ಆಲಮೇಲದಲ್ಲಿ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಸಚಿವ ಶಿವಾನಂದ ಪಾಟೀಲ ಕರೆ
ವಿಜಯಪುರ: ರೈತರು ಹೊಸ ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯಿಂದ ಕೂಡಿದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅದರೊಂದಿಗೆ ಸಮಗ್ರ ಕೃಷಿ ಪದ್ಧತಿಯನ್ನು ಬಳಸಿಕೊಳ್ಳಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಆಲಮೇಲ ಪಟ್ಟಣದಲ್ಲಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಒಂದೇ ಬೆಳೆಗ ಸೀಮಿತವಾಗದೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು. ಅದರಲ್ಲಿ ಒಂದರ ಬೆಲೆ ಇಲ್ಲದಿದ್ದಲ್ಲಿ ಇನ್ನೊಂದು ಬೆಳೆಯ ಬೆಲೆ ಇರುತ್ತದೆ. ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಮಳೆ ಕಡಿಮೆ ಆದ ಸಂದರ್ಭದಲ್ಲಿ ಕೂಡ ಅದಕ್ಕೆ ಹೊಂದುಕೊಳ್ಳುವಂತಹ ಬೇಸಾಯ ಪದ್ಧತಿಗಳನ್ನು ರೈತರು ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಲಮೇಲದ ಗುರುಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಆಲಮೇಲ ದೇವರಗುಡ್ಡ ಗುರುಪೀಠದ ಒಡೆಯ ಡಾ.ಸಂದೀಪ ಜೆ.ಪಾಟೀಲ, ಅಳ್ಳೊಳ್ಳಿ ಹಿರೇಮಠದ ಶ್ರೀಶೈಲಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಭಾರತಿ ಕೋಳಾರಿ ಅಧ್ಯಕ್ಷತೆ ವಹಿಸಿದ್ದರು. ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ಉಪ ಪ್ರಧಾನ ವ್ಯವಸ್ಥಾಪಕ ಜೆ.ಬಿ.ಪಾಟೀಲ, ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ನಿವೃತ್ತ ಪಿಡಿಸಿ ಅಧಿಕಾರಿ ಆರ್.ಎಂ.ಬಣಗಾರ, ಡೆಪ್ಯೂಟಿ ಮ್ಯಾನೇಜರ್ ಎಂ.ಎಸ್.ಹತ್ತರಕಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

