ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಎಚ್ಚರಿಕೆ
ಸಿಂದಗಿ: ತಾಲೂಕಿನಲ್ಲಿ ೫೧ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿದ್ದಾರೆ. ಈ ರೀತಿಯಾಗಿ ಮಕ್ಕಳು ಬಳಲಬಾರದು ಎಂಬ ದೃಷ್ಠಿಯಿಂದ ಸರಕಾರ ತಾಲೂಕು ಆಸ್ಪತ್ರೆಯಲ್ಲಿ ಎನ್‌ಆರ್‌ಸಿ ಮಕ್ಕಳ ಘಟಕಗಳನ್ನು ಸ್ಥಾಪಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಹೇಳಿದರು.
ಪಟ್ಟಣಕ್ಕೆ ದಿಡೀರನೇ ವಿವಿಧ ಇಲಾಖೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ದೃಷ್ಠಿಯಿಂದ ಮಕ್ಕಳ ಪೌಷ್ಠಿಕ ಪುನಃಶ್ಚೇತನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿನ ವೈದ್ಯಾಧಿಕಾರಿ ನಿರ್ಲಕ್ಷ್ಯದಿಂದಾಗಿ ಬಂದಿತ್ತು. ಅದನ್ನು ಖುದ್ದು ನಾವಾಗಿಯೇ ತೆಗೆಯುವ ಪರಿಸ್ಥಿತಿ ಬಂದಿದೆ. ತಾಲೂಕು ಆಸ್ಪತ್ರೆಯ ನವಜಾತ ಶಿಶುವಿನ ಘಟಕದಲ್ಲಿ ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲ. ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಪತ್ಯ ಅಹಾರವು ಸರಿಯಾಗಿ ನೀಡುತ್ತಿಲ್ಲ ಎಂಬುದು ಅಲ್ಲಿನ ಬಾಣಂತಿಯರಿಗೆ ವಿಚಾರಿಸಿದಾಗ ತಿಳಿದು ಬಂದಿದೆ ಹಾಗಾಗಿ ನಾಳೆ ವಿಜಯಪುರದಲ್ಲಿ ನಡೆಯುವ ಸಭೆಗೆ ತಾಲೂಕು ವೈಧ್ಯಾದಿಕಾರಿಗಳನ್ನು ಬರಲು ತಿಳಿಸಲಾಗಿದೆ.
ಅಲ್ಪ ಸಂಖ್ಯಾತರ ವಸತಿ ಶಾಲೆಗೆ ಭೇಟಿ: ವಸತಿ ಶಾಲೆಯಲ್ಲಿ ೩೦-೪೦ ಮಕ್ಕಳು ಚರ್ಮರೋಗದ ಸಮಸ್ಯೆಯಿಂದ ಮನೆಗೆ ಹೋಗಿದ್ದಾರೆ. ಮಕ್ಕಳಿಗೆ ಚಳಿಗಾಲದಲ್ಲಿ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ೨೦೧೬ರ ಕಾಯ್ದೆಯ ಪ್ರಕಾರ ಇರಬೇಕಾದ ಮಕ್ಕಳ ಕ್ಲಬ್, ಮಕ್ಕಳ ರಚನಾ ಸಮಿತಿ, ೧೦೯೮ ಸಹಾಯವಾಣಿ ಇಂತಹ ಅನೇಕ ಮುಂಜಾಗೃತ ಕ್ರಮಗಳು ಅಳವಡಿಸಿಲ್ಲ. ಮಕ್ಕಳಿಗಾಗಿ ಸರಕಾರ ನೀಡಿದ ಬೆಡ್‌ಗಳನ್ನು ಒಂದೆಡೆಗಿಟ್ಟಿದ್ದಾರೆ. ಆದರೆ ಮಕ್ಕಳು ಮಾತ್ರ ನೆಲದ ಮೇಲೆಯೇ ಮಲಗುತ್ತಿರುವುದು ವಿಪರ್ಯಾಸ. ಒಂದೆ ಕೋಣೆಯಲ್ಲಿಯೇ ೫೦ಕ್ಕೂ ಹೆಚ್ಚು ಮಕ್ಕಳಿಗೆ ವಸತಿ ವ್ಯವಸ್ಥೆ ಮಾಡಿದ್ದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ವಿದ್ಯಾನಗರ ಸರಕಾರಿ ನಂ.೪ರ ಶಾಲೆಗೆ ಭೇಟಿ: ಇಲ್ಲಿನ ಮುಖ್ಯಗುರುಗಳು ಶ್ಯಾಟ್ಸ್ ಪ್ರಕಾರ ಮಕ್ಕಳ ಹಾಜರಾತಿ ೧೮೧ ಎಂದು ತೋರಿಸಿದ್ದಾರೆ. ದಾಖಲಾತಿ ಅನುಸಾರ ೨೨೧ ದಾಖಲಾತಿ ಇದೆ. ಇಲ್ಲಿ ಪ್ರಸ್ತುತ ವಾಸ್ಥವ ಸ್ಥಿತಿ ನೋಡಿದರೆ ಅವರು ಹೇಳುವ ಪ್ರಕಾರ ೧೧೦ ಮಕ್ಕಳ ಹಾಜರಾತಿ ಇದೆ. ಬಿಸಿ ಊಟದವರು ೧೦೦ ಎಂದು ಹೇಳುತ್ತಾರೆ. ಎಲ್ಲ ಸಂಖ್ಯೆಗಳನ್ನು ನೋಡಿದಾಗ ಶಿಕ್ಷಣ ವ್ಯವಸ್ಥೆಯಲ್ಲಿ ನೀಡುತ್ತಿರುವ ಶಿಕ್ಷಣ, ದಾಖಲಾತಿ, ದೀರ್ಘ ಗೈರು ಹಾಜರಿಯಲ್ಲಿಯೂ ಗೊಂದಲವಿದೆ. ಹಾಗಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಮುಖ್ಯಗುರುಗಳು ಜಿಲ್ಲಾಧಿಖಾರಿ ಮತ್ತು ಸಿಇಓ ಅವರು ತೆಗೆದುಕೊಳ್ಳುವ ಸಭೆಗೆ ತಾಲೂಕಿನಲ್ಲಿ ಶಾಲೆ ಬಿಟ್ಟಂತಹ ಮಕ್ಕಳ ಸಂಖ್ಯೆಯನ್ನು ತೆಗೆದುಕೊಂಡ ಹಾಜರಾಗಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜ ಜಿಗಳೂರ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ, ಕಂದಾಯ ನಿರೀಕ್ಷಕ ಆಯ್.ಎ ಮಕಾಂದಾರ, ಜಿ.ಎಸ್.ರೋಡಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

