ಡಿ.೦೮ ರಂದು ಬೆಳಗಾವಿ ರುದ್ರಾಕ್ಷಿಮಠದ `ಸೇವಾರತ್ನ ಪ್ರಶಸ್ತಿ’ ಸ್ವೀಕರಿಸುವ ನಿಮಿತ್ಯ ವಿಶೇಷ ಲೇಖನ
– ಗುಲಾಬ್‌ಚಂದ್ ಆರ್. ಜಾಧವ*
ಶಿಕ್ಷಕರು, ಆರ್.ಬಿ.ಪಿ.ಜಿ ಹಳಕಟ್ಟಿ ಪ್ರೌಢಶಾಲೆ, ಆಲಮಟ್ಟಿ
ಕನ್ನಡದ ಕುಲಗುರುಗಳಾದ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಕುರಿತು ಡಾ.ಎನ್.ಜಗದೀಶ ಕೊಪ್ಪ ಹಾಗೂ ಪ್ರೋ.ಶಶಿಧರ ತೋಡಕರ ಅವರು ಸಂಪಾದಿಸಿ ಪ್ರಕಟಿಸಿದ ಸಮಾಜಮುಖಿ ಗ್ರಂಥದಲ್ಲಿ ಪ್ರಕಟವಾಗಿರುವಂತೆ *“ಪಟ್ಟಣಶೆಟ್ಟರಿಗೆ ಸನ್ಮಾನ ಮಾಡಿದ್ದು ಒಂದು ರೀತಿ ನನಗೆ ಸಂತೋಷ, ಮತ್ತೊಂದು ರೀತಿ ಮುಜುಗರ ಅಂದರೆ ಸನ್ಮಾನ ಮಾಡಿಸಿಕೊಳ್ಳುವ ಮನೋಭಾವ ಅವರ ಹತ್ತಿರ ಇಲ್ಲ, ನಮ್ಮ ಪಟ್ಟಣಶೆಟ್ಟರೆಂದರೇ ನನ್ನ ಇನ್ನೊಂದು ಮುಖ, ಬಹಳ ಬದ್ಧತೆಯುಳ್ಳಂಥ ಮುಖ. ನಾನೊಬ್ಬನೇ ಈ ಮಠವನ್ನು ಇಷ್ಟೆತ್ತರಕ್ಕೆ ಬೆಳೆಸಲು ಸಾಧ್ಯವಿರಲಿಲ್ಲ, ನನಗೆ ಸಾಹಿತ್ಯದ ಬಗೆಗೆ ಬಹಳ ಒಲವಿದೆ. ಪ್ರತಿ ವರ್ಷ ೨೦ ಪುಸ್ತಕಗಳನ್ನು ಪ್ರಿಂಟ್ ಮಾಡುತ್ತೇವೆ, ಅದಕ್ಕಾಗಿ ೪೦-೫೦ ದಿನ ನಿದ್ದೆಗೆಡುವಷ್ಟು ಕೆಲಸ ಮಾಡುತ್ತೇನೆ. ಆ ಪುಸ್ತಕದ ವಿಷಯದಲ್ಲಿ ಮಾತ್ರ, ಆಮೇಲೆ ಶಿವಾನುಭವ ಪುಸ್ತಕ ಪ್ರಕಟಣೆ ಮತ್ತು ಸಮಾಜದ ಒಂದು ಸಮಾಚಾರ ಇವುಗಳನ್ನು ಬಿಟ್ಟರೆ ಶಾಲೆ-ಕಾಲೇಜು ನನಗೇನೋ ನೋಡಾಕಾಗಲ್ಲ. ಇದನ್ನೆಲ್ಲ ನೋಡುವವರು ಪಟ್ಟಣಶೆಟ್ಟರು. ನಮ್ಮ ಸಂಸ್ಥೆಯಲ್ಲಿ ಸುಮಾರು ೧೦೦ ಶಾಲೆ-ಕಾಲೇಜುಗಳಿವೆ, ಅದರಲ್ಲಿ ೧೫ ಐ.ಟಿ.ಐಗಳಿವೆ, ಆ ಐಟಿಐಗಳ ಕನಸು ನನ್ನದು, ಆದರೆ ಅದನ್ನೆಲ್ಲ ಮಾಡಿದ್ದು ಪಟ್ಟಣಶೆಟ್ಟರು. ನಾನು ಮೊದಲು ಸ್ವಲ್ಪೆ ೩-೪ ಐಟಿಐ ಕಾಲೇಜು ಮಾಡಿದ್ದೆ ನಂತರ ಮುಂದುವರೆದು ಪಾಲಿಟೆಕ್ನಿಕ್, ಇಂಜೀನಿಯರಿಂಗ್, ಆಯುರ್ವೇದ ಕಾಲೇಜು ಅಷ್ಟೇ ಅಲ್ಲ ಸಿ.ಬಿ.ಎಸ್.ಸಿ ಶಾಲೆಗಳನ್ನು ತೆರೆದಿದ್ದಾರೆ. ಈ ದಿನಮಾನದಲ್ಲಿ ಶಾಲಾ-ಕಾಲೇಜು ನಡೆಸುವುದು ಒಂದು ದೊಡ್ಡ ಕಸರತ್ತೇ. ಆದರೆ ಪಟ್ಟಣಶೆಟ್ಟರು ನಂಬಿದವರಿಗೆ ಎಂದೂ ಮೋಸ ಮಾಡಿಲ್ಲ, ದ್ರೋಹ ಮಾಡಿಲ್ಲ, ಜೊತೆಗೆ ಅವರ ಬಗ್ಗೆ ಒಂದೊಂದು ಸಲ ನನಗೇ ಆಶ್ಚರ್ಯ ಆಗತ್ತೆ. ಏನು ಋಣಾನುಬಂಧನೋ ಏನೋ ಅವರ ಹಾಗೂ ನನ್ನ ಋಣಾನುಬಂಧ ಒಮ್ಮೊಮ್ಮೆ ನನಗೇ ಅಚ್ಚರಿ ಹುಟ್ಟಿಸುತ್ತದೆ. ತಾಯಿಯ ಪ್ರೀತಿ, ಗೆಳೆತನದ ನಿಷ್ಕಲ್ಮಶ ಸ್ವಭಾವ, ಹೀಗೆ ತಾಯಿಯ ಹಾಗೆ, ಗೆಳೆಯನ ಹಾಗೆ, ಮಾರ್ಗದರ್ಶಿ ಹಾಗೆ, ಶಿಷ್ಯನ ಹಾಗೆ, ಕೆಲವೊಂದು ಸಲ ಗುರುವಿನ ಹಾಗೆ ನಡೆದುಕೊಳ್ಳುತ್ತಾರೆ ಅವರು. ನಾನು ಎಲ್ಲಿಯಾದರೂ ಕಾರ್ಯಕ್ರಮಕ್ಕೆ ಹೋದರೆ ನನ್ನದೇ ಚಿಂತೆ ಅವರಿಗೆ. ಭಾಷಣದಲ್ಲಿ ಇದನ್ನೇ ಮಾತನಾಡಬೇಕು ನೋಡ್ರಿ, ಇದನ್ನೇ ಹೇಳಬೇಕು ನೋಡ್ರಿ ಅಯ್ಯೋ ಮಾರಾಯಾ, ನನ್ನ ಎಷ್ಟು ಕಾಳಜೀ ಮಾಡ್ತಿಯಾ ಮಾರಾಯಾ? ಅಂದರೆ ಅಷ್ಟು ಅಖಂಡ ಪ್ರೀತಿ ನನ್ನ ಮೇಲೆ ಅವರಿಗೆ. ಅದರಲ್ಲಿ ಏನೂ ಒಂದು ಚೂರು ವ್ಯತ್ಯಾಸವಿಲ್ಲ. ಎಲ್ಲಿಯಾದರೂ ಸ್ವಲ್ಪ ವಾದಗ್ರಸ್ತ ವಿಷಯವಿದ್ದರೆ ಇವರಿಗೆ ಜೀವದಲ್ಲಿ ಜೀವವಿರುತ್ತಿರಲಿಲ್ಲ. ಎಲ್ಲಿ ನಮ್ಮ ಗುರುಗಳು ಮಾತಿನಲ್ಲಿ ಸಿಕ್ಕೊಂಡಬಿಡ್ತಾರೋ ಏನೋ, ಎಲ್ಲಿ ನಮ್ಮ ಗುರುಗಳಿಗೆ ತೊಂದರೆ ಆಗಬಿಡ್ತದ ಏನೋ ಅಂತಾ ಭಯಾ ಅವರಿಗೆ. ಈ ಹಿನ್ನೆಲೆಯಲ್ಲಿ ಪಟ್ಟಣಶೆಟ್ಟರು ನಮ್ಮ ಮಠದ ಒಂದು ದೊಡ್ಡ ಶಕ್ತಿ. ಸ್ವತ: ಸಿದ್ಧಲಿಂಗನೇ ಶಿವಾನಂದ ಎಂಬ ಹೆಸರಿನಲ್ಲಿ ಬಂದು ಮಠದ ಬೆಳವಣಿಗೆಗೆ ತೊಡಗಿದ್ದಾನೆ ಅಂತಾ ಹೇಳಬಲ್ಲೆನು. ದಿನಕ್ಕೆ ೧೮ ತಾಸು ಮಠ ಹಾಗೂ ಶಿಕ್ಷಣ ಸಂಸ್ಥೆಗೆ ದುಡಿಯುತ್ತಾರೆ, ಇಂಥ ವ್ಯಕ್ತಿಗಳು ಬಹಳ ಅಪರೂಪ. ಯಾವುದೇ ಆಮಿಷಗಳಿಗೆ ಒಳಗಾಗದೇ ಮಠದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಕೆಲವೊಂದು ಗುಣಗಳಲ್ಲಿ ಅವರನ್ನು ಹೋಲಿಸುವವರು ಯಾರೂ ಇಲ್ಲ ಹೀಗಾಗಿ ಶೆಟ್ಟರು ಬಹಳ ಅಪರೂಪ, ಅವರದ್ದು ಸೊಕ್ಕು-ಸೆಡವಿಲ್ಲದ ವ್ಯಕ್ತಿತ್ವ..”*
ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ೨೦-೦೮-೨೦೧೮ ರಂದು ಮುಂಡರಗಿಯಲ್ಲಿ ಇಲಕಲ್ಲ ಶ್ರೀಗಳ, ಬೈಲೂರು ಶ್ರೀಗಳ, ಮಾಜಿ ಸಚಿವ ಎಸ್.ಎಸ್ ಪಾಟೀಲರ, ಅಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀ ಪಟ್ಟಣಶೆಟ್ಟರ ಸಂಮಾನ ಸಮಾರಂಭದಲ್ಲಿ ಅವರ ಕಾರ್ಯವೈಖರಿ ಕುರಿತು ನುಡಿದ ಅಭಿಮಾನದ ನುಡಿಗಳಿವು. ಶ್ರೀಗಳು ಹಾಗೂ ಪಟ್ಟಣಶೆಟ್ಟರ ನಡುವಿನ ನಾಲ್ಕು ದಶಕಗಳಿಗೂ ಹೆಚ್ಚಿನ ಒಡನಾಟ, ಸುದೀರ್ಘ ಬಾಂಧವ್ಯವನ್ನು ಸೂಚಿಸುವ ಹೃದಯಸ್ಪರ್ಶಿ ಮಾತುಗಳಾಗಿದ್ದವು, ಆ ಕಾರ್ಯಕ್ರಮ ಗುರು-ಶಿಷ್ಯರ ಅಂತ:ಕರಣದ ಭಾವತೀವ್ರತೆಗೆ ಸಾಕ್ಷಿಯಾಗಿತ್ತು.
