ಅಭಿಮತ
– ಚೇತನ ಭಾರ್ಗವ, ಬೆಂಗಳೂರು

ನಮ್ಮ ಜೊತೆಗೆ ಇದ್ದು ನಮ್ಮಿಂದ ಉಪಯೋಗವನ್ನು ಪಡೆದುಕೊಂಡು ತಮ್ಮ ಕೆಲಸ ಮುಗಿದ ಮೇಲೆ ನಮ್ಮನ್ನು ಮರೆಯುವ ವ್ಯಕ್ತಿತ್ವವನ್ನು ಹೊಂದಿರುವವರೇ ಸಮಯ ಸಾಧಕರು. ಅವರಿಗೆ ಕೃತಜ್ಞತೆ ಎನ್ನುವುದು ಇರುವುದಿಲ್ಲ. ಮೇಲೆ ಏರಲು ಏಣಿಯ ಅವಶ್ಯಕತೆ ಇದೆ. ಏಣಿ ಹತ್ತಿಯಾದ ಮೇಲೆ ಏಣಿಗೂ ನಮಗೂ ಸಂಬಂಧವೇ ಇಲ್ಲ ಅನ್ನುವ ಮನಸ್ಥಿತಿ ಸಮಯ ಸಾಧಕರದ್ದಾಗಿರುತ್ತದೆ. ಅವರು ತಮ್ಮ ಲಾಭವನ್ನು ಮಾತ್ರ ನೋಡಿಕೊಳ್ಳುತ್ತಾರೆ ವಿನಹ ಅವರಿಗೆ ಸಹಾಯ ಮಾಡಿದವರ ಮೇಲೆ ಪ್ರೀತಿ ಕರುಣೆ ಇರುವುದಿಲ್ಲ.
ನಮ್ಮ ಜೀವನದಲ್ಲಿ ನಾವು ಅನೇಕ ವ್ಯಕ್ತಿತ್ವವುಳ್ಳ ಜನರನ್ನು ನೋಡುತ್ತೇವೆ. ಕೆಲವರು ನಮ್ಮನ್ನು ಪ್ರೀತಿಸುತ್ತಾರೆ, ಕೆಲವರು ತಟಸ್ಥರಾಗಿರುತ್ತಾರೆ, ಕೆಲವರು ದ್ವೇಷಿಸುತ್ತಾರೆ, ಇನ್ನೂ ಕೆಲವರು ನಮ್ಮೊಡನೆ ಒಳ್ಳೆಯ ಒಡನಾಟ ಇಟ್ಟುಕೊಂಡು ತಮಗೆ ನಮ್ಮಿಂದ ಏನು ಉಪಯೋಗವಿದೆ ಎಂದು ತಿಳಿದು ಅದಕ್ಕೆ ನಮ್ಮನ್ನು ಬಳಸಿಕೊಂಡು ಹೋಗುತ್ತಾರೆ. ಇಂತಹ ವ್ಯಕ್ತಿತ್ವ ಉಳ್ಳವರು ಸ್ನೇಹಕ್ಕಾಗಲಿ ಪ್ರೀತಿಗಾಗಲಿ ಅರ್ಹವಾದ ವ್ಯಕ್ತಿಗಳಲ್ಲ. ಇವರು ಮಹಾನ್ ಸ್ವಾರ್ಥಿಗಳಾಗಿರುತ್ತಾರೆ.
ಸಮಯ ಸಾಧಕರು ನಾವು ಉತ್ತಮ ಸ್ಥಿತಿಯಲ್ಲಿದ್ದಾಗ ನಮ್ಮೊಂದಿಗೆ ತಮ್ಮನ್ನು ಗುರುತಿಸಿಕೊಂಡು ಸ್ನೇಹಿತರಾಗಿರುತ್ತಾರೆ ಆದರೆ ನಮಗೆ ಕಷ್ಟದ ಸಮಯ ಬಂದಾಗ ಅವರು ಪರಿಚಯವೇ ಇಲ್ಲದಂತೆ ವರ್ತಿಸುತ್ತಾರೆ.
