ಜಯ್ ನುಡಿ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೋ.ನಂ. ೯೪೪೯೨೩೪೧೪೨
ಈ ದಿನ ಮಾಡಲು ಮತ್ತೆ ಸಾಕಷ್ಟು ಕೆಲಸಗಳಿವೆ. ನಿನ್ನೆಯೇ ಮಾಡಿ ಮುಗಿಸಬೇಕಿದ್ದ ಬಹಳಷ್ಟು ಕೆಲಸಗಳು ಹಾಗೇ ಬಾಕಿ ಉಳಿದುಕೊಂಡಿವೆ. ಕೆಲಸದ ಹೊರೆ ಹೆಚ್ಚುತ್ತಿದೆ ಅದರೊಂದಿಗೆ ತಲೆನೋವು ಹೆಚ್ಚುತ್ತಿದೆ. ನಾವು ಮಾಡುವ ಕೆಲಸವನ್ನು ಇಷ್ಟಪಡದಿದ್ದರೆ, ಭಾರ ಎಂದುಕೊಂಡರೆ, ಕೆಲಸ ಮಾಡದೇ ನಿರ್ಲಕ್ಷಿಸುವುದನ್ನು ಮುಂದುವರೆಸಿದರೆ, ಸಿಗುವ ಫಲಿತಾಂಶವಾದರೂ ಏನು? ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಉಪಜೀವನಕ್ಕೆ ಮಾತ್ರ ಗೊಣಗುತ್ತ ಮಾಡುವ ಕೆಲಸ ಆಗುತ್ತದೆಯೇ ಹೊರತು ನಿಜವಾಗಿ ಸಂತೃಪ್ತಿ ನೀಡುವ ಕೆಲಸವಾಗಲಾರದು. ಕಾಯಕ ಸಂತೃಪ್ತಿ ತರಲಾರದು. ನಾವು ಇಷ್ಟ ಪಡುವ ಕೆಲಸದಲ್ಲಿ ತೊಡಗಿದ್ದರೆ ಕೆಲಸ ಕಷ್ಟವೆನಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಮಾಡಬೇಕು ಮಾಡುತ್ತಲೇ ಇರಬೇಕು ಎಂದನಿಸುವುದು ಸಹಜ.
*ಕೆಲಸದ ಪ್ರತಿ ಪ್ರೀತಿ*
ಇಷ್ಟ ಪಟ್ಟು ಮಾಡುವ ಕೆಲಸದಲ್ಲಿ ಸಾಹಸ ಮಾಡಿ ಸಾಧನೆ ಮಾಡಬಹುದು. ಮುಂದಿನ ಪೀಳಿಗೆಗೆ ಸಾಹಸಗಾಥೆಯನ್ನು ಬಿಟ್ಟು ಹೋಗಬಹುದು ಯುವ ಜನರು ಹುಚ್ಚು ಹತ್ತಿಸುವಂತಹ ಸಾಹಸಮಯ ಪ್ರೋತ್ಸಾಹದಾಯಕ ಕತೆಗಳನ್ನು ಕೇಳಿದಾಗ ತಾವೂ ಅವರಂತೆ ಆಗಬೇಕೆಂದು ಬಯಸುತ್ತಾರೆ. ಇಷ್ಟ ಪಟ್ಟ ಕೆಲಸವನ್ನು ಮಾಡಲು ಅದರಲ್ಲಿ ಮುಂದುವರೆಯಲು ಇಂತಹದೇ ಕುಲ, ಗೋತ್ರ, ವಯಸ್ಸು ಲಿಂಗ ಇರಬೇಕೆಂದೇನೂ ಇಲ್ಲ. ಯಾರು ಬೇಕಾದರೂ ಆರಂಭಿಸಬಹುದು. ಇಷ್ಟ ಪಟ್ಟ ಕೆಲಸ ಮಾಡಲು ದೊಡ್ಡ ಬಂಡವಾಳವೇ ಬೇಕೆಂದಿಲ್ಲ. ಸಣ್ಣ ಮೊತ್ತದಿಂದಲೂ ಆರಂಭಿಸಬಹುದು. ಆದರೆ ಕೆಲಸದ ಪ್ರತಿ ಪ್ರೀತಿ ಮಾತ್ರ ಅಗಾಧವಾಗಿರಬೇಕು. ಇಷ್ಟಪಡುವ ಕೆಲಸವನ್ನು ಕಷ್ಟಪಡದೇ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಇಲ್ಲಿವೆ ಕೆಲ ಸಲಹೆಗಳು.
