ಸುಮಾರು 150 ವರ್ಷಗಳ ಹಿಂದಿನ ಮಾತಿದು. ಇಂದಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೇರಿಯ ಮಠದ ಆ ಗುರುಗಳು ಅತ್ಯಂತ ಮಹಿಮಾಾನ್ವಿತರು. ಅವರನ್ನು ಗಡ್ಡದ ಅಜ್ಜ ಎಂದೇ ಜನರು ಕರೆಯುತ್ತಿದ್ದರು. ಕುದುರೆಯ ಮೇಲೆ ಹಳ್ಳವನ್ನು ದಾಟಿದ ಅವರಿಗೆ
ಬಸರಿಗಿಡದ ವೀರಪ್ಪ ಎಂಬ ಮಹಾನ್ ವ್ಯಕ್ತಿ ನಮ್ಮ ತಲೆಯ ಮೇಲಿನ ಟೋಪ್ಪಿಗೆಯನ್ನು ಕಾಣಿಕೆಯಾಗಿ ನೀಡಿ ಭವದ ನಿಜವಾದ ವಿರಕ್ತ ಸ್ವಾಮಿ ಎಂದು ಕರೆದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಪ್ರಸಾರಕ್ಕಾಗಿ ಕಾರ್ಯನಿರ್ವಹಿಸಿದ್ದ ಸ್ವಾಮಿಗಳು ಭಕ್ತರ ಮನದಲ್ಲಿ ವಿಶೇಷ ಸ್ಥಾನ ಗಳಿಸಿದ್ದರು.
ಆ ಹಾಲಕೇರಿ ಊರಿನ ಗೌಡರ ಮನೆತನದ ಸೊಸೆ ಫಣಿಯಮ್ಮ ತಾನು ಮದುವೆಯಾಗಿ ಹಾಲಕೇರಿಗೆ ಬಂದಾಗಿನಿಂದಲೂ ಪ್ರತಿದಿನ ನಿತ್ಯವಿಧಿಗಳನ್ನು ಪೂರೈಸಿ ಸ್ನಾನ ಪೂಜೆಗಳನ್ನು ನೆರವೇರಿಸಿ ಮಠಕ್ಕೆ ಬಂದು ಗದ್ದುಗೆಗೆ ನಮಸ್ಕರಿಸಿ ನಂತರ ಗಡ್ಡದ ಅಜ್ಜ ಎಂದು ಕರೆಯಲ್ಪಡುವ ಗುರುಗಳ ಪಾದೋದಕ ಪ್ರಸಾದವನ್ನು ಸೇವಿಸಿಯೇ ಆಹಾರ ಸೇವಿಸುವ ಕ್ರಮವನ್ನು ಪಾಲಿಸುತ್ತಿದ್ದಳು. ದಶಕಗಳ ಕಾಲ ಇದು ಹೀಗೆಯೇ ನಡೆದಿತ್ತು.
ಒಂದು ದಿನ ಎಂದಿನಂತೆ ಗದ್ದುಗೆಯ ದರ್ಶನ ಮಾಡಿ ನಮಸ್ಕರಿಸಿ ಅಜ್ಜನವರ ಪಾದೋದಕ ಪ್ರಸಾದಕ್ಕಾಗಿ ಕಲ್ಮಠಕ್ಕೆ ಬಂದಳು ವೃದ್ಧ ಫಣಿಯಮ್ಮ. ಆದರೆ ಲಿಂಗ ಪೂಜಾನುಷ್ಠರಾಗಿ ಧ್ಯಾನಮಗ್ನರಾದ ಗಡ್ಡದ ಅಜ್ಜನವರು ಹೊರಗೆ ಬರಲೇ ಇಲ್ಲ. ಅದೆಷ್ಟೇ ಹೊತ್ತಾದರೂ ಪಣಿಯಮ್ಮ ಅಜ್ಜಿ ಮನೆಗೆ ಬಾರದೆ ಹೋದದ್ದನ್ನು ಕಂಡು ಮನೆಯ ಜನರೆಲ್ಲ ಆಕೆಯನ್ನು ಕರೆಯಲು ಬಂದರು. ಆದರೆ ಚಾಚು ತಪ್ಪದೇ ತನ್ನ ನಿಯಮವನ್ನು ಪಾಲಿಸುತ್ತಿದ್ದ ಫಣಿಯಮ್ಮ ಅಜ್ಜನವರ ಪಾದೋದಕ ಪ್ರಸಾದವಿಲ್ಲದೆ ಮನೆಗೆ ಮರಳಲು ನಿರಾಕರಿಸಿ ಕಲ್ಮಠದ ತಲೆ ಬಾಗಿಲಿನಲ್ಲಿ ಕುಳಿತುಬಿಟ್ಟಳು. ದಿನಗಳು ಕಳೆದವು. ಪಣಿಯಮ್ಮ ಆಹಾರ ನೀರು ಸೇವಿಸದೆ ಕುಳಿತಲ್ಲಿಯೇ ಕುಳಿತಳು. ಗುರುಗಳು ಪೂಜಾ ಮಗ್ನರಾಗಿ ಕುಳಿತಾಗ ಅವರ ಕೋಣೆಯೊಳಗೆ ಯಾರೂ ಅತಿಕ್ರಮ ಪ್ರವೇಶ ಮಾಡುವುದಿಲ್ಲ ಎಂಬ ನಿಯಮವಿರುತ್ತದೆ. ಆದರೆ ಫಣಿಯಮ್ಮನ ನಿತ್ರಾಣ ಸ್ಥಿತಿಯನ್ನು ಕಂಡು ಅಜ್ಜಾವರನ್ನು ಧ್ಯಾನ ಸ್ಥಿತಿಯಿಂದ ಎಬ್ಬಿಸಲು ಬಾಗಿಲಿನ ಅಗಳಿಯನ್ನು ಹಲವಾರು ಬಾರಿ ಬಾರಿಸಿದರು. ಪ್ರಯೋಜನವೇನೂ ಆಗಲಿಲ್ಲ.
ಕೊನೆಗೆ ಊರಿನ ಜನರೆಲ್ಲ ಸೇರಿ ಭಜನೆ, ಗಾಯನ ಮಾಡಲು ಪ್ರಾರಂಭಿಸಿದರು. ಹಾರ್ಮೋನಿಯಂ, ತಬಲಾ ಗಳ ಸದ್ದು, ಹಾಡುಗಳ ಗೌಜಿ ಯಾವುದೂ ಗುರುಗಳ ಕಿವಿಗೆ ತಟ್ಟಲೆ ಇಲ್ಲ.ಹೀಗೆಯೇ ಸುಮಾರು 18 ದಿನ ಕಳೆಯಿತು.
ಒಳಗೆ ಪೂಜಾ ನಿರತರಾಗಿದ್ದ ಗುರುಗಳಿಗೆ ಲಿಂಗಧಾರಿ ಶಿವನು ಮಾತನಾಡಿಸಿದಂತೆ “ನೀನು ನನ್ನ ಧ್ಯಾನದಲ್ಲಿ ಕುಳಿತಿರುವೆ, ಆದರೆ ಮಠದ ಹೊರ ಭಾಗದಲ್ಲಿ ನಿನ್ನ ಧ್ಯಾನದಲ್ಲಿ ಕುಳಿತ ಆ ಮಹಾಸಾದ್ವಿ ಹೆಣ್ಣು ಮಗಳಿಗೆ ದರ್ಶನ ನೀಡು” ಎಂದಂತೆ ಭಾಸವಾಗಿ ಧ್ಯಾನದಿಂದ ಬಹಿರ್ಮುಖರಾಗಿ ಎಚ್ಚೆತ್ತರು. ಕೋಣೆಯಿಂದ ಹೊರಬಂದು ಈಗಾಗಲೇ ಬಳಕೆಯಿಂದ ನಿತ್ರಾಣಳಾಗಿದ್ದ ಫಣಿಯಮ್ಮನಿಗೆ ಪಾದೋದಕ ಪ್ರಸಾದವನ್ನು ನೀಡಿದರು.
