ಇಂಡಿ ಜಿಲ್ಲಾ ಕೇಂದ್ರವಾಗಿಸುವ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ೧೭ ಸಂಘಟನೆಗಳ ಮನವಿ
ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕು ಕೇಂದ್ರವನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಿ, ಇಲ್ಲವಾದಲ್ಲಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸಿ ಎಂದು ತಾಲ್ಲೂಕಿನ ೧೭ ಸಂಘಟನೆಗಳು ಮನವಿ ಸಲ್ಲಿಸಿ, ಒಕ್ಕೋರಲಿನ ಅಭಿಪ್ರಾಯ ವ್ಯಕ್ತಪಡಿಸಿದವು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಅಧ್ಯಕ್ಷತೆಯಲ್ಲಿ ಜರುಗಿದ ದೇವರಹಿಪ್ಪರಗಿ ತಾಲ್ಲೂಕು ಸಾರ್ವಜನಿಕರ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯರ ಸಂಘದ ಅಧ್ಯಕ್ಷ ಆರ್.ಆರ್.ನಾಯಿಕ ಹಾಗೂ ಸದಯ್ಯನಮಠದ ವೀರಗಂಗಾಧರಶ್ರೀಗಳು ಮಾತನಾಡಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್. ಬಸವರೆಡ್ಡಿ, ತಾಲ್ಲೂಕು ರೈತ ಸಂಘದ ಅಜೀಜ್ ಯಲಗಾರ, ಜೆಡಿಎಸ್ ಪಕ್ಷದ ಸಾಯಬಣ್ಣ ಬಾಗೇವಾಡಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಶೀನಾಥ ಜಮಾದಾರ, ದಲಿತ ಸಂಘರ್ಷ ಸಮೀತಿಯ ಹುಯೋಗಿ ತಳ್ಳೋಳ್ಳಿ, ಪ್ರಕಾಶ ಗುಡಿಮನಿ, ಜಯಕರ್ನಾಟಕ ಸಂಘಟನೆಯ ರಹೆಮಾನ್ ಕಣಕಾಲ, ಶಿವಚಿದಂಬರ ಸೇವಾ ಸಮೀತಿಯ ಶ್ರೀಧರ ನಾಡಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ದೇವರಹಿಪ್ಪರಗಿ ತಾಲ್ಲೂಕನ್ನು ಯೋಜಿತ ಇಂಡಿ ಜಿಲ್ಲೆಗೆ ಸೇರಿಸುವುದು ಬೇಡ, ನಮ್ಮ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮಂದುವರೆಸಬೇಕು ಇಲ್ಲವೇ ದೇವರಹಿಪ್ಪರಗಿಯನ್ನೇ ನೂತನ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಸಿಂದಗಿ ಕ್ಷೇತ್ರದ ಮಾಜಿಶಾಸಕ ಶರಣಪ್ಪ ಸುಣಗಾರ, ತಹಶೀಲ್ದಾರ ಪ್ರಕಾಶ ಸಿಂದಗಿ, ಸರಿತಾ ನಾಯಿಕ್, ಸುಮಂಗಲಾ ಸೇಬೆನವರ ಸೇರಿದಂತೆ ತಾಲ್ಲೂಕು ಆಡಳಿತದ ಸಿಬ್ಬಂದಿ ಇದ್ದರು.