*ಅನಿವಾರ್ಯತೆ ಅರಿಯಿರಿ*
ತೀವ್ರ ಪೈಪೋಟಿಯ ಈ ದಿನಮಾನಗಳಲ್ಲಿ ರೇಸ್ ಕುದುರೆಯಂತೆ ದಿನವೂ ಓಡುತ್ತಲೇ ಇರಬೇಕು. ಓಡದೇ ಮೈಮರೆತರೆ ಕತೆ ಮುಗಿದೇ ಹೋಯಿತು. ಅನ್ನೋ ತರ ಇದೆ. ಅದರಲ್ಲೂ ಬದುಕಿನಲ್ಲಿ ಯಶಸ್ವಿಯಾಗಲು ಮಾಡುವ ಕೆಲಸದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಅನಿವಾರ್ಯತೆ ಇದ್ದೇ ಇರುತ್ತದೆ. ತಮಾಷೆಯ ಸಂಗತಿಯೆಂದರೆ ೯೬% ರಷ್ಟು ಜನರು ಬೆಳಿಗ್ಗೆ ಎದ್ದ ಒಂದು ಗಂಟೆಯೊಳಗೆ ತಮ್ಮ ಮೊಬೈಲ್ ಫೋನ್‌ನ್ನು ಪರಿಶೀಲಿಸುತ್ತಾರೆ ಮತ್ತು ೬೧% ಜನರು ಮೊದಲ ಐದು ನಿಮಿಷದಲ್ಲಿ ಇಣುಕಿ ನೋಡುತ್ತಾರೆ. ಇದು ನಿರುಪದ್ರವವೆಂದು ತೋರುತ್ತದೆಯಾದರೂ, ನಾವು ನಮ್ಮ ಕಣ್ಣುಗಳನ್ನು ತೆರೆದ ತಕ್ಷಣ ನಮ್ಮ ಫೋನ್‌ಗಳನ್ನು ಪರಿಶೀಲಿಸುವುದು ಪ್ರತಿಕ್ರಿಯಾತ್ಮಕ ರೀತಿಯ ದಿನವನ್ನು ಹೊಂದಲು ನಮಗೆ ಹೊಂದಿಸುತ್ತದೆ. ಹಾಸಿಗೆಯಿಂದ ಎದ್ದಾಗ ಮಾಡುವ ಮೊದಲ ಕೆಲಸವೆಂದರೆ ವಾಟ್ಸಪ್ ಇಲ್ಲವೇ ಫೇಸ್‌ಬುಕ್ ಇನ್ನಿತರೆ ಸಾಮಾಜಿಕ ಜಾಲತಾಣಗಳ ಅಕೌಂಟ್‌ನಲ್ಲಿ ಇಣುಕಿ ಹಾಕುತ್ತೀರಿ. ಅದು ಒಳ್ಳೆಯದಿರಲಿ ಕೆಟ್ಟದ್ದಿರಲಿ ಹೀಗೆ ಮಾಡುವುದರಿಂದ ಮುಂಜಾನೆಯ ಉಪಯುಕ್ತ ಸಮಯವನ್ನು ಮನಸ್ಥಿತಿಯನ್ನು ಇತರ ಜನರಿಗೆ ಹೊಂದಿಸಲು ಅವಕಾಶ ನೀಡಿದಂತಾಗುತ್ತದೆ. ಬದಲಾವಣೆ ಅನಿವಾರ್ಯ ಅನ್ನುವಷ್ಟು ದೊಡ್ಡ ಪೆಟ್ಟು ಬಿದ್ದಾಗ ಮಾತ್ರ ಬದಲಾಗುವುದಕ್ಕಿಂತ ಮೊದಲೇ ಬದಲಾಗುವುದು ಒಳಿತು.
ಸಮಯದ ಬೆಲೆ ಅರಿಯಿರಿ.