ಕುಷ್ಟಗಿ ತಾಲೂಕಿನ ಮಾಲಗಿತ್ತಿಯ ಸಾಮಾನ್ಯ ವರ್ತಕ ಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ಬಾಲಕರಾಗಿದ್ದ ಪಟ್ಟಣಶೆಟ್ಟರಿಗೆ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವ ಅನಿವಾರ್ಯವಿತ್ತು, ಶಿಕ್ಷಣವೆಂಬ ಅಸ್ತ್ರದ ಮೊರೆಹೋದ ಅವರು ೧೯೭೨ಕ್ಕೆ ೮ನೇ ತರಗತಿಗೆ ಡಂಬಳದಲ್ಲಿನ ಜೆ.ಟಿ ಹೈಸ್ಕೂಲಿನ ವಿದ್ಯಾರ್ಥಿಯಾಗಿ ಓದಲು ಬಂದವರು.
೨ ವರ್ಷಗಳ ನಂತರ ೧೯೭೪ರಲ್ಲಿ ಅಂದಿನ ಸಿದ್ಧರಾಮ ದೇವರಾಗಿದ್ದ ತೋಂಟದ ಶ್ರೀಗಳು ಗದಗ ತೋಂಟದಾರ್ಯ ಮಠಕ್ಕೆ ಪಾದಾರ್ಪಣೆ ಮಾಡಿದಾಗ ಮಠ ಅಕ್ಷರಶ: ಶೂನ್ಯಪೀಠವೇ ಆಗಿತ್ತು. ಒಂದು ಕಾಲಕ್ಕೆ ರಾಜಸತ್ತೆಯಲ್ಲಿ ಮೆರೆದಿದ್ದ ಮಠ ತನ್ನ ವೈಭವವನ್ನೆಲ್ಲ ಕಳೆದುಕೊಂಡು ಬಡವಾಗಿತ್ತು. ಮಠದ ಆಸ್ತಿಗಳೆಲ್ಲ ಪರಭಾರೆಯಾಗಿ ಪಟ್ಟಣಶೆಟ್ಟರ ಮಾತಿನಲ್ಲೇ ಹೇಳುವುದಾದರೆ ಅಂದು ಡಂಬಳ ಮಠದಲ್ಲಿ ಕೇವಲ ಚಿಕ್ಕದೊಂದು ೨೫ ವೋಲ್ಟಿನ ಬಲ್ಬ್ ಅಷ್ಟೇ ಉಳಿದುಕೊಂಡಿತ್ತು. ಇಂಥ ಮಠವನ್ನು ಮೊದಲಿನಿಂದ ಕಟ್ಟುವ ಹೊಣೆಹೊತ್ತ ಶ್ರೀಗಳು ಪೀಠಕ್ಕೆ ಆಗಮಿಸಿದ ಕೆಲವೇ ದಿನಗಳಲ್ಲಿ ಡಂಬಳ ಬೋರ್ಡಿಂಗ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಸಂದರ್ಶಿಸಿದಾಗ, ಅಲ್ಲಿ ಶಾಲೆಗೆ ಪ್ರಥಮ ದರ್ಜೆಯೊಂದಿಗೆ ಪಾಸಾಗಿದ್ದ ಪ್ರತಿಭಾವಂತ ವಿದ್ಯಾರ್ಥಿ ಪಟ್ಟಣಶೆಟ್ಟರ ಭೇಟಿಯಾಯಿತು. ದಿವ್ಯ ತೇಜಸ್ಸುಳ್ಳ ಯುವಯತಿಗಳಾಗಿದ್ದ ಸಿದ್ಧಲಿಂಗ ಶ್ರೀಗಳನ್ನು ಮನಸಾರೆ ಗುರುಗಳೆಂದು ಒಪ್ಪಿಕೊಳ್ಳಲು ಪಟ್ಟಣಶೆಟ್ಟರಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಹೈಸ್ಕೂಲಿನಲ್ಲಿರುವಾಗ ಶ್ರೀಗಳ ಆಗಮನದ ನಂತರ ತೋಂಟದಾರ್ಯ ಮಠದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಪಟ್ಟಣಶೆಟ್ಟರು ಮುಂದೆ ಶ್ರೀಗಳ ಅಪೇಕ್ಷೆಯಂತೆ ಗದುಗಿನ ಜೆ.ಟಿ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪಡೆದುಕೊಂಡರು. ಮುಂದೆ ಮುಂಬೈ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಪ್ರವೇಶ ದೊರೆತರೂ ಅದನ್ನು ತ್ಯಜಿಸಿ ಶ್ರೀಗಳ ಒತ್ತಾಸೆಯಿಂದ ತಮ್ಮ ಕಂದಾಯ ವಿಭಾಗದ ವ್ಯಾಪ್ತಿಯಲ್ಲಿ ಇದ್ದ ಅಂದಿನ ಹೈದ್ರಾಬಾದ್ ಕರ್ನಾಟಕದ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಅರ್ಥಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದುಕೊಂಡರು.
