ಮುದ್ದೇಬಿಹಾಳ: ಸಿದ್ದೇಶ್ವರ ಶ್ರೀ ಗಳು ತಮ್ಮ ಜೀವನವನ್ನು ಸರಳವಾಗಿ ನಡೆಸುವ ಮೂಲಕ ಇಡೀ ಜಗತ್ತಿಗೇ ಮಾದರಿಯಾದರು ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಗಳು ಜಗತ್ತಿನ ದೊಡ್ಡ ದಾರ್ಶನಿಕರು. ಮುದ್ದೇಬಿಹಾಳದೊಂದಿಗೆ ಅವರು ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಸಾಹಿತಿ ಚಂದ್ರಶೇಖರ ಇಟಗಿ, ವಚನ ಸಾಹಿತಿ ಆರ್.ಜಿ.ಕಿತ್ತೂರ, ಉಪನ್ಯಾಸಕ ಪರಶುರಾಮ ಚೌಡಕೇರ, ಬಳಗದ ಅಧ್ಯಕ್ಷ ರವಿ ಗೂಳಿ ಮಾತನಾಡಿ, ಶ್ರೀಗಳ ಜೀವನವೇ ನಮಗೆ ಮಾದರಿ. ಅವರು ಮಾತಿಗಿಂತ ಕೃತಿ ಲೇಸೆಂದು ಬದುಕಿದವರು. ಬುದ್ಧನ ಜ್ಞಾನ, ಮಹಾತ್ಮಾ ಗಾಂಧಿಯವರ ಸರಳತೆ, ಮಾನವ ಜೀವನ ಪ್ರೀತಿ ಅಳವಡಿಸಿಕೊಂಡಿದ್ದರು. ಜನಸಾಮಾನ್ಯರ ಅರಿವಿನ ಮಿತಿಗೆ ಸಿಗದ ಶ್ರೇಷ್ಠ ಯತಿಗಳಾಗಿದ್ದರು. ಆಧ್ಯಾತ್ಮಿಕ ಸಂದೇಶದೊಂದಿಗೆ ಪ್ರಕೃತಿ, ಕಲೆ, ಸಾಹಿತ್ಯ ಕುರಿತು ಅಪಾರ ಜ್ಞಾನದ ಆಗರವಾಗಿದ್ದರು. ನಾವು ಸ್ವಲ್ಪ ದಿನ ಬದುಕಿದರೂ ಸಂತೋಷ ನೀಡುವ ಕೆಲಸ ಮಾಡಬೇಕು. ಪರಿಸರದ ಪ್ರೀತಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸೋಣ ಎಂದರು.
ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಅಶೋಕ ರೇವಡಿ, ಬಿ.ಎಸ್.ಮೇಟಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಸುರೇಶ ಕಲಾಲ, ಎಂ.ಎಸ್.ಬಾಗೇವಾಡಿ, ಅಮರೇಶ ಗೂಳಿ, ಬಿ.ಎಚ್.ಬಳಬಟ್ಟಿ, ಬಿ.ಎಂ.ಪಲ್ಲೇದ, ವೆಂಕನಗೌಡ ಪಾಟೀಲ, ರವಿ ತಡಸದ, ವಿಶ್ವನಾಥ ನಾಗಠಾಣ, ಎನ್.ಎಸ್.ಹಿರೇಮಠ, ಡಾ.ಎಸ್.ಸಿ.ಚೌಧರಿ, ಸೇರಿದಂತೆ ಹಸಿರು ತೋರಣ ಬಳಗದ ಸದಸ್ಯರು ಇದ್ದರು. ವಿಜಯ ಮಹಾಂತೇಶ ಬಂಗಾರಗುಂಡ ಸಿದ್ದೇಶ್ವರ ಶ್ರೀ ಗಳ ಕುರಿತು ಬರೆದ ಕವನ ವಾಚಿಸುವ ಮೂಲಕ ನುಡಿ ನಮನ ಸಲ್ಲಿಸಿದರು. ಡಾ.ವೀರೇಶ ಇಟಗಿ ಸ್ವಾಗತಿಸಿದರು. ಮಹಾಬಲೇಶ್ವರ ಗಡೇದ ನಿರೂಪಿಸಿದರು. ಬಳಗದ ಕಾರ್ಯದರ್ಶಿ ವೀರೇಶ ಢವಳಗಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

