ವಿಜಯೇಂದ್ರ ನೇಮಕಕ್ಕೆ ಅಸಮಾಧಾನ | ಹೈಕಮಾಂಡ್ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ನಿರ್ಧಾರ | ಶೀಘ್ರವೇ ಬೆಂಬಲಿಗರ ಸಭೆ
ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನ ಬಿಜೆಪಿ ಹೈಕಮಾಂಡ್ ನೇಮಕ ಮಾಡಿದ್ದು, ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಪಕ್ಷ ಬಿಡಲು ವಿ ಸೋಮಣ್ಣ ಮುಂದಾಗಿದ್ದಾರೆ.
ಹೌದು, ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ನಾಯಕ ವಿ.ಸೋಮಣ್ಣ ಅವರು ಸದ್ಯವೇ ಗೋವಿಂದರಾಜನಗರ ಕ್ಷೇತ್ರದ ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ನಡೆಯನ್ನು ತೀರ್ಮಾನಿಸಲಿದ್ದಾರೆ ಎಂದು ಹೇಳಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡ ವಿ ಸೋಮಣ್ಣ ಅವರು, ನಮ್ಮ ಪಕ್ಷದವರೇ ನನ್ನ ಸೋಲಿಸಲು ಕೆಲಸ ಮಾಡಿದ್ದಾರೆ ಎಂದು ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿದ್ರು, ಇದೀಗ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿರುವುದು ಇನ್ನಷ್ಟು ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಬಿಜೆಪಿ ಕೆಲ ನಾಯಕರೊಂದಿಗೆ ಮುನಿಸಿಕೊಂಡಿರುವ ವಿ ಸೋಮಣ್ಣ ಬಿಜೆಪಿ ಹೈಕಮಾಂಡ್ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇನ್ನೂ ಕಾಂಗ್ರೆಸ್ ಸೇರ್ಪಡೆ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಸದ್ಯದಲ್ಲೇ ಗೋವಿಂದರಾಜನಗರ ಕ್ಷೇತ್ರದ ತಮ್ಮ ಬೆಂಬಲಿಗರ ಜೊತೆ ಸಭೆ ಕರೆದು ಮುಂದಿನ ನಡೆಯನ್ನು ಮಾಜಿ ಸಚಿವ ವಿ ಸೋಮಣ್ಣ ಅವರು ತೀರ್ಮಾನಿಸಲಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೂ ಮುನ್ನ ಡಿಸೆಂಬರ್ 6ರಂದು ತುಮಕೂರಿನಲ್ಲಿ ರಾಜಕೀಯ ಶಕ್ತಿ ಪ್ರದರ್ಶನ ಮಾಡಿ ಹೈಕಮಾಂಡ್ ಗೆ ಸಂದೇಶ ರವಾನಿಸಲು ವಿ ಸೋಮಣ್ಣ ಸಜ್ಜಾಗಿದ್ದಾರೆ ಎನ್ನಲಾಗಿದೆ.