ಸಿಂದಗಿಯಲ್ಲಿ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ | ೩೦-೪೦ ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ
– ಶೈಲಾ ಮಣೂರ
ವಿಜಯಪುರ: ಅದೊಂದು ಅಪರೂಪದ ಹೃದಯಸ್ಪರ್ಶಿ ಸಮಾರಂಭ. ೬೦-೮೦ ರ ಇಳಿ ವಯಸ್ಸಿನ ವೃದ್ದ ಗುರುವೃಂದ ೫೦ ರ ಪ್ರಾಯದ ಹೊಸ್ತಿಲಲ್ಲಿರುವ ಶಿಷ್ಯವೃಂದದ ಅಪರೂಪದ ಸಮಾಗಮ. ಸುಮಾರು ೩೦-೪೦ ವರ್ಷಗಳ ಬಳಿಕ ಇವರು ಪರಸ್ಪರ ಸಂಧಿಸುವ ಸುವರ್ಣಾವಕಾಶ ಒದಗಿಸಿದ್ದು ಈ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಡಿ.೨೩ ಶನಿವಾರ ಬೆಳಗ್ಗೆ ಎಲ್ಲ ಶಿಷ್ಯ ವೃಂದವು, ಕೂಡಿ ಕಲಿತು ಆಡಿ ನಲಿದ ’ನಮ್ಮ ಗೆಳೆಯರ ಬಳಗ’ ಸ್ಥಾಪಿಸಿ ಆ ಮೂಲಕ ತಮಗೆ ಅಕ್ಷರ ಜ್ಞಾನ ನೀಡಿದ, ಜೀವನ ಮೌಲ್ಯಗಳನ್ನು ತುಂಬಿ ತಮ್ಮ ಬದುಕು ರೂಪಿಸಿದ ಅಂದಿನ ಗುರುವೃಂದವನ್ನು ಸ್ವಾಗತಿಸಲು ಸಿಂದಗಿಯ ಆಶೀರ್ವಾದ ಕಲ್ಯಾಣ ಮಂಟಪದ ದ್ವಾರಬಾಗಿಲಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾದು ನಿಂತಿದ್ದರು. ಒಬ್ಬೊಬ್ಬರಾಗಿ ಬಂದ ಗುರುಗಳನ್ನು ಅವರು ಗೌರವ, ಅಭಿಮಾನ, ಕಾಳಜಿಯಿಂದ ಅವರ ಕೈಹಿಡಿದು ನಿಧಾನಕ್ಕೆ ಒಳಗೆ ತೆರಳುತ್ತಿದ್ದರೆ, ಗುರು ವೃಂದ ಶಿಷ್ಯರನ್ನು ಅರಿಯುವುದರಲ್ಲಿ ತಲ್ಲೀನರಾಗಿದ್ದರು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ವಿಶ್ರಾತಿಯಲ್ಲಿರುವ, ಬೇರೆ ಬೇರೆ ಊರುಗಳಲ್ಲಿ ನೆಲೆಗೊಂಡ ವಯೋವೃದ್ದ ಶಿಕ್ಷಕ, ಶಿಕ್ಷಕಿಯರು ಸಹ ತಮ್ಮ ಒಂದು ಕಾಲದ ಶಿಷ್ಯರ ಪ್ರೀತಿಯ ಒತ್ತಡಕ್ಕೆ ಮಣಿದು ತಮ್ಮ ಆರೋಗ್ಯ ಲೆಕ್ಕಿಸದೆ ಆಗಮಿಸಿದ್ದರು. ತಮ್ಮ ನೆಚ್ಚಿನ ಈ ಎಲ್ಲ ಹಿರಿಯ ಜೀವಗಳಿಗೆ ಗೆಳೆಯರ ಬಳಗವು ಹೊಸ ಜಾಕೀಟು ತೊಡಿಸಿ ಸಂಭ್ರಮಿಸಿದರು. ಇಂತಹ ಉಡುಗೆಯನ್ನೆಂದೂ ಧರಿಸದ ಕೆಲ ಶಿಕ್ಷಕ/ಶಿಕ್ಷಕಿಯರು ನಿರಾಕರಿಸಿದರೂ ಶಿಷ್ಯರ ಪ್ರೀತಿಯ ಹಟಕ್ಕೆ ಕಟ್ಟುಬಿದ್ದು ಮಣಿಯಲೇಬೇಕಾಯಿತು.
ತಮ್ಮ ಗುರುಗಳ ಯೋಗಕ್ಷೇಮವನ್ನು ವಿಚಾರಿಸಲು ಮುಗಿಬಿದ್ದ ನೂರಾರು ಶಿಷ್ಯರ ಕಾಳಜಿಗೆ, ಅವರ ಆದರಾತಿಥ್ಯಕ್ಕೆ ಆ ಹಿರಿಯ ಜೀವಗಳ ಹೃದಯ ತುಂಬಿಬಂದಿತ್ತು. ಕಣ್ಣಂಚು ಹಸಿಯಾಗಿತ್ತು. ಅವರ ಮನಸ್ಸು ೮೦-೯೦ರ ದಶಕಕ್ಕೆ ಜಾರಿ ತಮ್ಮ ಶಿಷ್ಯರೊಂದಿಗಿನ ಪ್ರಸಂಗಗಳನ್ನು ಸ್ಮೃತಿಪಟಲದ ಮೇಲೆ ತರಲು ಪ್ರಯತ್ನಿಸುತ್ತಿತ್ತು.
ಬಾಲ್ಯದಲ್ಲಿ ತಮಗೆ ಅಕ್ಷರ ಕಲಿಸುತ್ತಾ ಧೈರ್ಯ ತುಂಬಿ ಮುನ್ನಡೆಸಿದ, ತಮ್ಮೊಳಗಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸಿದ ಗುರುವೃಂದವನ್ನು ವೇದಿಕೆ ಮೇಲೆ ಕರೆದೋಯ್ದು, ಅವರ ಮೇಲೆ ಪುಷ್ಫವೃಷ್ಠಿಗೈದು ಸನ್ಮಾನಿಸಿ ಗೌರವಿಸಿ ಕಣ್ತುಂಬಿಕೊಂಡ ಎಲ್ಲ ಶಿಷ್ಯರ ಮೊಗದಲ್ಲಿ ಧನ್ಯತಾ ಭಾವ ಮೂಡಿದ್ದರೆ, ಶಿಷ್ಯರ ಪ್ರೀತಿಯ ಸುರಿಮಳೆಯಲ್ಲಿ ತೊಯ್ದು ತೊಪ್ಪೆಯಾದ ಗುರುಗಳೆಲ್ಲರ ಮೊಗದಲ್ಲಿ ಸಾರ್ಥಕತೆಯ ಭಾವ ಎದ್ದುಕಾಣುತ್ತಿತ್ತು.


