ಯಡ್ರಾಮಿ: ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಯಡ್ರಾಮಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ರಥೋತ್ಸವ ಶುಕ್ರವಾರದಂದು ಸಾವಿರಾರು ಭಕ್ತರ ಜಯಘೋಷದ ಮದ್ಯೆ ಅದ್ದೂರಿಯಾಗಿ ನಡೆಯಿತು.
ಗುರುವಾರ ಸಾಯಂಕಾಲ ೭ಕ್ಕೆ ಪಟ್ಟಣದ ಹನುಮಾನ ಮಂದಿರದಿಂದ ದೇವಿಯನ್ನು ಬಣ್ಣದಿಂದ ಗ್ರಾಮ ದೇವತೆ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಅಲಂಕಾರಗೊಂಡ ರಥದಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿ, ರಾತ್ರಿ ೧೨.೨೦ಕ್ಕೆ ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಸುರಪೂರ ನಿಷ್ಠಿ ಕಡ್ಲೆಪ್ಪನವರ ವಿರಕ್ತಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.
ಕಳಸ ಹೊತ್ತ ಸುಮಂಗಲೆಯರು, ಹುಲಿ ವೇಷಧಾರಿ ಕುಣಿತ, ನಾಸಿಕ್ ಬ್ಯಾಂಜೊ ಪಾರ್ಟಿ, ಡೊಳ್ಳು ಕುಣಿತ, ಕುದುರೆ ಕುಣಿತ, ನಂದಿ ದ್ವಜ ಕುಣಿತ, ಬೊಂಬೆ ಮೆರವಣಿಗೆ, ಕರಡಿ ಮಜಲು, ಹಲಗೆ ಹಾಗೂ ಭಕ್ತರ ಜಯಘೋಷದೊಂದಿಗೆ ಶ್ರಿ ಗ್ರಾಮ ದೇವತೆ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಹಳೆ ಬಜಾರ್, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮೂಲಕ ಶುಕ್ರವಾರ ನಸುಕಿನ ಜಾವ ೫ ಗಂಟೆಗೆ ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ನಂತರ ಭಕ್ತರಿಂದ ದೇವಿಗೆ ಗಂಗಾಸ್ನಾನ, ಡೊಳ್ಳಿನ ವಾಲಗ ಮತ್ತು ವೀರಕಾರರಿಂದ ಹೇಳಿಕೆ ಮುಗಿದ ಬಳಿಕ ಅಲ್ಲಿಂದ ಹೊರಟ ಮೆರವಣಿಗೆ ಪಟ್ಟಣದ ನಡುಗಟ್ಟೆ ಶ್ರೀ ಲಕ್ಷ್ಮೀ ದೇವಿಯ ದೇವಸ್ಥಾನದ ಹತ್ತಿರ ಬೆಳಿಗ್ಗೆ ೭ಕ್ಕೆ ದೇವಿಯ ರಥವನ್ನು ಮಹೂರ್ತ ಮಾಡಲಾಯಿತು. ಸಾಯಂಕಾಲದವರೆಗೂ ಭಕ್ತರು ಹರಕೆ, ಪೂಜೆ, ನೈವೇಧ್ಯ ಸಮರ್ಪಿಸಿದರು. ಮತ್ತು ಅಲ್ಲಿಯೇ ವಿವಿಧ ಕಾರ್ಯಕ್ರಮಗಳು ಜರುಗಿದವು.
ಶ್ರೀ ದೇವಿಯ ರಥೋತ್ಸವದೊಂದಿಗೆ ರಾತ್ರಿಯಿಡೀ ಹರಕೆ ತೀರಿಸುವ ನೂರಾರು ಭಕ್ತರು ದೀಡ ನಮಸ್ಕಾರ ಹಾಕುತ್ತಿದ್ದರು. ದೇವಿಯ ಶಕ್ತಿಯನ್ನು ಭಕ್ತರು ಅಲ್ಲಲ್ಲಿ ಕೊಂಡಾಡುವುದು ಕಂಡುಬಂದಿತು.
ಇದಲ್ಲದೆ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನಾನುಕೂಲ ಆಗದಂತೆ ಭಕ್ತರಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ದೇವಿಯ ರಥೋತ್ಸವ ಮಾರ್ಗದಲ್ಲಿ ಪಟ್ಟಣದ ವಿರಕ್ತಮಠ, ಬಸವೇಶ್ವರ ವೃತ್ತ, ಕೇನರಾ ಬ್ಯಾಂಕ್ ಮುಂಬಾಗ, ಹಳೆ ಬಜಾರ್ ಸೇರಿದಂತೆ ವಿವಿಧೆಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯಿಡೀ ರಥೋತ್ಸವದ್ದುದ್ದಕ್ಕೂ ನಾಗಲಿಂಗೇಶ್ವರ ಕಾಲೋನಿಯ ಯುವಕರು ಸಾವಿರಾರು ಭಕ್ತರಿಗೆ ಬಿಸಿ ಬಿಸಿ ಚಹಾ ವಿತರಣೆ ಮಾಡಿದರು.
ಶುಕ್ರವಾರ ಸಾಯಂಕಾಲ ೪ ಗಂಟೆಗೆ ಮತ್ತೆ ಮೆರವಣಿಗೆ ಮೂಲಕ ಹೊರಟ ಶ್ರೀ ದೇವಿಯ ರಥೋತ್ಸವ ರಾತ್ರಿ ೮ಕ್ಕೆ ಮೂಲಸ್ಥಾನ ತಲುಪಿತು. ನಂತರ ಭಕ್ತರು ಮತ್ತು ಅರ್ಚಕರಿಂದ ದೇವಿಗೆ ಮಹಾಮಂಗಳಾರುತಿ ಜರುಗುವುದರೊಂದಿಗೆ ಶ್ರೀ ದೇವಿಯ ಜಾತ್ರೋತ್ಸವ ಮಂಗಲಗೊಂಡಿತು.


