ಗದಗ ಜಿಲ್ಲೆಯ ಸೂರಣಗಿಯಲ್ಲಿ ನಡೆದ ದುರ್ಘಟನೆ | ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ, ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ
ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಊರಿನ ಬೀದಿಯಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ಘೋರ ದುರ್ಮರಣಕ್ಕೀಡಾದ ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ಸಾಮೂಹಿಕ ಅಂತ್ಯಸಂಸ್ಕಾರ: ಯುವಕರ ಅಂತಿಮ ಸಂಸ್ಕಾರದಲ್ಲಿ ಇಡೀ ಸೂರಣಗಿ ಗ್ರಾಮವಲ್ಲದೆ ಸುತ್ತಮುತ್ತಲಿನ ಊರುಗಳ ಜನ ಸಹ ಭಾಗಿಯಾಗಿದ್ದರು. ವಿದ್ಯುತ್ ಪ್ರವಹಿಸಿ ಸಾವಿಗೀಡಾದ ಹಣಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ್ ಅವರ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.
ಪರಿಹಾರ: ಮೃತ ಯುವಕರ ಕುಟುಂಬದವರು ಬಡವರಾಗಿದ್ದು ಕೂಲಿ ಮಾಡಿಕೊಂಡು ಜೀವನ ನಡೆಸುವವರಾಗಿದ್ದಾರೆ. ಅವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಸೂರಣಗಿ ಗ್ರಾಮಕ್ಕೆ ಜನಸಾಗರ ಹರಿದು ಬಂದಿದೆ. ಯಶ್ ಅವರ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅಕ್ಕಪಕ್ಕದ ಗ್ರಾಮಸ್ಥರು ಯಶ್ ಅವರನ್ನು ನೋಡಲು ಆಗಮಿಸಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸಪಟ್ಟರು.
*ಹುಟ್ಟುಹಬ್ಬವೆಂದರೆ ಅಸಹ್ಯಪಡುವಂತಾಗಿದೆ*
ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ಕರೆಂಟ್ ಶಾಕ್ ಹೊಡೆದು ಮೂವರು ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಗದಗ ಸೂರಣಗಿ ಗ್ರಾಮಕ್ಕೆ ತೆರಳಿದ ಯಶ್ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ನನ್ನ ಹುಟ್ಟುಹಬ್ಬದ ದಿನ ಕಟೌಟ್ ಕಟ್ಟುವಾಗ ಮೂವರು ಅಭಿಮಾನಿಗಳು ನಿಧನರಾದ ಘಟನೆ ತೀವ್ರ ನೋವುಂಟು ಮಾಡಿದೆ. ಬ್ಯಾನರ್ ಹಾಕೋದು ಕಟೌಟ್ ಕಟ್ಟೊದು ಬೇಡ. ಇನ್ನುಂದೆ ಈ ರೀತಿ ಮಾಡಬೇಡಿ ಎಂದು ಅಭಿಮಾನಿಗಳಿಗೆ ಯಶ್ ಕಿವಿಮಾತು ಹೇಳಿದ್ದಾರೆ.
ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ. ಯಾರೂ ಈ ರೀತಿ ಮಾಡಬೇಡಿ. ಬರ್ತಡೇ ಮಾಡಬೇಡಿ ಎಂದು ಹೇಳಿದರೆ, ಬೇಸರ ಮಾಡಿಕೊಳ್ಳುತ್ತಾರೆ. ನೀವು ಬ್ಯಾನರ್, ಕಟೌಟ್ ಹಾಕುವುದನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮೇಲೆ ಪ್ರೀತಿ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಹೇಳಿದ್ದು, ಮನೆ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.