ಆಕೆಯ ಭಕ್ತಿಯನ್ನು ಮೆಚ್ಚಿ ಏನನ್ನಾದರೂ ಕೇಳಿಕೊಳ್ಳಲು ಹೇಳಿದರು. ಚೇತರಿಸಿಕೊಂಡ ಅಜ್ಜಿ “ಯಪ್ಪಾ, ಕೊಡಾಕ ನೀ ಯಾರು?? ತೋಗೊಳ್ಳಾಕ ನಾ ಯಾರು?? ಆದ್ರ ಕೊಟ್ಟ ಮಾತನ್ನು ತಪ್ಪದೇ ನಡೆಸುವ ಮಾತು ಕೊಡುವುದಾದರೆ ಮಾತ್ರ ತನ್ನ ಕೋರಿಕೆಯನ್ನು ಹೇಳುವೆ” ಎಂದಳು. ಇದಕ್ಕೆ ಒಪ್ಪಿದ ಗುರುಗಳು ಅದೆಷ್ಟೇ ತೊಂದರೆಗಳು ಬಂದರೂ ಆಕೆಗೆ ಕೊಟ್ಟ ಮಾತನ್ನು ಈಡೇರಿಸುವೆ ಎಂದು ಭರವಸೆ ನೀಡಿದರು. ಆಗ ಫಣಿಯಮ್ಮ ತನ್ನ ಜೀವಿತದ ಕೊನೆಯ ಗಳಿಗೆಯಲ್ಲಿ ಪಾದೋದಕ ಪ್ರಸಾದವನ್ನು ನೀಡಿ ತನ್ನನ್ನು ಈ ಲೋಕದ ಬಂಧನದಿಂದ ಬಿಡುಗಡೆಗೊಳಿಸಬೇಕು ಎಂದು ಬೇಡಿಕೊಂಡಳು. ಇದಕ್ಕೆ ಗುರುಗಳು ಅಸ್ತು ಎಂದು ಮಾತು ಕೊಟ್ಟರು.
ಮುಂದೆ ಗುರುಗಳು ಕೆಲ ವರುಷಗಳ ನಂತರ ತಮ್ಮ ಕೆಲ ಭಕ್ತರೊಂದಿಗೆ ಕಾಶಿಗೆ ಪಯಣ ಬೆಳೆಸಿದರು. ಕಾಶಿಯಿಂದ ಹಿಮಾಲಯದತ್ತ ನಡೆದ ಅವರು ಹಲವಾರು ದೇಗುಲಗಳ ದರ್ಶನ ಮಾಡಿದರು. ನಂತರ ಹಿಮಾಲಯದ ಕಡು ಚಳಿಯನ್ನು ತಡೆಯಲಾರದ ತಮ್ಮ ಭಕ್ತ ಗಣವನ್ನು ಮರಳಿ ಹಾಲಕೇರಿಗೆ ಕಳುಹಿಸಿದರು.
ಹೀಗೆಯೇ ಮೂರು ವರ್ಷ ಗತಿಸಿ ಹೋಯಿತು. ಪಯಣವನ್ನು ಮುಂದುವರಿಸಿದ ಗುರುಗಳು ಗೌರಿಶಂಕರ ಪರ್ವತದವರೆಗಿನ ಎಲ್ಲಾ ದೇಗುಲಗಳ ದರ್ಶನ ಮಾಡಿದರು. ಇನ್ನೇನು ಹಿಮಾಲಯದ ಆ ಧವಳಗಿರಿಯನ್ನು, ಕೈಲಾಸ ಪರ್ವತವನ್ನು ಸಂದರ್ಶಿಸಬೇಕು ಎಂಬ ಧಾವಂತದಲ್ಲಿರುವಾಗಲೇ ಅವರ ದಿವ್ಯದೃಷ್ಟಿಗೆ ಫಣಿಯಮ್ಮ ತನ್ನ ಕೊನೆಯ ಗಳಿಗೆಗಳನ್ನು ಎಣಿಸುತ್ತಿರುವುದು ಗೋಚರಿಸಿತು. ಜೊತೆಗೆ ತಾವು ಕೊಟ್ಟ ಮಾತು ಕೂಡ ನೆನಪಾಯಿತು. ಅಂತೆಯೇ ತಮ್ಮ ಸೇವಾ ಮರಿಯನ್ನು ಕರೆದು ಮರಳಿ ಹೊರಡಲು ತಯಾರಾದರು.