ಕೈತುಂಬ ಹಣ ಸಿಗುವ ಪ್ರಮುಖ ಇಲಾಖೆಗಳ ಸರ್ಕಾರಿ ಉದ್ಯೋಗಗಳು ಪಟ್ಟಣಶೆಟ್ಟರನ್ನು ಅಂದು ಅರಸಿ ಬಂದರೂ ಅವುಗಳನ್ನು ತ್ಯಜಿಸಿ ತೋಂಟದ ಶ್ರೀಗಳ ಮೇಲಿನ ನಿಸ್ವಾರ್ಥ ಪ್ರೀತಿ ಹಾಗೂ ಅಂತ:ಕರಣ ಕಾರಣವಾಗಿ ಶ್ರೀಗಳ ಆಶಯದಂತೆ ಶ್ರೀಮಠದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದರು. ಇತ್ತ ಶ್ರೀಗಳಿಗೆ ತೋಂಟದಾರ್ಯ ಮಠವನ್ನು ಪ್ರಗತಿಪಥದತ್ತ ಒಯ್ಯಲು ಬಲವಾದ ಕೈಗಳ ಅವಶ್ಯಕತೆಯಿತ್ತು, ಮಠವನ್ನೇ ಮನೆಯೆಂದು ತಿಳಿದು ಮೈ-ಮನ ಮೆತ್ತಗಾಗಿಸಿ ಶ್ರಮಿಸುವ ಸಾರಥಿ ಬೇಕಿತ್ತು, ಇಂಥ ಸನ್ನಿವೇಶದಲ್ಲಿ ಪಟ್ಟಣಶೆಟ್ಟರು ಈ ಕಾರ್ಯಕ್ಕೆ ಎಲ್ಲ ರೀತಿಯಿಂದಲೂ ಹೇಳಿ ಮಾಡಿಸಿದ ವ್ಯಕ್ತಿತ್ವ ಉಳ್ಳವರಾಗಿದ್ದರು.
ಪ್ರಾರಂಭದಲ್ಲಿ ಗದುಗಿನ ಎ.ಎಸ್.ಎಸ್ ಕಾಮರ್ಸ್ ಕಾಲೇಜಿನಲ್ಲಿ ಹಾಗೂ ಜೆ.ಟಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ ಪಟ್ಟಣಶೆಟ್ಟರು ಶ್ರೀಗಳ ಆಣತಿಯಂತೆ ಶ್ರೀಮಠದ ಆಡಳಿತ ಅಧಿಕಾರಿ ಹುದ್ದೆಯೊಂದಿಗೆ ಡಂಬಳದ ತೋಂಟದಾರ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಹಾಗೂ ಮುಂದೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಅಲ್ಲದೇ ೧೯೭೬ ರಲ್ಲಿ ಆರಂಭವಾದ ಶ್ರೀಮಠದ ಅಧ್ಯಯನ ಸಂಸ್ಥೆಯ ಕರಣಿಕನಾಗಿ/ಕಾರ್ಯದರ್ಶಿಗಳಾಗಿ ದಣಿವರಿಯದ ಸೇವೆ ಸಲ್ಲಿಸಿದ ಕಾರಣ ನೂರಾರು ಪುಸ್ತಕ ಪ್ರಕಟಿಸಲು ಶ್ರೀಗಳಿಗೆ ಸಾಧ್ಯವಾಯಿತು. ಶ್ರೀಗಳ ಅಪೇಕ್ಷೆಯಂತೆ ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾಗಿ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳೆನ್ನದೇ ದುಡಿಯತೊಡಗಿದರು.
“ನಾನು ಬಂದ ಕಾರ್ಯಕ್ಕೆ ನೀವು ಬಂದೆರಯ್ಯಾ,!
ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,!
ನಾನು, ನೀವು ಬಂದ ಕಾರ್ಯಕ್ಕೆ ,
ಪ್ರಭುದೇವರು ಬಂದರಯ್ಯಾ,!
ಕಲ್ಯಾಣವೆಂಬುದು ಪ್ರಣತೆಯಾಗಿತ್ತು!”
ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿದ್ದ ತೋಂಟದಾರ್ಯ ಮಠವನ್ನು ಸಮಾಜೋಧಾರ್ಮಿಕ ನೆಲೆಗಟ್ಟಿನಲ್ಲಿ, ಬಸವತತ್ವದ ನೆರಳಿನಲ್ಲಿ ಮುನ್ನಡೆಸುವ ಉದ್ದೇಶದಿಂದ ತೋಂಟದ ಶ್ರೀಗಳು ನಾಡೇ ಬೆರಗಾಗುವಂತೆ ಕಾರ್ಯತತ್ಪರರಾಗಿದ್ದರು. ಆದರೆ ಶ್ರೀಮಠದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿತ್ತು, ಈ ವಿಷಮ ಘಳಿಗೆಯಲ್ಲಿ ಮಠವನ್ನು ಆರ್ಥಿಕವಾಗಿ ಸದೃಢವಾಗಿಸುವ ಹೊಣೆಯನ್ನು ಪೂಜ್ಯರು ಶಿವಾನಂದ ಪಟ್ಟಣಶೆಟ್ಟರ ಹೆಗಲಿಗೇರಿಸಿದರು. ಸ್ವತ: ಓರ್ವ ಅಧ್ಯಯನಶೀಲ ಅರ್ಥಶಾಸ್ತ್ರಜ್ಞರಾದ ಅವರಿಗೆ ಈ ಕಾರ್ಯವನ್ನು ನೆರವೇರಿಸಲು ಬೇಕಾದ ಜಾಣ್ಮೆ, ಕೌಶಲ, ತಾಳ್ಮೆ ಹಾಗೂ ಚತುರತೆ ಇತ್ತು.
ಗ್ರಾಮೀಣ ಭಾಗದ ಮಕ್ಕಳಿಗೆ ಕಡಿಮೆ ಫೀಯಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕೇಂಬ ತೋಂಟದ ಶ್ರೀಗಳ ಕನಸನ್ನು ಕಾರ್ಯರೂಪಕ್ಕೆ ತರಲು ಪಟ್ಟಣಶೆಟ್ಟರು ಪಣ ತೊಟ್ಟರು. ೧೯೭೬ರಲ್ಲಿ ಪೂಜ್ಯರು ಸ್ಥಾಪಿಸಿದ ತೋಂಟದಾರ್ಯ ವಿದ್ಯಾಪೀಠವೆಂಬ ಸಸಿಗೆ ನೀರೆರೆದು ಪೋಷಿಸಲು ಆರಂಭಿಸಿದ ಪಟ್ಟಣಶೆಟ್ಟರು ಗದಗ ಶಹರವನ್ನು ಕೇಂದ್ರಸ್ಥಾನವಾಗಿಟ್ಟುಕೊಂಡು ನಾಡಿನ ವಿವಿಧ ಜಿಲ್ಲೆಗಳಲ್ಲಿ ತೋಂಟದಾರ್ಯ ಮಠದ ಶಾಲಾ-ಕಾಲೇಜುಗಳನ್ನು ತೆರೆದು ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೊಸ ವ್ಯಾಖ್ಯಾನ ಬರೆದರು. ಈ ವಿದ್ಯಾಕೇಂದ್ರಗಳು ತೋಂಟದಾರ್ಯ ಮಠದ ಕೀರ್ತಿಯನ್ನೂ ಕೂಡ ನಾಡಿನ ಉದ್ದಗಲ ಪಸರಿಸಿದವು.
ಶಿಶುಮಂದಿರ, ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಆಯುರ್ವೇದ, ಸಿ.ಬಿ.ಎಸ್.ಇ, ವಸತಿ ನಿಲಯಗಳು, ಶಿಕ್ಷಣ ಮಹಾವಿದ್ಯಾಲಯಗಳನ್ನು ಒಳಗೊಂಡು ೧೦೦ಕ್ಕೂ ಹೆಚ್ಚು ವಿದ್ಯಾಕೇಂದ್ರಗಳು ತಲೆ ಎತ್ತಿ ಸಾವಿರಾರು ವಿದ್ಯಾರ್ಥಿಗಳಿಗೆ ಸುಭದ್ರ ಭವಿಷ್ಯವನ್ನು ಕಟ್ಟಿಕೊಟ್ಟವು. ಶಾಲೆ-ಕಾಲೇಜುಗಳನ್ನು ಕಟ್ಟಿ ಬೆಳೆಸುವ ಕಾರ್ಯ ಸಾಮಾನ್ಯವಾಗಿರಲಿಲ್ಲ, ಪಟ್ಟಣಶೆಟ್ಟರ ಅಪಾರ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಬಂದ ಎದೆಗಾರಿಕೆಯ ಪರಿಣಾಮವಾಗಿ ಈ ಕಾರ್ಯ ಸಾಧುವಾಯಿತು. ಇಂದು ಈ ಶಾಲಾ-ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿದ್ದಾರೆ. ೩೦೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವರು.
