ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೇ 8ರಂದು ವಿಜಯಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ 4ನೇ ಬೃಹತ್ ರೈತ ಜಾಗೃತಿ ಸಮಾವೇಶಕ್ಕೆ ಕೊಲ್ಹಾರ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಬೇಕೆಂದು ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬಹುದಿನಗಳ ಬೇಡಿಕೆಯಾದ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಏರಿಸುವ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರ ಇದುವರೆಗೆ ಯಾವುದೇ ಕಾರ್ಯರೂಪಕ್ಕೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ಈರುಳ್ಳಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಾರರ ಸಮಸ್ಯೆಗಳು, ರೈತ ಮಕ್ಕಳ ನಿರುದ್ಯೋಗ ಸಮಸ್ಯೆಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಕೊಲ್ಹಾರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದರೂ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದರೂ, ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಕನಿಷ್ಠ ಒಂದು ಕೆಜಿ ಈರುಳ್ಳಿಗೆ ₹25 (ಕ್ವಿಂಟಲ್‌ಗೆ ₹2500) ದರ ನಿಗದಿ ಮಾಡಬೇಕೆಂದು ಅವರು ಒತ್ತಾಯಿಸಿದರು.
ಈ ಸಮಾವೇಶಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಆಗಮಿಸಲಿದ್ದು, ರೈತರ ಜ್ವಲಂತ ಸಮಸ್ಯೆಗಳು ಚರ್ಚೆಗೆ ಬರಲಿವೆ. ರಾಜ್ಯದ 31 ಜಿಲ್ಲೆಗಳಿಂದ ನಾಯಕರು ಹಾಗೂ ಸಾವಿರಾರು ರೈತರು ಭಾಗವಹಿಸುವ ನಿರೀಕ್ಷೆ ಇದೆ. ವಿಜಯಪುರ ಜಿಲ್ಲೆಯ 13 ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಮಾವೇಶ ರೈತರ ಆರ್ಥಿಕ ಬಲವರ್ಧನೆ ಹಾಗೂ ಆತ್ಮಹತ್ಯೆ ತಡೆಗಟ್ಟುವ ಉದ್ದೇಶ ಹೊಂದಿದ್ದು, ಪಕ್ಷಭೇದ ಮರೆತು ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಅವರು ಕೋರಿದರು.
ಸಮಾವೇಶದಲ್ಲಿ ಮುಗಳಖೋಡದ ಡಾ. ಮುರಘರಾಜೇಂದ್ರ ಶ್ರೀಗಳು, ಹುಕ್ಕೇರಿಯ ಚಂದ್ರಶೇಖರ ಶ್ರೀಗಳು, ಇಂಚಗೇರಿ ಮಠದ ಶಶಿಕಾಂತ ಗುರೂಜಿ ಸೇರಿದಂತೆ ಅನೇಕ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ತಾಲೂಕು ಅಧ್ಯಕ್ಷ ಸೋಮು ಬಿರಾದಾರ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಬಬಲೇಶ್ವರ ತಾಲ್ಲೂಕಾಧ್ಯಕ್ಷ ಸುರೇಶ ಕಿರಸೂರ, ರೈತ ಮುಖಂಡರಾದ ಶಶಿಕಾಂತ ಬಿರಾದಾರ, ರಮೇಶ ಬೀಳಗಿ, ಕಲ್ಲಪ್ಪ ಗಿಡ್ಡಪ್ಪಗೋಳ, ಸತ್ಯಪ್ಪ ಕುಳ್ಳೋಳ್ಳಿ, ಸುನೀಲ ಹಿರೇಮಠ, ಲಕ್ಷ್ಮೀ ಬಿರಾದಾರ, ನೀಲಾಂಬಿಕಾ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

