ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಸಮಯ ಮೀಸಲಿಡಬೇಕು. ಪಾಠಗಳಲ್ಲಿ ಕ್ಲಿಷ್ಟವೆನಿಸಿದ ಅಂಶಗಳಿಗೆ ಉಪನ್ಯಾಸಕರಿಂದ ಪರಿಹಾರ ಕಂಡುಕೊಳ್ಳಬೇಕು. ಸ್ಪರ್ಧಾ ಜಗತ್ತನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಸಿದ್ದತೆಯಲ್ಲಿ ತೊಡಗಿಕೊಳ್ಳಬೇಕು ಎಂದು ಭೈರವಾಡಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಬಿ.ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ನಿರ್ದಿಷ್ಟ ಗುರಿಯೊಂದಿಗೆ ನಿರಂತರ ಪ್ರಯತ್ನದಿಂದ ಯಶಸ್ಸು ಕಾಣಬಹುದು ಎಂದು ಹೇಳಿದರು.
ಉಪಪ್ರಾಚಾರ್ಯ ರಮೇಶ ಪೂಜಾರಿ ಮಾತನಾಡಿ, ಶಿಕ್ಷಕರು ಪ್ರಾಮಾಣಿಕವಾಗಿ ಬೋಧನೆಯಲ್ಲಿ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳು ನಿಷ್ಠೆಯಿಂದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಅದು ಬದುಕಿನುದ್ದಕ್ಕೂ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶೇಖರ ಗೊಳಸಂಗಿ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕರಾದ ಜಿ.ಎಸ್.ಡೊಮನಾಳ, ಶಶಿ.ಎನ್, ಮಲ್ಲಮ್ಮ ಮಾಲಿಪಾಟೀಲ, ವಿದ್ಯಾರ್ಥಿನಿಯರಾದ ಸಾವಿತ್ರಿ ಗಬ್ಬೂರ, ಗಂಗೂಬಾಯಿ ಜಾಧವ, ಭಾಗ್ಯಶ್ರೀ ಜುಗತಿ ಮಾತನಾಡಿದರು. ಗ್ರಂಥಪಾಲಕಿ ಮಹಾನಂದಾ ನಾಯಕ ವರದಿ ವಾಚನ ಮಾಡಿದರು.
ಉಪನ್ಯಾಸಕರಾದ ಲಾಲು ರಾಠೋಡ, ಎಸ್.ಎಸ್.ಸಜ್ಜನ, ಮಲ್ಲಿಕಾರ್ಜುನ ಹೂಗಾರ, ಎಚ್.ಡಿ.ಬಿರಾದಾರ, ಕಾಶೀನಾಥ ಅವಟಿ, ಅನಿಲ ಹೊಸಂಗಡಿ, ಅಪ್ಪಯ್ಯ ಹಿರೇಮಠ, ಶೈಲಾ ಅರಕೇರಿ ಇದ್ದರು.
ಎಚ್.ಎ.ದೇಶಪಾಂಡೆ ಸ್ವಾಗತಿಸಿದರು. ಪ್ರಕಾಶ ಮಸಬಿನಾಳ ನಿರೂಪಿಸಿದರು. ರಾಜಕುಮಾರ ಮುರಗೋಡ ವಂದಿಸಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.