ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆರು ತಿಂಗಳಲ್ಲಿ ಬಬಲೇಶ್ವರ ಮತಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಿಗೆ ಸಿ.ಎಸ್.ಆರ್ ಅನುದಾನದಡಿ ಕ್ರೀಡಾ ಸಲಕರಣೆ ಸೌಲಭ್ಯ ಸಿಗಲಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಅವರು ರವಿವಾರ ಮುಸ್ಸಂಜೆ ಬಬಲೇಶ್ವರ ತಾಲೂಕಿನ ಮದಗುಣಕಿ ಬಳಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ. 150 ಲಕ್ಷ ವೆಚ್ಚದ ಶಿವಣ್ಣವರ ವಸ್ತಿಯಿಂದ ಕೊಡಬಾಗಿವರೆಗಿನ ರಸ್ತೆ ಕಾಮಗಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೂ. 50 ಲಕ್ಷ ವೆಚ್ಷದ ಸಿಸಿ ರಸ್ತೆಗೆ ಭೂಮಿಪೂಜೆ ಹಾಗೈ ಕೆ.ಎಸ್.ಐ.ಐ.ಡಿ.ಸಿ ಸಿ.ಎಸ್.ಆರ್ ಅನುದಾನದಲ್ಲಿ ಅಂದಾಜು ರೂ. 60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಸಿಎಸ್ಆರ್ ಅನುದಾನದಡಿ ಈಗಾಗಲೇ 100 ಸರಕಾರಿ ಶಾಲೆಗಳಿಗೆ ಕ್ರೀಡಾ ಸಲಕರಣೆ ನೀಡಲಾಗಿದೆ. ಬಾಕಿ 100 ಸರಕಾರಿ ಶಾಲೆಗಳಿಗೆ ಆರು ತಿಂಗಳೊಳಗೆ ಕ್ರೀಡಾ ಸಲಕರಣೆ ಒದಗಿಸಲಾಗುವುದು. ಅಷ್ಟೇ ಅಲ್ಲ, ಈ ಅನುದಾನದಲ್ಲಿ ಸುಂದರ ಶಾಲಾ ಕೊಠಡಿಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್, ಶೌಚಾಲಯ ನಿರ್ಮಾಣ, ಕ್ರೀಡಾ ಸಲಕರಣೆಗಳನ್ನು ಒದಗಿಸಲಾಗುತ್ತಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಹಂತಹಂತವಾಗಿ 5 ರಿಂದ 7ನೇ ತರಗತಿವರೆಗೆ ವಿಸ್ತರಿಸುವ ಯೋಜನೆಯಿದೆ. ಶಿಕ್ಷಕರೂ ಕೂಡ ವಿದ್ಯಾರ್ಥಿಗಳಿಗೆ ಒಳ್ಳೆಯ ಬೋಧನೆ ಮಾಡಬೇಕು. ಪೋಷಕರು ಲಿಂಗ ತಾರತಮ್ಯವಿಲ್ಲದೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಸಚಿವರು ತಿಳಿಸಿದರು.
ಅಂತರ್ಜಲ ಹೆಚ್ಚಿಸಲು ಕಾಲುವೆಗಳಿಂದ ಹಳ್ಳಗಳಿಗೆ ನೀರು ತುಂಬಿಸಲಾಗುತ್ತಿದೆ. ಹೈನುಗಾರಿಕೆಗೆ ಉತ್ತೇಜನ ಅಕ್ಷಯಕಲ್ಪ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಪೈಲಟ್ ಯೋಜನೆ ಉತ್ತಮ ಪಲಿತಾಂಶ ನೀಡುತ್ತಿದೆ. ರೈತರ ಆದಾಯ ದುಪ್ಪಟ್ಟು ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಕೃಷಿ ಮಾಡುವ ಯುವಕರಿಗೆ ಬೇಡಿಕೆ ಹೆಚ್ಚಾಗಲಿದೆ. ಇದಕ್ಕೆ ಪೂರಕವಾಗಿ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ, ನಾನಾ ಕಾರ್ಖಾನೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.
ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಶಾಲೆಗೆ ಭೂಮಿ ದಾನ ಮಾಡಿದ ಮಲ್ಲಪ್ಪ ಶಿವಣ್ಣವರ ಮತ್ತು ಧರೆಪ್ಪ ಶಿವಣ್ಣವರ ಸಹೋದರರನ್ನು ಸಚಿವ ಎಂ. ಬಿ. ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಮದಾಪುರ ಶ್ರೀ ಅಭಿನವ ಮುರುಗೇಂದ್ರ ಸ್ವಾಮೀಜಿ, ಮುಖಂಡರಾದ ಮುತ್ತಪ್ಪ ಶಿವಣ್ಣವರ, ಕೆ. ಎಚ್. ಮುಂಬಾರಡ್ಡಿ, ಸೋಮಶೇಖರ ಪಾಟೀಲ, ಹಣಮಂತ ಸೊನ್ನದ, ಉಮೇಶ ಮಲ್ಲಣ್ಣವರ, ಬಸವರಾಜ ಪಾಟೀಲ, ಪರಮಾನಂದ ಚಲವಾದಿ, ಬಸವರಾಜ ಬೊಮಾರ, ಹಣಮಂತ ಛಲವಾದಿ, ಎಂ. ಕೆ. ಶಿವಣ್ಣವರ, ಕಲ್ಲಪ್ಪ ಶಿವಣ್ಣವರ, ಲೋಕೋಪಯೋಗಿ ಇಲಾಖೆ ಎಇಇ ಪ್ರಮೋದಕುಮಾರ ಹಟ್ಟಿ, ಎಇ ವಿಜಯ ಹಿರೇಮಠ, ಕೆ.ಆರ್.ಐ.ಡಿ.ಎಲ್ ಎಇಇ ಪ್ರವೀಣ ಮಠಪತಿ, ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಶಿಕ್ಷಣಾಧಿಕಾರಿ ವಸಂತ ಚವ್ಹಾಣ, ಗ್ರಾಮದ ಹಿರಿಯರು, ಮಹಿಳೆಯರು ಯುವಕರು ಉಪಸ್ಥಿತರಿದ್ದರು.