ಈ ಸಮಯ ಸಾಧಕರು ಜೇಡರ ಹುಳವಿದ್ದಂತೆ. ಈ ಜೇಡರ ಹುಳು ಸಲ್ಪ ಜಾಗ ಸಿಕ್ಕರೂ ಸಾಕು ಅಲ್ಲೇ ತನ್ನ ಬಲೆಯನ್ನು ಹೆಣೆದು ಕೊಳ್ಳುತ್ತದೆ. ಹಾಗೆಯೇ ಇವರು ಸಮಯಕ್ಕೆ ತಕ್ಕಂತೆ ಸಮಾಜಾಾಯಿಶಿ ಕೊಡುತ್ತಾ ಬಹಳ ಸಂಭಾವಿತರಂತೆ ವರ್ತಿಸುತ್ತಾರೆ. ಇಂಥವರು ತಮ್ಮ ಆಸೆ ಕನಸು ಇಷ್ಟಾರ್ಥಗಳಿಗೆ ಮಾತ್ರ ಬೆಲೆ ಕೊಡುತ್ತಾರೆ. ಬೇರೆಯವರ ಭಾವನೆ ಪ್ರೀತಿ ಸ್ನೇಹ ಔದಾರ್ಯ ಯಾವುದಕ್ಕೆ ಆಗಲಿ ಗೌರವವನ್ನು ನೀಡುವುದಿಲ್ಲ. ಅವರು ತಮ್ಮ ಗುರಿ ತಲುಪಲು ನಮ್ಮನ್ನು ಏಣಿಯಾಗಿ ಬಳಸಿಕೊಂಡು ಗುರಿ ತಲುಪಿದ ನಂತರ ಆ ಏಣಿಯನ್ನೇ ಒದೆಯುವ ಮನಸ್ಥಿತಿಯುಳ್ಳವರಾಗಿರುತ್ತಾರೆ.
ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಜನರ ಬಣ್ಣ ಇಂದಲ್ಲ ನಾಳೆ ಕಳಚಿ ಬಿದ್ದೇ ಬೀಳುತ್ತದೆ. ಮನುಷ್ಯನ ಬಾಹ್ಯ ಸೌಂದರ್ಯಕ್ಕೆ ಬಣ್ಣ ಬಣ್ಣದ ಮಾತುಗಳಿಗೆ ಮಾರು ಹೋಗಬಾರದು. ಅವನ ಆಂತರಿಕ ಸೌಂದರ್ಯಕ್ಕೆ ನಾವು ಬೆಲೆ ಕೊಡಬೇಕು. ವಿಪರ್ಯಾಸವೆಂದರೆ ಇಂದಿನ ಕಾಲದಲ್ಲಿ ಜನರು ಬೇಗ ಮರುಳಾಗುವುದೇ ಬಾಹ್ಯ ಸೌಂದರ್ಯ ಹಾಗೂ ಬಣ್ಣ ಬಣ್ಣದ ಮಾತುಗಳಿಗೆ. ವ್ಯಕ್ತಿಗಳ ನುಡಿ ನಡೆ ಮತ್ತು ನಡವಳಿಕೆಗೆ ಬೆಲೆ ಕಡಿಮೆಯಾಗುತ್ತಿದೆ. ವ್ಯಕ್ತಿಗೆ ಬೆಲೆ ಕೊಡುವ ಬದಲು ಮನುಷ್ಯನ ಒಳ್ಳೆಯ ವ್ಯಕ್ತಿತ್ವಕ್ಕೆ ಹೆಚ್ಚು ಬೆಲೆ ಕೊಡಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ.
ಯಾರು ಸಮಯ ಸಾಧಕರಾಗಿ ನಂಬಿದವರಿಗೆ ಮೋಸ ಮಾಡಿ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗಿರುತ್ತಾರೋ ಅಂಥವರ ಮೋಸಕ್ಕೆ ಕಾಲವೇ ಸರಿಯಾದ ಪಾಠವನ್ನು ಕಲಿಸುತ್ತದೆ.
ಇತಿಹಾಸದುದ್ದಕ್ಕೂ ಇಂತಹ ಸಮಯ ಸಾಧಕರ ಕಥೆಗಳು ಹೇರಳವಾಗಿ ಕಾಣಿಸುತ್ತದೆ. ಮೀರ್ ಸಾಧಕ್ ನಂತಹ ದೇಶದ್ರೋಹಿ ಸಮಯ ಸಾಧಕರಿಂದ ಸಮಸ್ತ ಬಂಗಾಳವೇ ಪ್ಲಾಸಿ ಕದನದಲ್ಲಿ ಬ್ರಿಟಿಷರ ವಶವಾಯಿತು. ಒಡೆದು ಆಳುವ ಬ್ರಿಟಿಷರ ಬುದ್ಧಿಗೆ ಭಾರತದಲ್ಲಿ ಬಹಳಷ್ಟು ಸಮಯ ಸಾಧಕರು ತಮ್ಮ ದೇಶದ್ರೋಹಿತನದಿಂದ ಬ್ರಿಟಿಷರಿಗೆ ನೆರವಾದರು. ದೇಶವು ಸುಮಾರು 200 ವರುಷಗಳ ಗುಲಾಮಿತನವನ್ನು ಅನುಭವಿಸಬೇಕಾಯಿತು.
