ಮುದ್ದೇಬಿಹಾಳ: ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳನ್ನುಇಲಾಖೆ ವೇತನಾನುದಾನಕ್ಕೆ ಒಳಪಡಿಸಲು ಪೂರ್ವಭಾವಿ ಪರಿವೀಕ್ಷಣೆ ಕೈಗೊಂಡಿದ್ದರೂ ಸರ್ಕಾರ ವೇತನಾನುದಾನ ನೀಡಲು ಮೀನಾಮೇಷ ಎಣಿಸುತ್ತಿರುವುದು ಖಂಡನೀಯವಾಗಿದೆ. ಈ ಕುರಿತು ಡಿ೬ ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿದ್ದು ರಾಜ್ಯದ ಎಲ್ಲ ಖಾಸಗಿ ಐಟಿಐಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ನೌಕರರು ಭಾಗಿಯಾಗುವಂತೆ ಕರ್ನಾಟಕ ರಾಜ್ಯ ಖಾಸಗಿ ಐಟಿಐಗಳ ಸಂಘದ ರಾಜ್ಯಾಧ್ಯಕ್ಷ ಎಸ್.ಎಂ.ನೆರಬೆಂಚಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಐಟಿಐ ತರಬೇತಿಗೆ ಬಡವರ್ಗದ ಮಕ್ಕಳು ಬರುವುದರಿಂದ ಅವರಿಂದ ಬರುವಂಥ ಶುಲ್ಕಗಳಿಂದ ಸಿಬ್ಬಂದಿಗೆ ಸರ್ಕಾರ ನಿಗದಿಪಡಿಸಿದ ಸೂಕ್ತ ಗೌರವಧನ ಕೊಡಲು ಸಹ ಆಗುವುದಿಲ್ಲ. ಹಾಗಾಗಿ ಸರ್ಕಾರದ ಸಹಾಯಾನುದಾನದ ಅಗತ್ಯವಿದೆ. ಇದನ್ನು ಮನಗಂಡು ಹಿಂದಿನ ಸರ್ಕಾರಗಳು ೧೯೯೭ರಲ್ಲಿಯೇ ವೇತನ ಅನುದಾನ ಸಂಹಿತೆ ಜಾರಿಗೆ ತಂದಿದ್ದು ಅದರಂತೆ ೭ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಐಟಿಐಗಳಿಗೆ ವೇತನಾನುದಾನ ಕೊಡುತ್ತ ಬಂದಿವೆ. ಈಗಾಗಲೇ ರಾಜ್ಯದಲ್ಲಿ ೧೯೨ ಅನುದಾನಿತ ಐಟಿಐಗಳಿವೆ. ಆದರೆ ೨೦೧೦ರಲ್ಲಿ ಅಂದಿನ ಸರ್ಕಾರ ವೇತನಾನುದಾನ ಸಂಹಿತೆ ಹಿಂಪಡೆದು ವಿದ್ಯಾರ್ಥಿ ಕೇಂದ್ರಿತ ಅನುದಾನಕ್ಕೆ ಆದೇಶಿಸಿ ಖಾಸಗಿ ಐಟಿಐ ಸಂಸ್ಥೆಗಳಿಗೆ ಅನ್ಯಾಯ ಮಾಡಿದೆ. ಆದರೆ ಇದರಲ್ಲಿ ಶ್ರೇಣಿಕೃತ ವೇತನ, ಸೇವಾಭದ್ರತೆ ಇಲ್ಲದೇ ಇರುವುದರಿಂದ ರಾಜ್ಯದ ಎಲ್ಲ ಖಾಸಗಿ ಐಟಿಐಗಳು ಇದನ್ನು ತಿರಸ್ಕರಿಸಿವೆ. ಹಾಗಾಗಿ ಸರ್ಕಾರ ಇನ್ನಾದರೂ ವಿದ್ಯಾರ್ಥಿ ಕೇಂದ್ರಿತ ಅನುದಾನ ಸಂಹಿತೆ ರದ್ದುಪಡಿಸಿ ಈ ಹಿಂದಿನ ವೇತನಾನುದಾನ ಸಂಹಿತೆಯನ್ನು ಮರು ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು ಖಾಸಗಿ ಐಟಿಐ ನ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಪ್ರತಿಯೊಬ್ಬರೂ ಭಾಗಿಯಾಗುವಂತೆ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