ಶ್ರೀಗಳು ಮಠಕ್ಕೆ ಆಗಮಿಸಿದಾಗ ಮಠದ ಅಪಾರ ಜಮೀನುಗಳು ಅನ್ಯರ ವಶದಲ್ಲಿದ್ದವು, ಕಾನೂನಾತ್ಮಕವಾಗಿ ಅವುಗಳನ್ನು ಮತ್ತೇ ಮಠಕ್ಕೆ ಮರಳಿಸುವ ನಿಟ್ಟಿನಲ್ಲಿ ಪಟ್ಟಣಶೆಟ್ಟರು ಪ್ರಾಮಾಣಿಕವಾಗಿ ಖ್ಯಾತ ವಕೀಲರಾದ ಶರಣ ಶ್ರೀ ಎಸ್.ಎಸ್.ಶೆಟ್ಟರ ಹಾಗೂ ಶ್ರೀಮಠದ ಭಕ್ತರ ಹಾಗೂ ಮ್ಯಾನೇಜರ್ ಶ್ರೀ ಅಂಗಡಿ ಮುಂತಾದವರ ಸಹಕಾರದೊಂದಿಗೆ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಿದ ಪರಿಣಾಮ ಮತ್ತೇ ತೋಂಟದಾರ್ಯ ಮಠ ತನ್ನ ಹಳೆಯ ಸಂಪದ್ಭರಿತ ವೈಭವವನ್ನು ದಕ್ಕಿಸಿಕೊಂಡಿತು.
ಕೇವಲ ಗದಗ ಜಿಲ್ಲೆ ಮಾತ್ರವಲ್ಲದೇ ನಾಡಿನ ಬೇರೆ-ಬೇರೆ ಜಿಲ್ಲೆಗಳಲ್ಲಿದ್ದ ಶ್ರೀಮಠದ ಆಸ್ತಿಗಳನ್ನು ಸಂರಕ್ಷಿಸಿ ಶ್ರೀಗಳ ಮಾರ್ಗದರ್ಶನದಲ್ಲಿ ಅವುಗಳನ್ನು ಅರ್ಥಪೂರ್ಣವಾಗಿ ವಿನಿಯೋಗಿಸಿದ ಶ್ರೇಯಸ್ಸು ಪಟ್ಟಣಶೆಟ್ಟರಿಗೆ ಸಲ್ಲುತ್ತದೆ.
ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಸಂಸ್ಥೆಯ ಏಕೈಕ ಟ್ರಸ್ಟಿಯಾಗಿ ಉಳಿದಿದ್ದ ಮಾನ್ಯ ಎಸ್.ನಿಜಲಿಂಗಪ್ಪನವರು ಸಂಸ್ಥೆಯನ್ನು ತೋಂಟದ ಶ್ರೀಗಳಿಗೆ ಒಪ್ಪಿಸುವ ಬಯಕೆ ವ್ಯಕ್ತಪಡಿಸಿದರು. ಸಂಸ್ಥೆಯ ಕುರಿತಾಗಿ ಅನೇಕ ವ್ಯಾಜ್ಯಗಳು ನ್ಯಾಯಾಲಯದಲ್ಲಿದ್ದ ಕಾರಣ ಶ್ರೀಗಳು ಇದಕ್ಕೆ ಸಮ್ಮತಿ ವ್ಯಕ್ತಪಡಿಸಲಿಲ್ಲ, ಆದರೆ ಶಿವಾನಂದ ಪಟ್ಟಣಶೆಟ್ಟರ ಮನವೊಲಿಕೆಯಿಂದ ಶ್ರೀಗಳು ಹರ್ಡೇಕರ ಮಂಜಪ್ಪನವರ ಸಂಸ್ಥೆಯನ್ನು ಪಡೆಯಲು ಅನುಮತಿ ನೀಡಿದರು. ಮುಂದೆ ಪಟ್ಟಣಶೆಟ್ಟರು ನಿಜಲಿಂಗಪ್ಪನವರ ಹಾಗೂ ಶ್ರೀಗಳ ಒಟ್ಟು ಮೊಕ್ತೆಯಾರ ಪತ್ರವನ್ನು ತಮ್ಮ ಹೆಸರಿನಲ್ಲಿ ಪಡೆದು ನ್ಯಾಯಾಲಯಗಳಲ್ಲಿ ಸಂಸ್ಥೆಯ ಮೇಲಿದ್ದ ಸುಮಾರು ೧೯ ಪ್ರಕರಣಗಳನ್ನೂ ಸರ್ವೋಚ್ಛ ನ್ಯಾಯಾಲಯದ ವರೆಗೂ ಹೋಗಿ ಇತ್ಯರ್ಥಪಡಿಸಿ ಇತಿಹಾಸ ಸೃಷ್ಠಿಸಿದರು.
ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರ ಸಮಾಧಿಯು ಆಲಮಟ್ಟಿ ಡ್ಯಾಂನಲ್ಲಿ ಮುಳುಗಿಹೋಗಿತ್ತು. ಆ ಸಮಾಧಿಯನ್ನು ಪೂಜ್ಯರ ನೇತೃತ್ವದಲ್ಲಿ ಸ್ಥಳಾಂತರಿಸಿ ಅವರ ಭವ್ಯವಾದ ಸ್ಮಾರಕ ಭವನ ನಿರ್ಮಿಸಲು ಕಾರಣರಾದರು.
ಹರ್ಡೇಕರ್ ಮಂಜಪ್ಪನವರ ಸಂಸ್ಥೆಗೆ ಶ್ರೀಗಳ ಪ್ರಭಾವವನ್ನು ಉಪಯೋಗಿಸಿಕೊಂಡು ವಿಶಾಲವಾದ ಜಾಗೆಯನ್ನು ಪಡೆದು ಅದಕ್ಕೆ ಸುಸಜ್ಜಿತವಾದ ಕಂಪೌಂಡ್-ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮಾರಕ ಭವನ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು, ಐ.ಟಿ.ಐ, ಡಿ.ಇಡಿ ಮುಂತಾದ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಅಲ್ಲಿ ಪ್ರಾರಂಭಿಸಿದರು.
