ಇಂಡಿ: ಭೀಮಾ ನದಿಯ ತೀರದಲ್ಲಿರುವ ಜನಸಾಮಾನ್ಯರ ಅಭಿವೃದ್ಧಿಗಾಗಿ ಇಂಡಿ ಜಿಲ್ಲೆಯಾಗಿಸಲು ಮನವಿ ಮಾಡಿಕೊಳ್ಳಲಾಗುತ್ತಿದೆಯೇ ಹೊರತಾಗಿ ಜನರ ಮಧ್ಯದಲ್ಲಿ ಬೆಂಕಿ ಹಚ್ಚುವ ಯಾವದೇ ಕೆಲಸ ನಮ್ಮ ಶಾಸಕರು ಮಾಡುತ್ತಿಲ್ಲ ಎಂದು ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಇಂಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಕಾಮಗೊಂಡ ಹೇಳಿದರು.
ಶುಕ್ರವಾರ ಸಿಂದಗಿ ರಸ್ತೆಯ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂಡಿ ಬ್ರಿಟೀಷರ ಕಾಲದಿಂದಲೂ ಸಿಂದಗಿ ಒಳಗೊಂಡು ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿ, ಡಿವೈಎಸ್ಪಿ ಕಚೇರಿಗಳನ್ನು ಹೊಂದಿದ್ದು, ಅಲ್ಲದೇ ಚುನಾವಣೆ ಹುಟ್ಟಿದಾಗಿನಿಂದಲೂ ೨೦೦೨ ರ ವರೆಗೆ ಸಿಂದಗಿ ತಾಲ್ಲೂಕಿನ ೪೨ ಗ್ರಾಮಗಳು ಇಂಡಿ ಮತಕ್ಷೇತ್ರದಲ್ಲಿಯೇ ಇದ್ದು, ಅವುಗಳಿಗೆ ಯಾವದೇ ತಾರತಮ್ಯ ಮಾಡದೇ ಆಡಳಿತ ನಡೆಸಲಾಗಿದೆ. ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ಜನ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದಾರೆ. ಇವೆರಡೂ ತಾಲ್ಲೂಕುಗಳ ಮಧ್ಯದಲ್ಲಿ ಆಡಳಿತದ ದೃಷ್ಠಿಯಿಂದ ಯಾವದೇ ಭಿನ್ನಾಭಿಪ್ರಾಯ ಬಂದಿಲ್ಲ.
ಇಂಡಿ ಶಾಸಕರು ವಿಧಾನ ಸಭೆಯ ಪೂರ್ವದಲ್ಲಿಯೇ ಈ ಭಾಗದ ಅಭಿವೃದ್ಧಿಯ ಕನಸನ್ನು ಹೊತ್ತು ಇಂಡಿ ಜಿಲ್ಲೆ ಮಾಡಬೇಕೆಂದು ಮತ್ತು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಸಂವಿಧಾನದ ೩೭೧ (ಜೆ) ಅಡಿಯಲ್ಲಿ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ನಾಡಿನ ಮಠಾಧೀಶರು ಕಳೆದ ನಾಲ್ಕಾರು ವರ್ಷಗಳ ಹಿಂದೆಯೇ ಇಂಡಿ ಜಿಲ್ಲೆಯನ್ನಾಗಿ ಮಾಡಿ, ಈ ಭಾಗವನ್ನು ಅಭಿವೃದ್ಧಿ ಮಾಡಿ ಎಂದು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಇದೀಗ ಜಿಲ್ಲೆಯ ಜನಪ್ರತಿನಿಧಿಗಳ, ಮಠಾಧೀಶರ ಒತ್ತಡದ ಮೇರೆಗೆ ಮುಖ್ಯಮಂತ್ರಿಗಳು ಜನಾಭಿಪ್ರಾಯ ಸಂಗ್ರಹಣೆಗೆ ಸೂಚನೆ ನೀಡಿದ್ದಾರೆ. ಅವರ ಸೂಚನೆಯ ಮೇರೆಗೆ ತಾಲ್ಲೂಕು ಆಡಳಿತ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆಯೇ ಹೊರತಾಗಿ ಇದರಲ್ಲಿ ಯಾವದೇ ಭಿನ್ನಾಪ್ರಾಯವಿಲ್ಲ. ಜನಾಭಿಪ್ರಾಯ ಏನೇ ಹೇಳಿದರೂ ಅದಕ್ಕೆ ನಾವು ಸ್ವಾಗತಿಸುತ್ತೇವೆ. ಇಂಡಿ ಬದಲು ಸಿಂದಗಿ ಜಿಲ್ಲೆ ಮಾಡಿ ಎಂದು ಹೇಳಿದರೂ ಕೂಡಾ ನಮಗೆ ಮನಸ್ತಾಪವಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಾದೇಶವೇ ಅಂತಿಮ.