ಜಗತ್ತಿನಲ್ಲಿ ಎಲ್ಲರನ್ನೂ ಒಂದೇ ಸಮನಾಗಿ ನೋಡುವುದು ಸಮಯ ಮಾತ್ರ. ಬಡವನಿಗೂ ಒಂದೇ ಶ್ರೀಮಂತನಿಗೂ ಒಂದೇ. ಸಂಸ್ಕೃತದಲ್ಲಿನ ಮಾತೊಂದು ಹೀಗೆ ಹೇಳುತ್ತದೆ. ‘ಸಕಲ ಐಶ್ವರ್ಯವನ್ನು ಕೊಟ್ಟರೂ ನಾವು ಒಂದು ಕ್ಷಣವನ್ನು ಕೂಡ ಮರಳಿ ಪಡೆಯಲಾರೆವು.’ ಆದ್ದರಿಂದ, ಸಮಯವನ್ನು ವ್ಯರ್ಥ ಮಾಡುವುದು ಒಂದು ಪ್ರಮಾದವೇ ಸರಿ.’ ಯಾವತ್ತೂ ಕಾಯುತ್ತ ಯೋಚಿಸುತ್ತ ಕಾಲ ಕಳೆಯಬೇಡಿ. ಏಕೆಂದರೆ ಬದುಕು ಯೋಚನೆಗಿಂತಲೂ ವೇಗವಾಗಿ ಸಾಗುತ್ತಿರುತ್ತದೆ. ಮನಸ್ಸು ಮಾಡಿದರೆ ಹಣವನ್ನು ಹೆಚ್ಚಿಸಬಹುದು. ಆದರೆ ಸಮಯವನ್ನು ಹಿಗ್ಗಿಸಲು ಸಾಧ್ಯವಿಲ್ಲ. ಏಕೆಂದರೆ ಸಮಯ ಎಲ್ಲರಿಗೂ ಒಂದೇ. ಅದಕ್ಕೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಮಾಡಿ ಗೊತ್ತಿಲ್ಲ. ಇರುವ ಸಮಯದಲ್ಲೇ ಹಲವಾರು ಕೆಲಸಗಳನ್ನು ಮಾಡಿ ಮುಗಿಸುವುದು ಒಂದು ಕೌಶಲ್ಯವೇ ಸರಿ
*ಕೆಲಸಗಳ ಪಟ್ಟಿ*
ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವವರ ಉತ್ಪಾದನೆ ಹೆಚ್ಚುತ್ತಲೇ ಹೋಗುತ್ತದೆ. ಏಕೆಂದರೆ ಅವರಿಗೆ ಸಮಯ ಅಮೂಲ್ಯ ಎಂಬುದು ತಿಳಿದಿದೆ. ಸಮಯ ನಿರ್ವಹಣೆಯ ಕಲೆಯೂ ಚೆನ್ನಾಗಿ ಗೊತ್ತಿದೆ. ಹೀಗಾಗಿ ಕೈಯಲ್ಲಿರುವ ಕೆಲಸ ಮುಗಿಸಲು ಒದ್ದಾಡುವುದಿಲ್ಲ ಮುಂದೂಡಲು ಬಯಸುವುದಿಲ್ಲ. ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮಾಡಿಟ್ಟುಕೊಳ್ಳಲು ಮರೆಯುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಇದರಲ್ಲಿ ತಪ್ಪಿಸ್ಥರು ಮತ್ತು ಇದು ಅನಿವಾರ್ಯವಾಗಿ ನಮ್ಮ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ ಮುಂಜಾನೆ ಇಲ್ಲವೇ ಹಿಂದಿನ ದಿನ ಕೆಲಸಗಳ ಪಟ್ಟಿ ಮಾಡಿಟ್ಟುಕೊಳ್ಳಿ. ಅದರಲ್ಲೂ ನಿಮ್ಮ ಗುರಿ ಸಾಧನೆಗೆ ಮಾಡಲೇಬೇಕಾದ ಕಾರ್ಯ ಚಟುವಟಿಕೆಗಳ ಪಟ್ಟಿ ಮಾಡಿಕೊಳ್ಳಿ. ಆದ್ಯತೆ ಮೇರೆಗೆ ಕಾರ್ಯ ನಿರ್ವಹಿಸಿ.