ತಮ್ಮೆಲ್ಲ ಕಾರ್ಯ ಒತ್ತಡಗಳ ನಡುವೆಯೂ ಡಂಬಳದ ತೋಂಟದಾರ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಿವೃತ್ತಿಯವರೆಗೂ ಅರ್ಥಶಾಸ್ತ್ರ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಪಟ್ಟಣಶೆಟ್ಟರು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ `ಅರ್ಥಶಾಸ್ತ್ರ’ ಎಂಬ ಜನಪ್ರಿಯ ಪುಸ್ತಕವನ್ನು ಸಹ ಬರೆದು ಪ್ರಕಟಿಸಿ ರಾಜ್ಯದ ಅರ್ಥಶಾಸ್ತ್ರ ವಿಷಯ ಓದುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದರು. ಇದಿಷ್ಟೇ ಅಲ್ಲದೇ ತೋಂಟದ ಶ್ರೀಗಳ ಕುರಿತು ಅವರ ಜೀವಿತ ಅವಧಿಯಲ್ಲಿ `ಕೋಮುಸೌಹಾರ್ದತೆಯ ಹರಿಕಾರರು’ ಎಂಬ ಶ್ರೀಗಳ ಅಧಿಕೃತ ಜೀವನ ಚರಿತ್ರೆಯನ್ನೊಳಗೊಂಡ ಪುಸ್ತಕ ಹಾಗೂ `ಎಡೆಯೂರು ಸತ್ಯಕಥನ’ ಎಂಬ ಪುಸ್ತಕಗಳನ್ನು ಬರೆದು ಪ್ರಕಟಿಸಿದ ಕೀರ್ತಿ ಪಟ್ಟಣಶೆಟ್ಟರಿಗೆ ಸಲ್ಲುತ್ತದೆ.
ಡಂಬಳ ಕಾಲೇಜಿನಿಂದ ನಿವೃತ್ತಿಯಾದ ನಂತರವೂ ಶ್ರೀಮಠದ ಕಾರ್ಯಚಟುವಟಿಕೆಗಳಲ್ಲಿ ದಣಿವರಿಯದೇ ಪಾಲ್ಗೊಳ್ಳುವ ಪಟ್ಟಣಶೆಟ್ಟರು, ಬಸವಣ್ಣನವರ ಕಾಯಕನಿಷ್ಠೆಗೆ ನಿದರ್ಶನ. ಶ್ರೀಮಠದ ಪ್ರಗತಿಯಲ್ಲಿ ತಮ್ಮ ಪಾತ್ರ ಎಷ್ಟೇ ಇದ್ದರೂ ಸಕಲವೂ ಸಿದ್ಧಲಿಂಗೇಶ್ವರರ ಹಾಗೂ ಸಿದ್ಧಲಿಂಗ ಮಹಾಸ್ವಾಮಿಗಳ ಕೃಪೆ ಎನ್ನುವ ನಿಸ್ಪೃಹ ವ್ಯಕ್ತಿತ್ವ ಇವರದ್ದು.
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ
ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲಿಲದಿದ್ದಡೆ
ಬೇಡಿತ್ತನೀವನು ಕೂಡಲಸಂಗಮದೇವ
ಎಂಬ ವಚನದಂತೆ ಎಲ್ಲಿಯೂ ಕೂಡ ಆತ್ಮಪ್ರಶಂಸೆ ಮಾಡಿಕೊಳ್ಳದ, ಪ್ರಚಾರ-ಪ್ರಶಂಸೆ ಬಯಸದ ನಿಸ್ವಾರ್ಥಿಗಳಿವರು. ಕೇವಲ ಮಠ ಮಾತ್ರವಲ್ಲದೇ ಸಮಾಜದ ಅನೇಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಇವರು ಜನಾನುರಾಗಿಗಳು.
ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾಗಿ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾಗಿ, ಹಂಪಿ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯರಾಗಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಸಮಿತಿಯ ವ್ಯವಸ್ಥಾಪಕ ಸದಸ್ಯರಾಗಿ, ಗದಗ ಜಿಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ, ಗದಗ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಜಗದ್ಗುರು ತೋಂಟದಾರ್ಯ ನೌಕರರ ಪತ್ತಿನ ಸಹಕಾರಿ ಸಂಘದ ಜಗದ್ಗುರು ತೋಂಟದಾರ್ಯ ಕ್ರೆಡಿಟ್ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಬೈಲಹೊಂಗಲ ಬ್ಯಾಂಕಿನ ಅಧ್ಯಕ್ಷರಾಗಿ, ಗದಗ ಬೀರೇಶ್ವರ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಗದಗ ಕೆ.ಎಲ್.ಇ ಸಂಸ್ಥೆಯ ಜೆ.ಟಿ ಮಹಾವಿದ್ಯಾಲಯದ ಸದಸ್ಯರಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ.