ಚಡಚಣ, ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಿಗೆ ಅಂಟಿಕೊಂಡು ಸುಮಾರು ೧೦೦ ಕಿಲೋಮೀಟರ ಭೀಮಾ ನದಿ ಹರಿದಿದೆ. ಬಚಾವತ್ ಆಯೋಗದ ಪ್ರಕಾರ ಭೀಮಾ ನದಿಯಲ್ಲಿ ೩೫೧ ಟಿಎಂಸಿ ನೀರು ಹರಿಯುತ್ತದೆ. ಇದರಲ್ಲಿ ೩೦೦.೬ ಟಿಎಂಸಿ ಮಹಾರಾಷ್ಟ್ರ, ೪೫.೩ ಟಿಎಂಸಿ ಕರ್ನಾಟಕ ಮತ್ತು ೫.೧ ಟಿಎಂಸಿ ಆಂದ್ರಪ್ರದೇಶ ಹಂಚಿಕೊಳ್ಳಬೇಕು. ಆದರೆ ಕರ್ನಾಟಕ ಇಲ್ಲಿಯವರೆಗೆ ಒಂದೂ ಟಿಎಂಸಿ ನೀರನ್ನು ಕೂಡಾ ಬಳಸಿಕೊಂಡಿಲ್ಲ. ಇದರಿಂದ ನಮ್ಮ ಭಾಗ ಅಭಿವೃದ್ಧಿ ಕಂಡಿಲ್ಲ. ಜಿಲ್ಲೆಯಾದರೆ ರಾಜ್ಯ ಸರಕಾರ ಜೊತೆಗೆ ನೇರ ಸಂಪರ್ಕ ಹೊಂದಿ ನೀರಿನ ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲೆಗಾಗಿ ಮನವಿ ಸಲ್ಲಿಸುತ್ತಿದ್ದೇವೆ.
ಜೆ.ಎಚ್.ಪಟೇಲರು ಮುಖ್ಯ ಮಂತ್ರಿಗಳಿದ್ದ ಕಾಲದಲ್ಲಿ ಅನೇಕ ಜಿಲ್ಲೆಗಳನ್ನು ಮಾಡಲಾಯಿತು. ಆಡಳಿತದ ದೃಷ್ಠಿಯಿಂದ ಅವರೆಲ್ಲಾ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದೀಗ ಜಿಲ್ಲೆ ಮಾಡಿದವರನ್ನು ನೆನೆಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರಕಾರವಿದ್ದ ಕಾಲದಲ್ಲಿ ಅನೇಕ ತಾಲ್ಲೂಕುಗಳನ್ನು ಒಡೆಯಲಾಯಿತು. ಸಿಂದಗಿ ತಾಲ್ಲೂಕು ಒಡೆದು ೨ ತಾಲ್ಲೂಕುಗಳು ಉದಯಗೊಂಡವು. ಆಲಮೇಲ ಮತ್ತು ದೇವರಹಿಪ್ಪರಗಿ ಭಾಗದ ಜನಸಾಮಾನ್ಯರಿಗೆ ಆಡಳಿತದ ದೃಷ್ಠಿಯಿಂದ ಅನುಕೂಲವಾಗಿದೆ. ಅದೇ ದೃಷ್ಠಿಯಿಂದ ನಾವು ಜಿಲ್ಲೆ ಕೇಳುತ್ತಿದ್ದೇವೆ ಹೊರತಾಗಿ ಇದರಲ್ಲಿ ಯಾವದೇ ವೈಮನಸ್ಸು ಇಲ್ಲ.
