಗಳಲ್ಲಿ ಎಳ್ಳ ಅಮವಾಸ್ಯೆ ಒಂದು ಹಬ್ಬವಾಗಿದೆ. ಈ ದಿನ ರೈತ ತನ್ನ ಕುಟುಂಬ ವರ್ಗ, ರಕ್ತ ಸಂಬಧಿಗಳು ಹಾಗೂ ಆತ್ಮಿಯರನ್ನು ಕರೆದು ತೋಟದಲ್ಲಿ ಬೆಳೆದ ಫಸಲಿನ ಮಧ್ಯೆ ಉತ್ಸಾಹದಿಂದ ಭೂ ತಾಯಿಗೆ ಪೂಜೆ ಸಲ್ಲಿಸಿ ಎಲ್ಲರೊಟ್ಟಿಗೆ ಮೃಷ್ಟಾನ್ನ ಭೋಜನ ಸವಿದು ಹಬ್ಬ ಆಚರಣೆ ಮಾಡುತ್ತಾನೆ. ತಾಲ್ಲೂಕಿನ ಬಹುತೇಕ ಹಳ್ಳಿಗಳ ರೈತರ ತೋಟದಲ್ಲಿ ಗುರುವಾರ ಸಂಭ್ರಮದಿಂದ ಹಬ್ಬ ಆಚರಿಸಿದರು.
ರೈತ ಈ ದಿನ ರೈತ ತಾನು ಬೆಳೆದ ಬೆಳೆ ಸುರಕ್ಷಿತವಾಗಿರಲಿ ಎಂದು ತೋಟದ ಬನ್ನಿ ಮರ ಹಾಗೂ ಜೊಳ, ಕಡಲೆ ಇತರೆ ಬೆಳೆಯ ಮಧ್ಯೆ ಐದು ಕಲ್ಲನ್ನು ಇಟ್ಟು, ವಿಭೂತಿ ಕುಂಕುಮ ಅರಿಷಿನ ಹಚ್ಚಿ ಭಕ್ತಿ ಭಾವದಿಂದ ಪ್ರಕೃತಿಯನ್ನು ಪೂಜಿಸುತ್ತಾನೆ. ಇಡೀ ತೋಟದ ಸುತ್ತ ತಿರುಗುತ್ತಾ ಚರಗ ಚೆಲ್ಲಿದರು.
ಮನೆಯಲ್ಲಿ ತಯಾರಿಸಿದ ವಿವಿಧ ಖಾಧ್ಯಗಳ ಊಟ ಸವಿಯಲು ರೈತ ಆತ್ಮಿಯರನ್ನು ಆಹ್ವಾನಿಸಿ ಸಜ್ಜೆ ರೊಟ್ಟಿ, ಮೊಸರು, ಹಿಂಡಿ, ಕೆಂಪು ಚಟ್ನಿ, ಸೆಂಗಾ ಹೊಳಗಿ, ಚಿತ್ರಾನ್ನ, ಬಜಿ, ಕಡುಬು, ಪುಂಡಿ ಪಲ್ಯೆ ವಿವಿಧ ತರಹದ ರುಚಿಕರವಾದ ಊಟವನ್ನು ಪ್ರಕೃತಿ ಮಡಿಲಿನಲ್ಲಿ ಕುಳಿತು ಸವಿದರು.
ಅಧುನಿಕತೆಯ ಭರದಲ್ಲಿ ಜೀವನ ನಡೆಸುವ ನಾವುಗಳು ಹಳೆಯಕಾಲದ ಎತ್ತಿನ ಬಂಡೆ ಮರೆತು ಈಗಿನ ಕಾಲದ ಕಾರು, ಬೈಕ್, ಟ್ರ್ಯಾಕ್ಟರ್ ಮೂಲಕ ಜನರು ತೋಟಗಳತ್ತ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣದಿಂದ ಬಂದ ಸಂಭಂದಿಕರು ಹಾಗೂ ಅವರ ಮಕ್ಕಳು ಈ ದಿನ ತೋಟದ ಪ್ರಕೃತಿ ಸೌಂದರ್ಯ ಸವಿದು ಈ ಹಬಬ ಆಚರಿಸಿದರು.


