ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇಶದ ಬೆಳವಣಿಗೆಯಲ್ಲಿ ಶಿಕ್ಷಣದ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಅಗತ್ಯವಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ವಿಶ್ವಗುರು ಶಿಕ್ಷಣ ಸಂಸ್ಥೆಯ ಬಸವ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವದಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಬಸವ ರಂಗೋತ್ಸವ-002ದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಿದರೆ ಅವರು ಪ್ರಬುದ್ಧ ನಾಗರಿಕರಾಗಲು ಸಾಧ್ಯವಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ಭಾಗದ ಮಕ್ಕಳಿಗೆ ವಿದ್ಯಾಕಾಶಿ ಧಾರವಾಡದಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಸಿಗುವಂತಾಗಲೆಂಬ ಉದ್ದೇಶದಿಂದ ಈ ಸಂಸ್ಥೆಯು ಉತ್ತಮ ಬೋಧಕರನ್ನು ಬೇರೆಡೆಯಿಂದ ಕರೆಯಿಸಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸುವ ಕೈಂಕರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಈ ಸಂಸ್ಥೆಯು ಇನ್ನೂ ಅಂಬೆಗಾಲು ಇಡುತ್ತಿದೆ. ಇದಕ್ಕೆ ಎಲ್ಲ ಹಿರಿಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಪೋಷಿಸಬೇಕು. ಈ ಸಂಸ್ಥೆಯು ಶತಮಾನೋತ್ಸವ ಆಚರಿಸುವಂತಾಗಲೆಂದರು.
ಹಾಸ್ಯಕಲಾವಿದೆ ಇಂದುಮತಿ ಸಾಲಿಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಕ್ಕಾಗಿ ಇಂಗ್ಲೀಷ ಭಾಷೆ ಕಲಿಯುವಂತಾಗಬೇಕು. ನಿತ್ಯ ಜೀವನದಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. ಇಂದು ಮಕ್ಕಳು ಬಹಳ ಪ್ರತಿಭಾವಂತರಿದ್ದು. ಪ್ರತಿಭೆ ಯಾರ ಸ್ವತ್ತು ಅಲ್ಲ. ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕಿದೆ. ಇನ್ನೊಂದೆಡೆ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗುತ್ತಿರುವದು ವಿಷಾದಕರ ಸಂಗತಿ. ಇದನ್ನು ತಪ್ಪಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು.
ಯುವಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಯಾವುದೇ ದುಶ್ಚಟಗಳಿಗೆ ದಾಸರಾಗದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಡಾಂಬಿಕತನ ಇರಬಾರದು. ನೈಜತೆಯಿಂದ ಜೀವನ ಸಾಗಿಸುವಂತಾಗಬೇಕು. ದಿಟ್ಟತನದಿಂದ ಜೀವನ ಸಾಗಿಸಬೇಕೆಂದು ಹೇಳಿದ ಅವರು ಲಿಂ.ಸಿದ್ದೇಶ್ವರ ಸ್ವಾಮೀಜಿಯವರ ಧ್ವನಿಯಲ್ಲಿ ಸಂದೇಶ ನೀಡುವ ಜೊತೆಗೆ ಡಾ.ರಾಜಕುಮಾರ ಅವರ ಧ್ವನಿಯಲ್ಲಿ ಹಾಡು, ಕೆಲವು ಹಾಸ್ಯ ಚಟಾಕಿಗಳನ್ನು ಹೇಳುವ ಮೂಲಕ ಜನರ ಮನರಂಜಿಸಿದರು.
ವಿಶ್ವಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವೈ.ಬೀರಲದಿನ್ನಿ ಮಾತನಾಡಿ, ನಾವು ನಮ್ಮ ಸಂಸ್ಥೆಯಿಂದ ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ಪ್ರಗತಿಗೆ ಶ್ರೀಗಳು, ಅನೇಕ ಹಿರಿಯರ ಮಾರ್ಗದರ್ಶನ, ಸಲಹೆ-ಸೂಚನೆ ಸದಾ ಇರುವದರಿಂದಾಗಿ ಸಂಸ್ಥೆಯು ಬೆಳೆಯುತ್ತಿದೆ ಎಂದರು.
ವೇದಿಕೆಯಲ್ಲಿ ನಿವೃತ್ತ ಉಪಪ್ರಾಚಾರ್ಯ ಎಸ್.ಎಸ್.ಝಳಕಿ, ನಿವೃತ್ತ ಶಾಲಾ ತಪಸಾಣಾಧಿಕಾರಿ ಎಫ್.ಡಿ.ಮೇಟಿ, ನಿವೃತ್ತ ಶಿಕ್ಷಕ ಎಸ್.ಬಿ.ಬಶೆಟ್ಟಿ, ನಿವೃತ್ತ ಉಪನ್ಯಾಸಕ ಎಚ್.ಎಸ್.ಬಿರಾದರ, ನಿವೃತ್ತ ಮುಖ್ಯಶಿಕ್ಷಕ ಎಸ್.ಎಂ.ಸಿಂದಗಿ, ಶಿಕ್ಷಣ ಇಲಾಖೆಯ ಎ.ಎಸ್.ಗುಬ್ಬಾ, ಎಂ.ವ್ಹಿ.ಗಬ್ಬೂರ, ಬಿ.ಎಸ್.ಚನ್ನಗೊಂಡ, ಸಂಸ್ಥೆಯ ಸಂಗಯ್ಯ ಹಿರೇಮಠ, ರಾಘವೇಂದ್ರ ಚಿಕ್ಕೊಂಡ, ಪ್ರಕಾಶ ಮಸಬಿನಾಳ ಇತರರು ಇದ್ದರು. ಆರಾಧ್ಯ ಪಾಂಡೆ ಸ್ವಾಗತಿಸಿದರು. ಅಜಯ ಮಠ ವರದಿ ವಾಚಿಸಿದರು. ಜ್ಯೋತಿ ಕೊಟ್ಲಿ, ಸಲೀಮಾ ಮುಜಾವರ ನಿರೂಪಿಸಿದರು. ಪೂಜಾ ನರೂಟಿ ವಂದಿಸಿದರು.
ಆರಂಭದಲ್ಲಿ ಈಚೆಗೆ ಲಿಂಗೈಕ್ಯರಾದ ಮುರುಘೇಂದ್ರ ಸ್ವಾಮೀಜಿಯವರಿಗೆ ಮೌನಾಚರಣೆ ಮಾಡುವ ಮೂಲಕ ಭಕ್ತಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಇಂದುಮತಿ ಸಾಲಿಮಠ ಅವರನ್ನು ಪ್ರತಿಭಾ ಪಾಟೀಲ, ದಿವ್ಯಾ ಚಿಕ್ಕೊಂಡ, ರೂಪಾ ಹಿರೇಮಠ, ಭಾವನಾ ಮಸಬಿನಾಳ ಸನ್ಮಾನಿಸಿದರು. ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿಗಳಿಂದ ತಡರಾತ್ರಿಯವರೆಗೂ ಜರುಗಿತು.