ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ರಬಿನಾಳ ಗ್ರಾಮದಲ್ಲಿ ಮುಳವಾಡ ಏತ ನೀರಾವರಿ ಸಂಬಂಽಸಿದ ಕೃಷ್ಣಾ ಮೇಲ್ದಂಡೆ ಯೋಜನೆಯ ವಿತರಣಾ ನಾಲೆ ಕಾಮಗಾರಿ ಆರಂಭಿಸಿದ್ದು. ಈ ಕಾಮಗಾರಿಗೆ ಸಂಬಂಧಿಸಿದಂತೆ ಜೆಎಂಸಿ ಮಾಡಿ ಪರಿಹಾರ ನೀಡದೆ ಕಾಮಗಾರಿಯನ್ನು ಆರಂಭಿಸಬಾರದೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಶಿ ಅರವಿಂದ ಕುಲಕರ್ಣಿ, ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಬುಧವಾರ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಡಿಸ್ಟ್ರೀಬ್ಯೂಟರ್ ಹಾಗೂ ಲ್ಯಾಟರಲ್ ಕಾಲುವೆಗಳನ್ನು ನಿರ್ಮಿಸುತ್ತಿದ್ದು. ರೈತರಿಗೆ ಯಾವುದೇ ರೀತಿ ನೋಟಸ್ ಕೊಟ್ಟಿಲ್ಲ. ಜೆಎಂಸಿ ಕೂಡ ಮಾಡಿಲ್ಲ. ಯಾವುದೇ ರೈತನ ಜಮೀನಿನಲ್ಲಿ ಕಾಲುವೆ ಕಾಮಗಾರಿ ಪ್ರಾರಂಭಿಸಬೇಕಾದರೆ ಮೊದಲು ರೈತನ ಒಪ್ಪಿಗೆ ಪಡೆದು ನಂತರ ೧೧(೧) ನೋಟಿಸ್ ಕೊಡಬೇಕು. ನಂತರ ಆ ಜಮೀನಿನ ರೈತನ ಸಮಕ್ಷಮ ಜೆಎಂಸಿ ಮಾಡಬೇಕು. ಜೆಎಂಸಿ ಮಾಡಿದ ನಂತರ ರೈತರಿಗೆ ಜೆಎಂಸಿ ವರದಿ ನೀಡಬೇಕು. ನಂತರ ಪರಿಹಾರ ಕೊಡಬೇಕು. ಆಮೇಲೆ ಕಾಲುವೆ ನಿರ್ಮಾಣ ಕಾರ್ಯ ಆರಂಭಿಸಬೇಕು. ಯಾವುದೇ ನಿಯಮಗಳನ್ನು ಪಾಲಿಸದೇ ಇಲ್ಲಿ ನಿಯಮ ಬಾಹಿರವಾಗಿ ಕಾಲುವೆ ನಿರ್ಮಿಸುತ್ತಿರುವದು ಕಾನೂನು ವಿರುದ್ಧವಾಗಿದೆ. ಕೂಡಲೇ ಈ ಕಾಮಗಾರಿ ಸ್ಥಗಿತಗೊಳಿಸಬೇಕು. ಜಮೀನಿನ ಜೆಎಂಸಿ ಮಾಡಿ ವರದಿ ಕೊಡಬೇಕು. ಜೆಎಂಸಿ ವರದಿ ಕೊಡದೇ ಕಾಮಗಾರಿ ಆರಂಭಿಸಿದರೆ ಕಾಮಗಾರಿ ಸ್ಥಳದಲ್ಲಿಯೇ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದರು.
ಗುತ್ತಿಗೆದಾರ ಪ್ರವೀಣ ಮಾತನಾಡಿ, ರೈತರು ಅನುಮತಿ ನೀಡಿದರೆ ಕಾಮಗಾರಿ ಆರಂಭಿಸುತ್ತೇವೆ. ಇಲ್ಲದೇ ಹೋದರೆ ಕಾಮಗಾರಿ ಸ್ಥಗಿತಗೊಳಿಸಿ ಜೆಎಂಸಿ ವರದಿ ಕೊಟ್ಟ ನಂತರ ಆರಂಭಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಚನ್ನಬಸಪ್ಪ ಸಿಂಧೂರ, ಬಸನಗೌಡ ಬಿರಾದಾರ, ಹಣಮಂತ ಮುರಾಳ, ದಾವಲಸಾಬ ನದಾಫ್, ಶಿವಪ್ಪ ಮುರಾಳ, ಸಂಗಪ್ಪ ಪಡಸಲಗಿ, ರಾಜೇಸಾಬ ವಾಲೀಕಾರ, ಚಂದ್ರಶೇಖರ ಸಿಂಧೂರ, ಪರಮಾನಂದ ದೊಡಮನಿ, ಸಿದ್ದಪ್ಪ ಸುಂಟ್ಯಾಣ ಇದ್ದರು.