*ಟೈಮರ್ ಬಳಸಿ*
ಪ್ರತಿ ಕಾರ್ಯದಲ್ಲಿ ಎಷ್ಟು ಸಮಯದವರೆಗೆ ಕೆಲಸ ಮಾಡುತ್ತೀರಿ ಎಂಬದುನ್ನು ಟ್ರ್ಯಾಕ್ ಮಾಡಲು ನೀವು ಟೈಮರ್ ಅಥವಾ ಸ್ಟಾಪ್ ವಾಚ್‌ಅನ್ನು ಬಳಸಬಹುದು. ಪ್ರತಿ ನಿಯೋಜನೆಯನ್ನು ನಿರ್ವಹಿಸಲು ನೀವು ಪೂರ್ವ ನಿರ್ಧರಿತ ಸಮಯವನ್ನು ಹೊಂದಿಸಿದಾಗ, ನೀವು ಗಡಿಯಾರವನ್ನು ಸೋಲಿಸಲು ಮತ್ತು ವೇಗವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೀರಿ. ಪಾರ್ಕಿನ್ಸನ್ ನಿಯಮದ ಪ್ರಕಾರ ‘ಕೆಲಸವು ಅದಕ್ಕೆ ನಿಗದಿಪಡಿಸಿದ ಸಮಯವನ್ನು ತುಂಬಲು ವಿಸ್ತರಿಸುತ್ತೆ.’ ಕಾರ್ಯವನ್ನು ಪೂರ್ಣಗೊಳಿಸಲು ನೀವು ನಿರ್ಧಿಷ್ಟ ಸಮಯವನ್ನು ಹೊಂದಿಸದಿದ್ದರೆ, ಅದನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದ್ದರಿಂದ ದಿನವಿಡೀ ನಿಮ್ಮ ಕೆಲಸವನ್ನು ವೇಗಗೊಳಿಸಲು ಪ್ರತಿ ನಿಯೋಜನೆಗೆ ನಿರ್ಧಿಷ್ಟ ಸಮಯದ ಗುರಿಗಳನ್ನು ಹೊಂದಿಸಲು ಪ್ರಯತ್ನಿಸಿ.
*ದಿನವನ್ನು ಪರಿಶೀಲಿಸಿ*
ನಿಮ್ಮ ದಿನ ಹೇಗೆ ಹೋಯಿತು ಎಂಬುದನ್ನು ವಿಶ್ಲೇಷಿಸಲು ದಿನದ ಕೊನೆಯಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ಪ್ರತಿ ಚಟುವಟಿಕೆಯು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದನ್ನು ವೇಗವಾಗಿ ಪೂರ್ಣಗೊಳಿಸಬಹುದೇ ಎಂದು ಯೋಚಿಸಿ. ನಂತರ ನಿಮ್ಮ ಕಾರ್ಯಕ್ಷಮತೆಯನ್ನು ನೀವು ಹೇಗೆ ಸುಧಾರಿಸಬಹುದು ಎಂದು ಯೋಚಿಸಿ. ೮೦/೨೦ ನಿಯಮವನ್ನು ಅನುಸರಿಸಿ. ಇದು ಪ್ಯಾರೆಟೊದ ತತ್ವವಾಗಿದೆ. ಇದು ಸುಮಾರು ೮೦ ಪ್ರತಿಶತ ಪರಿಣಾಮಗಳು ೨೦ ಪ್ರತಿಶತ ಕಾರಣಗಳಿಂದ ಬರುತ್ತವೆ ಎಂದು ಹೇಳುತ್ತದೆ.
*ಏಕ ಕಾರ್ಯದಲ್ಲಿ ತೊಡಗಿ*
ಬಹುತೇಕ ಜನ ಕೆಲಸದ ಉತ್ಪಾದಕತೆ ಹೆಚ್ಚಿಸಲು ಒಂದೇ ಸಮಯದಲ್ಲಿ ಬಹು ಕಾರ್ಯ ಮಾಡಲು ನೋಡುತ್ತಾರೆ. ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಲು ಸಾಧ್ಯ ಬಹು ಕಾರ್ಯಗಳ ಮೇಲೆ ಒಂದೇ ಸಮಯದಲ್ಲಿ ನಿಜವಾಗಿಯೂ ಸಾಧ್ಯವಿಲ್ಲ. ಆದ್ದರಿಂದ ಒಂದು ಸಮಯದಲ್ಲಿ ಒಂದೇ ಕೆಲಸದಲ್ಲಿ ತೊಡಗಿಕೊಳ್ಳಿ. ಅದು ಮುಗಿದ ನಂತರ ಮುಂದಿನದಕ್ಕೆ ತೆರಳಿ.