ಪಯಣ ಮುಂದುವರಿಸಿ ಬಾಗಲಕೋಟೆಯ ಗಂಜಿಹಾಳ ಗ್ರಾಮಕ್ಕೆ ಬಂದಿಳಿದ ಗುರುಗಳು ತಾವು ಮರುದಿನ ಹಾಲಕೇರಿಗೆ ಬರುವುದಾಗಿ ಸುದ್ದಿ ಕಳುಹಿಸಿದರು. ಮೂರು ವರ್ಷಗಳ ನಂತರ ಊರಿನ ದೈವ ಮರಳಿ ಊರು ಸೇರುತಿದೆ ಎಂದು ಸಂಭ್ರಮ ಸಂತಸ ಊರಿನ ಜನರಲ್ಲಿ ಮನೆ ಮಾಡಿತು. ಮನೆ ಮನೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ಹಬ್ಬದ ವಾತಾವರಣವೇ ಸೃಷ್ಟಿಯಾಯಿತು. ಹಾಲಕೇರಿಗೆ ಬಂದ ಗುರುಗಳು ಮಠಕ್ಕೆ ಹೋಗದೆ ಸೀದಾ ಫಣಿಯಮ್ಮನ ನಿವಾಸಕ್ಕೆ ಆಗಮಿಸಿದರು. ಗುರುಗಳ ಧ್ವನಿಯನ್ನು ಆಲಿಸಿದ ಕೂಡಲೇ ಈಗಾಗಲೇ ಅರೆಪ್ರಜ್ಞಾವಸ್ಥೆಯಲ್ಲಿದ್ದ ಫಣಿಯಮ್ಮ ನಿಧಾನವಾಗಿ ಕಣ್ಣು ತೆರೆದು ಗುರುಗಳನ್ನು ಕುರಿತು ಎಪ್ಪ ..
ಜಳಕ ಪೂಜಾ ಮಾಡಿ, ನನಗ ಪಾದೋದಕ ಪ್ರಸಾದವನ್ನು ನೀಡಿ ಕಳುಹಿಸಿಕೊಡು ಎಂದು ಆಗ್ರಹಿಸಿದಳು. ನಿನ್ನ ಕಳಿಸಿಕೊಡಾಕ್ ಅಂತನ ಮೂರು ತಿಂಗಳ ಪ್ರಯಾಣ ಮಾಡಿ ಬಂದೀನವ್ವ ಎಂದು ಹೇಳಿದರು. ಅಂತೆಯೇ ಗುರುಗಳು ಅವರ ಮನೆಯಲ್ಲಿಯೇ ಸ್ನಾನ ಮಾಡಿ, ಪೂಜೆ ಸಲ್ಲಿಸಿ ತಮ್ಮ ಪಾದೋದಕ ಪ್ರಸಾದವನ್ನು ಫಣಿಯಮ್ಮನಿಗೆ ನೀಡಿದಾಗ ಅದನ್ನು ಸೇವಿಸಿದ ಆಕೆ ತೃಪ್ತಿಯಿಂದ ಕಣ್ಣುಮುಚ್ಚಿದಳು. ಆಕೆಯ ಕೊನೆಯುಸಿರು ಪಂಚಭೂತಗಳಲ್ಲಿ ಲೀನವಾಯಿತು.
ಇಂದಿಗೂ ನಾವು ಹಾಲಕೇರಿಯ ಮಠದ ಆವರಣದಲ್ಲಿ ಭಕ್ತ ಫಣಿಯಮ್ಮನ ಸಮಾಧಿಯನ್ನು ನೋಡಬಹುದು. ಈ ಫಣಿಯಮ್ಮನ ವಂಶಜರು ಇಂದಿಗೂ ಹಾಲಕೇರಿಯಲ್ಲಿದ್ದಾರೆ . ಗುರು ಶಿಷ್ಯರ ಸಂಬಂಧ ತಂದೆ ಮಕ್ಕಳ ಸಂಬಂಧದಂತೆ ಅವಿನಾಭಾವವಾದದ್ದು, ಉಪಮಾತೀತವಾದದ್ದು. ಇಂದಿಗೂ ನಮ್ಮ ವಾಗ್ಮಿಗಳು, ಪ್ರವಚನಕಾರರು ತಮ್ಮ ಪ್ರವಚನಗಳಲ್ಲಿ ಅನುಪಮ ಶರಣ ಭಕ್ತ ಫಣಿಯಮ್ಮನನ್ನು ನೆನೆಯುತ್ತಾರೆ. ಹಾಲಕೇರಿ ಮಠದ ಪುರಾಣದಲ್ಲಿ ಫಣಿಯಮ್ಮನ ಭಕ್ತಿಯ ಕುರಿತ ಕಥೆಯೇ ಇದೆ. ಇಂದಿಗೂ ಜನರು ಆಕೆಗೆ ಪೂಜೆಯನ್ನು ಸಲ್ಲಿಸುತ್ತಾರೆ. ಸಂಸಾರದಲ್ಲಿ ಇದ್ದುಕೊಂಡು, ಭವದಲ್ಲಿ ಬದುಕಿ ಭಕ್ತಳಾದ ಫಣಿಯಮ್ಮನಿಗೆ ಸಾವಿರದ ಶರಣು
![IMG 20231111 065310](https://udayarashminews.com/wp-content/uploads/2023/11/IMG_20231111_065310.jpg)