ಸಂಬಂಧಿಕರಲ್ಲೂ ಕೂಡ ಸಮಯ ಸಾಧಕರನ್ನು ನೋಡುತ್ತೇವೆ. ಸಣ್ಣಪುಟ್ಟ ವಿಷಯಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ಚಿಕ್ಕ ವೈಮನಸ್ಸು ಇದ್ದರೆ ಸಾಕು. ಈ ಸಮಯ ಸಾಧಕರು ಇಬ್ಬರ ಹತ್ತಿರ ಒಳ್ಳೆಯ ಮನಸ್ಸಿರುವ ವ್ಯಕ್ತಿಯ ಹಾಗೆ ನಡೆದುಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಅವರಿಬ್ಬರ ವೈಮನಸು ಹೆಚ್ಚಾಗುವಂತೆ ಮಾಡುತ್ತಾರೆ. ಇವರಿಗೆ ತಾನೊಬ್ಬನೇ ಉತ್ತಮ ಎನ್ನುವ ಅಹಂ ಇರುತ್ತದೆ. ಇಂಥವರು ಎಲ್ಲರೂ ನನ್ನನ್ನೇ ಹೊಗಳಬೇಕು ತಾನು ಏನು ಒಳ್ಳೆಯ ಕೆಲಸ ಮಾಡದಿದ್ದರೂ ಒಳ್ಳೆಯ ಹೆಸರು ತನಗೆ ಬರಬೇಕು ಎಂದು ದುರಾಸೆ ಕೂಡ ಹೊಂದಿರುವವರಾಗಿರುತ್ತಾರೆ.
ಸ್ನೇಹಿತರಲ್ಲೂ ಕೂಡ ಕೆಲವರು ಸಮಯ ಸಾಧಕರು ಇರುತ್ತಾರೆ. ನಮಗೆ ಆತ್ಮೀಯ ಸ್ನೇಹಿತರಂತೆ ನಟಿಸಿ, ತಮ್ಮ ಕಾರ್ಯವನ್ನು ಸಾಧಿಸಿದ ನಂತರ ಪರಿಚಯವೇ ಇಲ್ಲದಂತೆ ವರ್ತಿಸುತ್ತಾರೆ. ಹಾಗಾಗಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಸ್ನೇಹಿತರು ಯಾರು ಬೇಕಾದರೂ ಆಗಬಹುದು ಆದರೆ ಸಮಯಕ್ಕೆ ಒದಗುವ ಆತ್ಮೀಯರು ಸಿಗುವುದು ಬಹಳ ವಿರಳ.
ಈ ವಿಶಾಲವಾದ ಪ್ರಪಂಚದಲ್ಲಿ ಎಲ್ಲಾ ರೀತಿಯ ಜನರು ಇರುತ್ತಾರೆ ನಾವು ಅವರೊಂದಿಗೆ ವ್ಯವಹರಿಸುವಾಗ ಬಹಳ ಎಚ್ಚರದಿಂದ ಇರಬೇಕು ಸಮಯ ಸಾಧಕರು ಎಂದು ಗೊತ್ತಾದ ಮೇಲೆ ಅವರನ್ನು ರಂಜಿಸದೆ ಅವರಿಂದ ದೂರವಿದ್ದರೆ ಅವರು ತಮ್ಮಿಂದ ತಾನೇ ಸರಿ ಹೋಗಬಹುದು, ಹಾಗೂ ಅವರಿಂದ ನಾವು ಮೋಸ ಹೋಗಿ ವ್ಯಥೆಗೆ ಒಳಗಾಗುವುದನ್ನು ತಪ್ಪಿಸಬಹುದು.

*~ಚೇತನ ಭಾರ್ಗವ, ಬೆಂಗಳೂರು*