*ಸ್ಚಯಂಚಾಲಿತಗೊಳಿಸಿ*
ಜೀವನವು ತುಂಬಾ ಸೂಕ್ಷ್ಮವಾಗಿದೆ, ಆದರೆ ನೀವು ಅದನ್ನು ಒಮ್ಮೆ ಮಾತ್ರ ಬದುಕಲು ಅವಕಾಶ. ಆದ್ದರಿಂದ ಸರಿಯಾದ ನಿರ್ಧಾರಗಳನ್ನು ಮಾಡಿ. ಮನೆಯಲ್ಲಿ ಕೆಲಸ ಮಾಡಬೇಕು. ಕಚೇರಿಯಲ್ಲೂ ಕೆಲಸ ಮಾಡಬೇಕು. ಹೀಗಾಗಿ ಸಮಯವನ್ನು ಉಳಿಸಲು ಮತ್ತು ಅರ್ಥಪೂರ್ಣ ವಿಷಯಗಳಲ್ಲಿ ಹೂಡಿಕೆ ಮಾಡಲು ಒಂದು ಮಾರ್ಗವೆಂದರೆ ನಿಮ್ಮ ದೈನಂದಿನ ಕೆಲವು ನಿರ್ಧಾರಗಳನ್ನು ಸ್ಚಯಂಚಾಲಿತಗೊಳಿಸಿ. ಉದಾಹರಣೆಗೆ, ಬೆಳಗಿನ ಉಪಹಾರ, ಊಟ, ಮತ್ತು ರಾತ್ರಿಯ ಊಟಕ್ಕೆ ಸಮಯವನ್ನು ನಿಗದಿಪಡಿಸಿ. ಹೆಚ್ಚಿನ ಜನರು ಏನು ತಿನ್ನಬೇಕೆಂದು ನಿರ್ಧರಿಸಲು ಮತ್ತು ಅದನ್ನು ತಯಾರಿಸಲು ನಂತರ ಸ್ವಚ್ಛಗೊಳಿಸಲು ಬಹಳಷ್ಟು ಸಮಯವನ್ನು ವ್ಯರ್ಥ ಮಾಡುತ್ತಾರೆ. ನಿಮ್ಮ ಕೆಲಸದ ವೇಳೆಯಲ್ಲಿ ನಿಮಗೆ ಬಿಡುವಿನ ಸಮಯವಿಲ್ಲದಿದ್ದಾಗ, ಹಾಸ್ಯ ಪ್ರಸಂಗಕ್ಕೆ ಅಥವಾ ಸೃಜನಶೀಲತೆ ಮತ್ತು ಸ್ಪೂರ್ತಿಯ ಕ್ಷಣಗಳನ್ನು ಹೊಂದಲು ಸ್ವಲ್ಪ ಜಾಗವನ್ನು ಹೊಂದಿಸಿ. ‘ನಿಮ್ಮ ಕಾರ್ಯಗಳಿಂದ ನಿಮ್ಮ ಭಯದ ಮೇಲೆ ಜಯ ಸಾಧಿಸಬಹುದು’ ಎಂಬುದನ್ನು ನೆನಪಿಡಿ.
*ಕೊನೆ ಹನಿ*
ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ತಡೆಯೋ ತಾಕತ್ತು ಯಾರಿಗೂ ಇಲ್ಲ. ಅದರಂತೆ ಕೆಲಸದಲ್ಲಿ ಖುಷಿಯಾಗಿ ಇರುವುದೆಂದರೆ ಹೆಚ್ಚು ಹಣ ಮಾಡುವುದು ಎಂದರ್ಥವಲ್ಲ. ಯಾವುದೇ ಸಾಧಕರ ಆತ್ಮಕತೆಯನ್ನು, ಜೀವನ ಚರಿತ್ರೆಯನ್ನು ಓದಿ ನೋಡಿ, ಅವರು ಆರಂಭಿಕ ಹಂತದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಾಡುವ ಕೆಲಸದಲ್ಲಿ ಉತ್ತಮ ಗುಣಮಟ್ಟದ ಫಲ ಪಡೆಯುವುದೆಂದರೆ ಲಾಭ ಗಳಿಸುವುದೆಂದರೆ ವಂಚನೆ ಮಾಡುವುದು ಎಂಬ ಭಾವನೆ ಅನೇಕರಲ್ಲಿದೆ. ಆದರೆ ವಾಸ್ತವದಲ್ಲಿ ಅದು ವಿಶ್ವಾಸ ವರ್ಧನೆ. ಆ ಮೂಲಕ ಪ್ರೀತಿ ಮತ್ತು ಗೌರವ ವರ್ಧನೆ. ಹೀಗೆ ಗೌರವ ವರ್ಧಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಹಣವನ್ನು ತಂದುಕೊಡುತ್ತದೆ. ಜತೆಗೆ ಅದು ಗೌರವ ಸ್ಥಾನಮಾನ ಸಂತೃಪ್ತಿಯನ್ನು ತರುತ್ತದೆ.