ವಿಜಯಪುರ ಜಿಲ್ಲೆಗೆ ಬಸವೇಶ್ವರರ ಹೆಸರಿಡಲು ಜನಾಭಿಪ್ರಾಯ ಕೇಳಲಾಗಿತ್ತು. ಅದಕ್ಕೆ ಹೆಚ್ಚಿನ ಸಂಖ್ಯೆಯ ಜನಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಸರಕಾರ ಕೈಬಿಟ್ಟಿತು. ಇಂಡಿ ಜಿಲ್ಲೆಯನ್ನಾಗಿ ಮಾಡಲು ಜನಾಭಿಪ್ರಾಯ ಕೇಳುವದರಲ್ಲಿ ಯಾವ ತಪ್ಪಿದೆ? ಜನಾಭಿಪ್ರಾಯ ಕೇಳಿದರೆ ಬೆಂಕಿ ಹಚ್ಚಿದಂತೆ ಹೇಗಾಗುತ್ತದೆ. ಬೆಂಕಿ ಹಚ್ಚಲಾಗುತ್ತದೆ ಎನ್ನುವ ಶಬ್ದವನ್ನು ಮಾಜಿ ವಿಧಾನ ಪರಿಷತ್ ಸದಸ್ಯರು ವಾಪಸ್ ಪಡೆಯಬೇಕು.
ಇಂಡಿ ಜಿಲ್ಲಾ ಕೂಗು ಪಕ್ಷಾತೀತ, ಜ್ಯಾತ್ಯಾತೀತ, ಧರ್ಮತೀತವಾಗಿದ್ದು, ಎಲ್ಲಾ ಜನಸಮುದಾಯದ ಸದಸ್ಯರು ಜಿಲ್ಲೆಯಾಗಬೇಕೆಂದು ಬೇಡಿಕೆ ಇಟ್ಟಿದ್ದಾರೆ. ದಯವಿಟ್ಟು ಯಾರೂ ಇದರಲ್ಲಿ ರಾಜಕೀಯ ತರಬೇಡಿ. ಜಿಲ್ಲೆಯಾದರೆ ಚಡಚಣ, ಇಂಡಿ, ಆಲಮೇಲ, ಸಿಂದಗಿ, ದೇವರಹಿಪ್ಪರಗಿ ತಾಲ್ಲೂಕುಗಳು ಅಭಿವೃದ್ಧಿ ಕಾಣುತ್ತವೆ ಎನ್ನುವ ಸದುದ್ದೇಶವಿದೆ. ಕಾರಣ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಒತ್ತಡ ತರಲಾಗಿದೆ. ಅವರು ನಮ್ಮ ಮನವಿಯನ್ನು ಆಧರಿಸಿ ಜನಾಭಿಪ್ರಾಯ ಕೇಳಿದ್ದಾರೆ. ಜನ ಯಾವ ನಿರ್ಣಯ ಕೊಡುತ್ತಾರೆಯೋ ಹಾಗೆ ಆಗಲಿ. ಇದರಲ್ಲಿ ಯಾವದೇ ರಾಜಕೀಯವಾಗಲಿ, ಬೆಂಕಿ ಹಚ್ಚುವ ಕೆಲಸ ಮಾಡಲು ಮುಂದಾಗಿಲ್ಲ. ಜನ ಪ್ರತಿನಿಧಿಗಳು ನಮ್ಮ ಉದ್ದೇಶ ಅರ್ಥ ಮಾಡಿಕೊಳ್ಳಬೇಕು.
ಇದು ಪ್ರಜಾಪ್ರಭುತ್ವ ಜನಾದೇಶವೇ ಅಂತಿಮ. ಜನಾದೇಶವನ್ನು ಎಲ್ಲರೂ ಗೌರವಿಸೋಣ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಡಾ. ರಮೇಶ ಪೂಜಾರಿ, ಪುರಸಭೆಯ ಸದಸ್ಯ ಸತೀಶ ಕುಂಬಾರ, ಎ.ಸಿ. ಪಾಟೀಲ, ನಿವೃತ್ತ ಪ್ರಾಚಾರ್ಯ ಎ.ಎಸ್. ಗಾಣಿಗೇರ, ಕಿರಣ ಜ್ಯೋಶಿ, ಸಂತೋಷ ಪರಿಶಣ್ಣನವರ, ಪಾಪು ಕಿತ್ತಳಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