ತೋಂಟದ ಸಿದ್ಧಲಿಂಗ ಶ್ರೀಗಳ ಅಗಲಿಕೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದ ಪಟ್ಟಣಶೆಟ್ಟರಲ್ಲಿ ಇಂದಿಗೂ ಅನಾಥಭಾವ ಮಡುಗಟ್ಟಿರುವುದು ಸತ್ಯ. ಆದರೆ ಶ್ರೀಗಳ ಅನುಪಸ್ಥಿತಿಯಲ್ಲಿ ತೋಂಟದ ಸಿದ್ಧರಾಮ ಶ್ರೀಗಳ ನೇತೃತ್ವದಲ್ಲಿ ಮಠವನ್ನು ಮುನ್ನೆಡೆಸುವ ಜವಾಬ್ದಾರಿಯ ಕಾರಣದಿಂದ ದುಖ:ವನ್ನೆಲ್ಲ ಸಹಿಸಿಕೊಂಡು ಮತ್ತೇ ಕಾರ್ಯತತ್ಪರರಾಗಿದ್ದಾರೆ. ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ ಎಂಬಂತೆ ತೋಂಟದ ಸಿದ್ಧಲಿಂಗ ಶ್ರೀಗಳೊಂದಿಗೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅವರ ಮಾನಸಪುತ್ರರಾಗಿದ್ದ ಪಟ್ಟಣಶೆಟ್ಟರು ಈಗ ನಿಮ್ಮ ನೆನಹಾದಾಗಲೇ ಉದಯ, ಮರೆವಾದಾಗಲೇ ಅಸ್ತಮಾನ ಎಂಬ ಶರಣವಾಣಿಯಂತೆ ಶ್ರೀಗಳ ಹೆಸರನ್ನು ನಾಡಿನಲ್ಲಿ ಚಿರಸ್ಥಾಯಿಯಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನಿಧಿಯನ್ನು ಸ್ಥಾಪಿಸಿ ಪ್ರತಿ ವರ್ಷ ನಾಡಿನ ಶ್ರೇಷ್ಠ ಸಾಧಕರಿಗೆ ಶ್ರೀಗಳ ಹೆಸರಿನಲ್ಲಿ ೫ ಲಕ್ಷ ರೂಪಾಯಿ ಮೊತ್ತದ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡುವ ಕಾರ್ಯ ಆರಂಭಿಸಿದ್ದಾರೆ.
ಅವರಿಗೆ ಸಮಯದ ಮಿತಿ ಇಲ್ಲದೆ, ನಿದ್ದೆ-ನೀರಡಿಕೆ-ಆಹಾರದ ಸುಳಿವೂ ಇಲ್ಲದೇ ಪ್ರತಿದಿನವೂ ಕಾರ್ಯಚಟುವಟಿಕೆಗಳಲ್ಲಿ ತಲ್ಲೀನರಾಗುವುದೇ ಪವಾಡಸದೃಶ. ದಿನಕ್ಕೆ ಕನಿಷ್ಠ ನೂರು ಜನ ನೌಕರರು ಅಹವಾಲು ಹಿಡಿದು ಬಂದರೂ ಆ ಎಲ್ಲ ಆಶೋತ್ತರಗಳನ್ನು ಆಲಿಸಿ ಪರಿಹಾರ ಸೂಚಿಸುವ ಪರಿ ವಿದ್ಯಾಪೀಠದ ನೌಕರರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅಚ್ಚರಿಯೂ ಹೌದು, ಮಾದರಿಯೂ ಹೌದು. ಕಾಯಕವನ್ನೇ ಸೇವೆಯೆಂದು ಉಸಿರಾಡುವ ಪಟ್ಟಣಶೆಟ್ಟರು ನಾಗನೂರು ಮಠದ ಲಿಂ.ಶಿವಬಸವ ಮಹಾಸ್ವಾಮಿಗಳ ಅಭಿಮಾನಿಗಳಾಗಿ ಬೆಳಗಾವಿ ರುದ್ರಾಕ್ಷಿಮಠದ ೨೦೨೩ನೇ ಸಾಲಿನ `ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಿ.೦೮-೧೨-೨೦೨೩ ರಂದು ಬೆಳಗಾವಿ ಮಠದಲ್ಲಿ ಜರುಗುವ ಪರಮ ಪೂಜ್ಯ ಶಿವಬಸವ ಮಹಾಸ್ವಾಮಿಗಳ ಜಯಂತಿ ಮಹೋತ್ಸವದಲ್ಲಿ ಶ್ರೀಯುತರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ತೋಂಟದಾರ್ಯ ವಿದ್ಯಾಪೀಠದ ಸಮಸ್ತ ನೌಕರರಿಗೆ, ಪಟ್ಟಣಶೆಟ್ಟರ ಅಭಿಮಾನಿಗಳಿಗೆ, ವಿದ್ಯಾರ್ಥಿ ಸಮೂಹಕ್ಕೆ ಸ್ನೇಹಿತರಿಗೆ ಹಾಗೂ ಕುಟುಂಬವರ್ಗಕ್ಕೆ ಸಂತಸ ಉಂಟಾಗಿದೆ.

*– ಗುಲಾಬ್‌ಚಂದ್ ಆರ್. ಜಾಧವ*
ಶಿಕ್ಷಕರು, ಆರ್.ಬಿ.ಪಿ.ಜಿ ಹಳಕಟ್ಟಿ ಪ್ರೌಢಶಾಲೆ, ಆಲಮಟ್ಟಿ

